ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1ನೇ ತರಗತಿಯಿಂದ ಶಾಲೆ ಪುನರಾರಂಭ: ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದ ಬಿಇಒ

ಸಂಭ್ರಮದಿಂದ ಶಾಲೆಗೆ ಬಂದ ಮಕ್ಕಳು
Last Updated 25 ಅಕ್ಟೋಬರ್ 2021, 13:26 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಾದ್ಯಂತ ಸೋಮವಾರ 1ರಿಂದ 5ನೇ ತರಗತಿಯವರೆಗೆ ಭೌತಿಕ ತರಗತಿಗಳು ಪುನರಾರಂಭಗೊಂಡಿದ್ದು, ಕೊರೊನಾ ವೈರಾಣು ಭಯದಿಂದ ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲಿ ಉಳಿದಿದ್ದ ಮಕ್ಕಳು ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದರು.

ಜಿಲ್ಲೆಯಲ್ಲಿ 1981 ಪ್ರಾಥಮಿಕ ಶಾಲೆಗಳಿದ್ದು, ಈ ಪೈಕಿ 453 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. 1.46 ಲಕ್ಷ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದು, ಈ ವರ್ಷ ನಿಗದಿತ ಪ್ರವೇಶ ಸಂಖ್ಯೆಗಿಂತ 9500 ಮಕ್ಕಳ ಸಂಖ್ಯೆ ಹೆಚ್ಚು ದಾಖಲಾಗಿವೆ. ಕೊರೊನಾ ಕಾರಣದಿಂದ ಭೌತಿಕ ತರಗತಿಯಿಂದ ದೂರ ಉಳಿದು ಆನ್‍ಲೈನ್ ತರಗತಿಗಳಲ್ಲಿ ಮಗ್ನವಾಗಿದ್ದ ಮಕ್ಕಳು ಶಾಲೆಗಳಿಗೆ ಮರಳಿದ್ದಾರೆ.

ಸರ್ಕಾರಿ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಮಕ್ಕಳ ಕಲರವವಿತ್ತು. ತೋಟದ ಯಲ್ಲಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿದಾಗ ಶಾಲಾ ಆವರಣದಲ್ಲಿ ಹಬ್ಬದ ಸಂಭ್ರಮ ಕಂಡುಬಂದಿತು. ಶಿಕ್ಷಕರು ಶಾಲೆಯನ್ನು ಬಣ್ಣ ಬಣ್ಣದ ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಇದೇ ಮಾದರಿಯಲ್ಲಿ ನೆಲೋಗಲ್ಲ ತಾಂಡದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ಶಿಕ್ಷಕರು ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸುತ್ತಿರುವುದು ಕಂಡುಬಂದಿತು. ಕೆಲವು ಶಾಲೆಗಳಲ್ಲಿ ಸರಸ್ವತಿ- ಗಣೇಶ ಭಾವಚಿತ್ರಗಳಿಗೆ ಪೂಜೆ ಮಾಡಿ ಸರಸ್ವತಿ ಮತ್ತು ಗಣೇಶ ಸ್ತೋತ್ರಗಳನ್ನು ಮಕ್ಕಳು ಹೇಳುವ ಮೂಲಕ ಶಾಲೆ ಆರಂಭಕ್ಕೆ ಮುನ್ನಡಿ ಹಾಡಿದರು.

ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮಗಳ ಪಾಲನೆಗೆ ಆದ್ಯತೆ ನೀಡಲಾಗಿತ್ತು. ಥರ್ಮಲ್ ಸ್ಕ್ರೀನಿಂಗ್ ಮಾಡಿ ಮಕ್ಕಳನ್ನು ತಪಾಸಣೆ ಮಾಡಲಾಯಿತು. ಪರಸ್ಪರ ಅಂತರಕ್ಕಾಗಿ ಶಾಲಾ ಆವರಣದಲ್ಲಿ ಮಾರ್ಕಿಂಗ್ ವ್ಯವಸ್ಥೆ, ಸ್ಯಾನಿಟೈಸರ್ ವ್ಯವಸ್ಥೆ, ಮಕ್ಕಳಿಗೆ ಮಾಸ್ಕ್ ಧರಿಸಲು ಶಿಕ್ಷಕರು ಸೂಚನೆ ನೀಡುತ್ತಿರುವುದು ಕಂಡುಬಂದಿತು.

ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ ಕಲ್ಪಿಸಲಾಯಿತು. ನ.2ರವರೆಗೆ ಮಧ್ಯಾಹ್ನದ ವರೆಗೆ ತರಗತಿ ನಡೆಯಲಿವೆ. ನಂತರದ ದಿನಗಳಲ್ಲಿ ಪೂರ್ಣಾವಧಿಯ ತರಗತಿಗಳು ಹಾಗೂ ಈ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪ್ರಾರಂಭವಾಗಲಿದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT