ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಸಭಾವಿಯ ಕಾವ್ಯಶ್ರೀ ‘ಯುವ ವಿಜ್ಞಾನಿ’

ಮಕ್ಕಳಲ್ಲಿ ಸಂಶೋಧಕ ಮನೋಭಾವ ಬೆಳೆಸಲು ಡಿಡಿಪಿಐ ಅಂದಾನಪ್ಪ ವಡಗೇರಿ ಸಲಹೆ
Last Updated 7 ಜುಲೈ 2018, 13:32 IST
ಅಕ್ಷರ ಗಾತ್ರ

ಹಾವೇರಿ:ಹಿರೇಕೆರೂರ ತಾಲ್ಲೂಕಿನ ಹಂಸಭಾವಿ ಗ್ರಾಮದ ಎನ್‌.ಎಂ.ಡಿ. ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕಾವ್ಯಶ್ರೀ ಆರ್‌.ಅತ್ತಿಗಟ್ಟಿ ‘ಜಿಲ್ಲಾ ಮಟ್ಟದ ಯುವ ವಿಜ್ಞಾನಿ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಇದೇ ಶಾಲೆಯ ಕಾವ್ಯ ಬಣಕಾರ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಯ ದ್ವಿತೀಯ ಸ್ಥಾನಕ್ಕೆ ಪಾತ್ರರಾದರು. ತೃತೀಯ ಸ್ಥಾನವನ್ನು ಸವಣೂರ ತಾಲ್ಲೂಕಿನ ಹೂವಿನಶಿಗ್ಲಿ ಗ್ರಾಮದ ಆರ್‌.ಎಚ್‌.ಎಸ್‌. ಶಾಲೆಯ ಬಸಮ್ಮ ಗಡ್ಡೆಣ್ಣನವರ ಪಡೆದರು. ವಿಜೇತರಿಗೆ ಕ್ರಮವಾಗಿ ₹5, ₹3 ಮತ್ತು ₹2 ಸಾವಿರ ನಗದು ಬಹುಮಾನ ನೀಡಲಾಯಿತು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಹುಕ್ಕೇರಿಮಠದ ಶ್ರೀ ಶಿವಬಸವೇಶ್ವರ ಪ್ರೌಢ ಶಾಲೆಯಲ್ಲಿ ಶನಿವಾರ ‌ಆಯೋಜಿಸಲಾದ ‘ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ‍ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

‘ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಸಂಶೋಧಕ ಮನೋಭಾವವನ್ನು ಶಿಕ್ಷಕರು ಬೆಳೆಸಬೇಕು’ ಎಂದು ಸಮಾರಂಭದಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ)ಅಂದಾನಪ್ಪ ವಡಗೇರಿ ಹೇಳಿದರು.

ಶಿಕ್ಷಕರು ಮಕ್ಕಳ ಮೇಲೆ ಯಾವುದೇ ಒತ್ತಡ ಹೇರಬಾರದು. ಅವರ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅವರಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಯುವ ರೀತಿಯ ವಾತಾವರಣ ನಿರ್ಮಿಸಬೇಕು ಎಂದರು.

ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರು ಶ್ರಮಪಟ್ಟರೆ ಫಲ ಖಂಡಿತ ದೊರಕುವುದು ಎಂಬುದಕ್ಕೆ ‘ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ’ಗಳನ್ನು ಹಂಸಭಾವಿ ಗ್ರಾಮದ ಒಂದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪಡೆದಿರುವುದೇ ಉತ್ತಮ ನಿದರ್ಶನ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಬಿ.ಹಿರೇಮಠ ಮಾತನಾಡಿ, ನಮ್ಮ ಮೂಲ ಪರಿಸರವೇ ವಿಜ್ಞಾನ. ವಿದ್ಯಾರ್ಥಿಗಳಿಗೆ ಮೊದಲು ನಮ್ಮ ಪರಿಸರ ಬಗ್ಗೆ ಅರಿವನ್ನು ಮೂಡಿಸಬೇಕು ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳು ಇಂದು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕಾಗಿದೆ. ಎಸ್‌ಎಸ್‌ಎಲ್‌ಸಿ ಬಳಿಕ ವಿಜ್ಞಾನ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಎಂಜಿನಿಯರಿಂಗ್, ವೈದ್ಯಕೀಯ ಅಧ್ಯಯನ ಮಾಡುತ್ತಿದ್ದು, ವಿಜ್ಞಾನ ಶಿಕ್ಷಕರ ಕೊರತೆಯನ್ನು ಎದುರಿಸಬೇಕಾಗಿ ಬಂದಿದೆ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ರಾಜ್ಯ ಘಟಕದ ಸದಸ್ಯ ಆರ್‌.ಎಸ್‌.ಪಾಟೀಲ, ಮುಖ್ಯೋಪಾಧ್ಯಾಯರಾದ ಎಸ್‌.ಜೆ.ಜಾಗಟಗೇರಿ, ಎಸ್‌.ಜಿ.ಚರಂತಿಮಠ, ವಿಷಯ ಪರಿವೀಕ್ಷಕ ಎಸ್‌.ಪಿ.ಮೂಡಲದಮಠ, ಎಸ್‌.ಜಿ.ಕೋಟೆ, ಮುಖಂಡ ಎಂ.ಎಸ್‌.ಕೋರಿಶೆಟ್ಟರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT