ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ನಾಳೆ ಅಮಿತ್ ಶಾ ಭೇಟಿ

ಪರಿಶಿಷ್ಟ ಪಂಗಡ ಸಮಾವೇಶ, ನವಶಕ್ತಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿ
Last Updated 29 ಮಾರ್ಚ್ 2018, 8:13 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲೆಗೆ ಮಾರ್ಚ್ 30ರಂದು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡುತ್ತಿದ್ದು, ಅವರನ್ನು ಸ್ವಾಗತಿಸಲು ಜಿಲ್ಲಾ ಬಿಜೆಪಿ ಘಟಕದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದು ಪಕ್ಷದ ರಾಜ್ಯ ಪರಿಶಿಷ್ಟ ಪಂಗಡ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ ಹೇಳಿದರು.

‘ಅಂದು ಮಧ್ಯಾಹ್ನ 2 ಗಂಟೆಗೆ ಕೊಳ್ಳೇಗಾಲದ ನ್ಯಾಷನಲ್‌ ಸ್ಕೂಲ್‌ ಮೈದಾನದಲ್ಲಿ ನವಶಕ್ತಿ ಸಮಾವೇಶ ಹಾಗೂ 3.30ಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಪರಿಶಿಷ್ಟ ಪಂಗಡ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಮಿತ್ ಶಾ ಅವರೊಂದಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಸಂಸದ ಸದಾನಂದಗೌಡ ಸೇರಿದಂತೆ ಹಲವು ಕೇಂದ್ರ ಸಚಿವರು ಹಾಗೂ ರಾಜ್ಯದ ವರಿಷ್ಠರು ಬರಲಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕು ಸೇರಿದಂತೆ ನಂಜನಗೂಡು, ಎಚ್.ಡಿ.ಕೋಟೆ, ವರುಣಾ, ತಿ.ನರಸೀಪುರದಿಂದ 35,000ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವಿವರಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಸಲಹೆ, ಸೂಚನೆಯಂತೆ ಕಾರ್ಯಕ್ರಮದ ಸಿದ್ಧತೆ ಕೈಗೊಳ್ಳಲಾಗಿದೆ. ಕೊಳ್ಳೇಗಾಲದಲ್ಲಿ ನವಶಕ್ತಿ ಸಮಾವೇಶ ನಡೆಯಲಿದ್ದು, ಕೊಳ್ಳೇಗಾಲ ಮತ್ತು ಹನೂರು ಭಾಗದ ಪ್ರತಿ ಬೂತ್‌ನಿಂದಲೂ ತಲಾ 9 ಜನರನ್ನು ಒಳಗೊಂಡ ಒಟ್ಟು 2,500 ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಕುರಿತು ಸಮಾವೇಶ ನಡೆಸಲಿದ್ದಾರೆ ಎಂದರು.

ಮುಖಂಡ ಸಿದ್ದರಾಜು ಮಾತನಾಡಿ, ‘ಮಾರ್ಚ್ 21 ನಾಯಕ ಸಮುದಾಯದ ಜನರಿಗೆ ಐತಿಹಾಸಿಕ ದಿನವಾಗಿದೆ. ಅಂದು ಕೇಂದ್ರ ಸರ್ಕಾರ ಪರಿವಾರ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮೂಲಕ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ. ಹಾಗಾಗಿ, ಸಮುದಾಯದ ಯುವಕರು ಪ್ರತಿ ಮನೆಗೆ 5 ಧನ್ಯವಾದ ಪತ್ರವನ್ನು ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಪ್ರಧಾನ ಕಾರ್ಯದರ್ಶಿ ನೂರೊಂದು ಶೆಟ್ಟಿ ಹಾಜರಿದ್ದರು.

ಶಾ ಭೇಟಿ ವಿವರ

* ಮಧ್ಯಾಹ್ನ 2ಕ್ಕೆ ಕೊಳ್ಳೇಗಾಲದ ನ್ಯಾಷನಲ್‌ ಸ್ಕೂಲ್‌ನಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬರುವುದು

* 2.15ರಿಂದ 3 ಗಂಟೆವರೆಗೆ ನವಶಕ್ತಿ ಸಮಾವೇಶ– ಕಾರ್ಯಕರ್ತರೊಂದಿಗೆ ಸಂವಾದಲ್ಲಿ ಭಾಗಿ

* 3.15ಕ್ಕೆ ಚಾಮರಾಜನಗರ ಸಮೀಪದ ಯಡಪುರ ಗ್ರಾಮದ ಬಳಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬರುವುದು

* 3.30ರಿಂದ 4.30ರವರೆಗೆ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರಿಡಾಂಗಣದಲ್ಲಿ ಪರಿಶಿಷ್ಟ ಪಂಗಡದ ಸಮಾವೇಶದಲ್ಲಿ ಭಾಗಿ

* ನಂತರ ಮೈಸೂರಿನತ್ತ ಪಯಣ

ಜನಸಾಮಾನ್ಯರಿಗೆ ಪ್ರವೇಶ ಇಲ್ಲ!

ಕೊಳ್ಳೇಗಾಲದಲ್ಲಿ ಮಾರ್ಚ್ 30ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ನಡೆಯುವ ನವಶಕ್ತಿ ಸಮಾವೇಶಕ್ಕೆ ಸಾಮಾನ್ಯ ಜನರಿಗೆ ಪ್ರವೇಶ ಕಲ್ಪಿಸಿಲ್ಲ. ಮಧ್ಯಾಹ್ನ 3.30ಕ್ಕೆ  ಚಾಮರಾಜನಗರದಲ್ಲಿ ನಡೆಯುವ ಪರಿಶಿಷ್ಟ ಪಂಗಡದ ಸಮಾವೇಶದಲ್ಲಿ ಭಾಗವಹಿಸಲು ಜನಸಾಮಾನ್ಯರಿಗೆ ಅವಕಾಶ ನೀಡಲಾಗಿದೆ.

ಕೇವಲ ಕೊಳ್ಳೇಗಾಲ ಮತ್ತು ಹನೂರು ಕ್ಷೇತ್ರದ ಪ್ರತಿ ಬೂತ್‌ನಿಂದ ಆಯ್ದ 9 ಜನರಷ್ಟೇ ಇಲ್ಲಿ ಭಾಗವಹಿಸುತ್ತಾರೆ. ಇವರಿಗೆ ವಿಶೇಷವಾದ ಗುರುತಿನ ಚೀಟಿ ಮತ್ತು ಬ್ಯಾಡ್ಜ್‌ ನೀಡಲಾಗುತ್ತದೆ. ಇದನ್ನು ಹೊಂದಿದವರಿಗಷ್ಟೇ ಅಮಿತ್‌ ಶಾ ಅವರೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪರಿಶಿಷ್ಟ ಪಂಗಡ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT