ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಗ್ರಾಮ ಪಂಚಾಯಿತಿ ಎರಡನೇ ಹಂತದಲ್ಲಿ ಶೇ 85ರಷ್ಟು ಮತದಾನ

ನಾಲ್ಕು ತಾಲ್ಲೂಕುಗಳಲ್ಲಿ ಶಾಂತಿಯುತ ಚುನಾವಣೆ: 4969 ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರ
Last Updated 27 ಡಿಸೆಂಬರ್ 2020, 15:24 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ನಾಲ್ಕು ತಾಲ್ಲೂಕುಗಳ 105 ಗ್ರಾಮ ಪಂಚಾಯಿತಿಗಳ 1386 ಸ್ಥಾನಗಳಿಗೆ ಭಾನುವಾರ ನಡೆದ ಎರಡನೇ ಹಂತದ ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆಯು ಶಾಂತಿಯುತವಾಗಿ ನಡೆದು, ಶೇ 85.13 ಮತದಾನವಾಯಿತು.

ಬ್ಯಾಡಗಿ, ಹಾನಗಲ್‌, ಸವಣೂರ, ಶಿಗ್ಗಾವಿ ಈ ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯಲ್ಲಿ 1461 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಈ ಪೈಕಿ 75 ಸ್ಥಾನಗಳಿಗೆ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಉಳಿದ 1386 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಹಾನಗಲ್‌ ತಾಲ್ಲೂಕಿನ 39 ಗ್ರಾಮ ಪಂಚಾಯಿತಿಗಳಲ್ಲಿ 255 ಮತಗಟ್ಟೆಗಳು, ಶಿಗ್ಗಾವಿ ತಾಲ್ಲೂಕಿನ 27 ಗ್ರಾ.ಪಂ.ಗಳಲ್ಲಿ 150 ಮತಗಟ್ಟೆಗಳು, ಸವಣೂರ ತಾಲ್ಲೂಕಿನ 21 ಗ್ರಾ.ಪಂ.ಗಳಲ್ಲಿ 140 ಮತಗಟ್ಟೆಗಳು ಹಾಗೂ ಬ್ಯಾಡಗಿ ತಾಲ್ಲೂಕಿನ 18 ಗ್ರಾ.ಪಂ.ಗಳಲ್ಲಿ 106 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.

ಮೊದಲ ಹಂತದ ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕುಗಳಲ್ಲಿ ಶೇ 84.01ರಷ್ಟು ಮತದಾನವಾಗಿತ್ತು. ಈ ಬಾರಿ ಶೇ 85.13ರಷ್ಟು ಉತ್ತಮ ಮತದಾನ ದಾಖಲಾಯಿತು.

ಬೆಳಿಗ್ಗೆ 7ಕ್ಕೆ ಚುನಾವಣಾ ಸಿಬ್ಬಂದಿ ಮತಗಟ್ಟೆಗಳನ್ನು ತೆರೆದರೂ, ಬೆಳಿಗ್ಗೆ 9ರವರೆಗೂ ಮತದಾರರು ಹೆಚ್ಚಾಗಿ ಮತಗಟ್ಟೆಗಳತ್ತ ಧಾವಿಸಲಿಲ್ಲ. ಹೀಗಾಗಿ ನೀರಸ ಪ್ರತಿಕ್ರಿಯೆ ಕಂಡು ಬಂದಿತು.ಚುಮುಚುಮು ಚಳಿಯಲ್ಲಿ ಹಳ್ಳಿಕಟ್ಟೆ, ಟೀ ಅಂಗಡಿ, ಹೋಟೆಲ್‌ಗಳ ಮುಂದೆ ನೆರೆದಿದ್ದ ಜನರು ಚುನಾವಣೆಯ ಬಗ್ಗೆ ಬಿಸಿಬಿಸಿ ಚರ್ಚೆ ನಡೆಸುತ್ತಿದ್ದರು. ಅಭ್ಯರ್ಥಿಗಳು ಮತದಾರರಿಗೆ ಟೀ, ಮಿರ್ಚಿ ಬಜ್ಜಿ, ಬೋಂಡಾ, ಟಿಫನ್‌ ವ್ಯವಸ್ಥೆ ಮಾಡಿ ಓಲೈಸುತ್ತಿದ್ದ ದೃಶ್ಯ ಕಂಡು ಬಂದಿತು. ಮಹಿಳೆಯರು, ವೃದ್ಧರಿಗೆ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದರು.

ಮತದಾನ ಚುರುಕು:ಬೆಳಿಗ್ಗೆ 9ರ ವೇಳೆಗೆ ಶಿಗ್ಗಾವಿ ತಾಲ್ಲೂಕು– ಶೇ 8.11, ಸವಣೂರ ತಾಲ್ಲೂಕು– ಶೇ 7.06, ಹಾನಗಲ್‌ ತಾಲ್ಲೂಕು– ಶೇ 7.13 ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ಶೇ 7.52ರಷ್ಟು ಮತದಾನವಾಯಿತು. ಒಟ್ಟಾರೆ ಶೇ 7.40ರಷ್ಟು ಮಾತ್ರ ಮತದಾನವಾಗಿತ್ತು. ಬಿಸಿಲು ಏರುತ್ತಿದ್ದಂತೆ ಮತದಾನ ಪ್ರಕ್ರಿಯೆ ಕೂಡ ಚುರುಕುಗೊಂಡಿತು.

ಬೆಳಿಗ್ಗೆ 11 ಗಂಟೆಗೆ ನಾಲ್ಕು ತಾಲ್ಲೂಕುಗಳಲ್ಲಿ ಶೇ 22.57, ಮಧ್ಯಾಹ್ನ 1ರ ವೇಳೆಗೆ ಶೇ 45.09, ಮಧ್ಯಾಹ್ನ 3 ಗಂಟೆಗೆ ಶೇ 64.66ರಷ್ಟು ಮತದಾನವಾಯಿತು. ಮಧ್ಯಾಹ್ನ 3ರ ನಂತರ ಮತದಾನ ಅತ್ಯಂತ ವೇಗ ಪಡೆದುಕೊಂಡಿತು. ಹೀಗಾಗಿ ಸಂಜೆ 5 ಗಂಟೆಗೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಶೇ 85.13ರಷ್ಟು ಉತ್ತಮ ಮತದಾನವಾಯಿತು.

ಕೋವಿಡ್‌ ಮಾರ್ಗಸೂಚಿ:ಕೋವಿಡ್‌ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಬಂದ ಮತದಾರರು ಅಂತರ ಕಾಯ್ದುಕೊಂಡು ನಿಲ್ಲಲು ಚೌಕ ಮತ್ತು ವೃತ್ತಾಕಾರದ ಪಟ್ಟಿ ಬರೆಯಲಾಗಿತ್ತು. ಸರದಿಯಲ್ಲಿ ಬಂದ ಪ್ರತಿಯೊಬ್ಬ ಮತದಾರನ ಉಷ್ಣಾಂಶ ಪರೀಕ್ಷಿಸಿ, ಸ್ಯಾನಿಟೈಸರ್‌ ಹಾಕಿ ಮತಗಟ್ಟೆಗೆ ಪ್ರವೇಶ ನೀಡಲಾಗುತ್ತಿತ್ತು. ಮತದಾರರ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿಯನ್ನು ಚುನಾವಣಾ ಸಿಬ್ಬಂದಿ ಹಚ್ಚಿದರು.

ಗ್ರಾಮಗಳ ಮುಖ್ಯ ರಸ್ತೆ ಮತ್ತು ವೃತ್ತಗಳಲ್ಲಿ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ಜನರು ನಿಂತು ಚರ್ಚೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ಕೆಲವರು ಮಾತ್ರ ಮಾಸ್ಕ್‌ ಧರಿಸಿದ್ದರು. ಮತಗಟ್ಟೆಯ ಹೊರಭಾಗದಲ್ಲಿ ನಿಂತ ಅಭ್ಯರ್ಥಿಗಳು ಮತ್ತು ಮುಖಂಡರು ಮತ ಹಾಕುವಂತೆ ಮನವಿ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT