ಹಾವೇರಿಯಲ್ಲಿ ಕ್ರೀಡಾಕೂಟ: ಹಿರಿಯ ನಾಗರಿಕರ ಜೊತೆ ಓಲೇಕಾರ ಓಟ

7

ಹಾವೇರಿಯಲ್ಲಿ ಕ್ರೀಡಾಕೂಟ: ಹಿರಿಯ ನಾಗರಿಕರ ಜೊತೆ ಓಲೇಕಾರ ಓಟ

Published:
Updated:
Deccan Herald

ಹಾವೇರಿ: ನನಗೀಗ 62 ವರ್ಷ. ನಾನೂ ಹಿರಿಯ ನಾಗರಿಕ. ನಾನೂ ಓಡುತ್ತೇನೆ...
–ಹೀಗೆ ಅಲ್ಲಿ ಸೇರಿದ್ದ ಹಿರಿಯ ನಾಗರಿಕರನ್ನು ಹುರಿದುಂಬಿಸಿ, ಅವರ ಜೊತೆಯೇ ಓಡಿದವರು ಶಾಸಕ ನೆಹರು ಓಲೇಕಾರ. ಮೂರು ತಿಂಗಳ ಹಿಂದೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಗುರಿ ಮುಟ್ಟಿ ಶಾಸಕರಾಗಿದ್ದ ಅವರು, ಇಲ್ಲಿ ಮಾತ್ರ ನಸುನಗುತ್ತಲೇ ಅರ್ಧದಿಂದ ವಾಪಸ್ ಆದರು. ಆದರೆ, ಶಾಸಕರೇ ಪಾಲ್ಗೊಂಡ ಕಾರಣ ಇತರ ಹಿರಿಯರು ಸಂಭ್ರಮದಿಂದ ಓಡಿದರು.

ನಗರದ ಚನ್ನಬಸವೇಶ್ವರ ಮಾಗಾವಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ನಡೆದ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಂಡು ಬಂದ ಚಿತ್ರಣ.

ಇದಕ್ಕೂ ಮೊದಲು ಶಾಸಕರು, ಗುಂಡು ಎಸೆಯುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾನಸಿಕವಾಗಿ ಮತ್ತು ದೈಹಿಕವಾಗಿ ಲವಲವಿಕೆಯಿಂದ ಇರಲು ಕ್ರೀಡೆ ಅವಶ್ಯಕ ಎಂದರು.

ಯುವಕ, ಯುವತಿಯರು, ವಯಸ್ಕರೆಲ್ಲ ನಾಚುವಂತೆ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಹಿರಿಯರು ಕ್ರೀಡಾಸ್ಪೂರ್ತಿ ಮೆರೆದರು. 60 ವರ್ಷ, 70 ವರ್ಷ, 80 ವರ್ಷ ಎಂಬುದನ್ನೂ ಲೆಕ್ಕಿಸಿದೇ ಪಾಲ್ಗೊಂಡರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್‌. ಪಿ. ಅಣ್ಣಿಗೇರಿ ಮಾತನಾಡಿ, ಸುಖ ದುಖವನ್ನು ಹಂಚಿಕೊಂಡು ನೆಮ್ಮದಿ ಗಳಿಸುವುದಕ್ಕಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೊಜಿಸಲಾಗಿದೆ. ಎಲ್ಲರೂ ಸಂಭ್ರಮದಿಂದ ಆಟವಾಡಿ ಎಂದರು.

ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಮಾತನಾಡಿ, ಅ.1 ರಂದು ರಾಜ್ಯಮಟ್ಟದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಗುತ್ತದೆ. ಅದರ ಅಂಗವಾಗಿ ಎಲ್ಲ ಜಿಲ್ಲೆಗಳಲ್ಲೂ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯು ಕಳೆದ ಎರಡು ವರ್ಷದ ಹಿಂದೆ ಸಮಗ್ರ ಪ್ರಶಸ್ತಿಯನ್ನು ಪಡೆದಿತ್ತು. ಈ ಬಾರಿಯೂ ಸಮಗ್ರ ಪ್ರಶಸ್ತಿಯ ಗುರಿ ಇದೆ ಎಂದರು.

ನಾಗರಾಜ ಜೋಗಿ, ಹಾಲಪ್ಪ ಬೆಳಗಾವಿ, ಸಿದ್ದುಮತಿ ಯಲವಿಗಿಮಠ, ಎಂ. ಎಫ್‌. ಇಂಗಳಗಿ ಮತ್ತಿತರರು ತತ್ವಪದ, ಸೋಬಾನಪದ, ಗೀಗೀ ಪದ, ಏಕಪಾತ್ರಾಭಿನಯ ಮತ್ತು ಯಕ್ಷಗಾನದ ಸನ್ನಿವೇಶಗಳನ್ನು ಹಾಡುವ ಹಾಗೂ ಅಭಿನಯಿಸುವ ಮೂಲಕ ಮನೋರಂಜನೆ ನೀಡಿದರು.

ಮುಖಂಡರಾದ ರಾಜಣ್ಣ ಶಿವಪುರ, ನಗರಸಭೆ ಸದಸ್ಯೆ ಕವಿತಾ ಯಲವಿಗಿಮಠ, ಎಸ್‌. ಎಂ ನವಲಿ, ಸಾವಳಗೆಪ್ಪನವರ ಮುತ್ತುರಾಜ ಮಾದರ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !