ಬುಧವಾರ, ಫೆಬ್ರವರಿ 19, 2020
30 °C
ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅಭಿಮತ

ಶಿಷ್ಯನ ಮನಸ್ಸನ್ನು ತೊಳೆಯುವವನೇ ಗುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಬಟ್ಟೆಯ ಕೊಳೆಯನ್ನು ತೊಳೆದು ಶುಚಿಗೊಳಿಸುವಂತೆ, ಗುರು ಜಂಗಮರು ಶಿಷ್ಯನ ಮನಸ್ಸನ್ನು ತೊಳೆದು ಉದ್ದರಿಸಬೇಕು. ಬಸವಣ್ಣನವರು ಮಡಿವಾಳ ಮಾಚಿದೇವರ ಕಾಯಕ ಶ್ರೇಷ್ಠತೆಯನ್ನು ಸಾರಿ ಹೇಳಿದ್ದಾರೆ’ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು. 

ನಗರದ ಹೊಸಮಠದಲ್ಲಿ ಏರ್ಪಡಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು. 

ಬಸವಣ್ಣನವರ ಮನೆ ಮಹಾಮನೆಯಾಗಿತ್ತು. ಮಹಾಮನೆಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿತ್ತು. ಜಾತಿ ಮತಗಳ ಜಾಢ್ಯವಿರಲಿಲ್ಲ. ಅಲ್ಲಿ ದೃಢಕಾಯದ ಎತ್ತರ ನಿಲುವಿನ ಶ್ಯಾಮಲ ವರ್ಣದ ಬಲಗೈಯಲ್ಲಿ ಖಡ್ಗಮ ಎಡಗೈಯಲ್ಲಿ ವೀರ ಗಂಟೆ ಹಿಡಿದ ದಿಟ್ಟ ಶರಣನೇ ಮಡಿವಾಳ ಮಾಚಯ್ಯ. ಮಹಾಮನೆಯ ಹಿರಿಯ ಚೇತನಗಳ ಬಟ್ಟೆಗಳನ್ನು ಶುಚಿಗೊಳಿಸುವುದು ಈತನ ಕಾಯಕವಾಗಿತ್ತು. ಕಾಯಕದಲ್ಲೇ ಕೈಲಾಸ ಕಂಡವರು ಮಾಚಿದೇವರು ಎಂದು ಬಣ್ಣಿಸಿದರು. 

‘ಈ ಜಗತ್ತಿನಲ್ಲಿ ಹೆಣ್ಣು, ಮಣ್ಣು, ಹೊನ್ನಿಗಾಗಿ ಸತ್ತು ಹುಟ್ಟಿ ಕೆಟ್ಟವರು ಅನೇಕರುಂಟು. ಆದರೆ ಶಿವಭಕ್ತರಾಗಿ ಏಕಲಿಂಗ ನಿಷ್ಠೆಯುಳ್ಳವರಾಗಿದ್ದರೆ ಆತನಿಗೆ ಈ ಜನ್ಮವೇ ಕಡೆಯದು. ಅದೇ ಮುಕ್ತಿ ಎಂದು ತಿಳಿಸಿದ್ದಾರೆ. ಮಾಚಯ್ಯ ಶರಣರಲ್ಲಿಯೇ ಧೀರ. ದಿಟ್ಟ ವ್ಯಕ್ತಿಯಾಗಿ ವಚನ ಸಾಹಿತ್ಯವನ್ನು ರಕ್ಷಿಸಿದವನು ಮಾಚಯ್ಯ. ಕಲ್ಯಾಣ ಕ್ರಾಂತಿಯ ಮುಂಚೂಣಿಯಲ್ಲಿ ನಿಂತು ಹೋರಾಡಿದ ವ್ಯಕ್ತಿ ಈತ’ ಎಂದು ಗುಣಗಾನ ಮಾಡಿದರು. 

ರಾಣೆಬೆನ್ನೂರಿನ ವಿರಕ್ತಮಠದ ಗುರುಬಸವ ಸ್ವಾಮೀಜಿ ನೇತೃತ್ವವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅವರನ್ನು ಸನ್ಮಾನಿಸಲಾಯಿತು. ವಕೀಲ ಪಿ.ಎಂ. ಬೆನ್ನೂರ್ ಉಪನ್ಯಾಸ ನೀಡಿದರು.

ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಮಡಿವಾಳರ, ಚಂದ್ರಶೇಖರ್‌ ಇದ್ದರು. ಇಂದೂಧರ ಯರೆಶಿಮಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಇಂಚಿಗೇರಿ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು