ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ವಾಹನ ಚಾಲಕರು ಮತ್ತು ಲೋಡರ್ಸ್ ಕಾರ್ಮಿಕರ 10 ತಿಂಗಳ ಬಾಕಿ ವೇತನ, 14 ತಿಂಗಳ ಪಿ.ಎಫ್ ಮತ್ತು ಇಎಸ್‌ಐ ಪಾವತಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಪುರಸಭೆಯ ಎದುರು ಪ್ರತಿಭಟನೆ ನಡೆಸಿದರು.
ಹೊರಗುತ್ತಿಗೆ ವಾಹನ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಪ್ಪ ಹೊಸಮನಿ ಮಾತನಾಡಿ, ‘ಹೊರಗುತ್ತಿಗೆ ವಾಹನ ಚಾಲಕರು ಮತ್ತು ಲೋಡರ್ ಸಿಬ್ಬಂದಿಯ ವೇತನವನ್ನು ಪ್ರತಿ ತಿಂಗಳು 5ನೇ ದಿನಾಂಕದೊಳಗೆ ಪಾವತಿಸಬೇಕೆಂದು ಸರ್ಕಾರದ ಆದೇಶವಿದ್ದರೂ ಸ್ಥಳೀಯ ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ವಾಹನ ಚಾಲಕರು ಮತ್ತು ಲೋಡರ್ ಸಿಬ್ಬಂದಿಗೆ ಕಳೆದ 10 ತಿಂಗಳಿಂದ ವೇತನ ಪಾವತಿಸಿಲ್ಲ. 14 ತಿಂಗಳ ಪಿ.ಎಫ್-ಇಎಸ್‌ಐ ಪಾವತಿಸಿಲ್ಲ.
ಈ ಬಗ್ಗೆ ಹಲವು ಬಾರಿ ಮುಖ್ಯಾಧಿಕಾರಿಗಳಿಗೆ ಮೌಖಿಕವಾಗಿ ಗಮನಕ್ಕೆ ತಂದಿದ್ದು, ಆದಾಗ್ಯೂ, ಈ ವರೆಗಿನ ವೇತನ ಪಾವತಿ ಮಾಡಿರುವುದಿಲ್ಲ. ಹೊರಗುತ್ತಿಗೆ ಕಾರ್ಮಿಕರು ಬಡವರಿದ್ದು, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದು ಜೀವನ ನಡೆಸಲು ತೀರಾ ತೊಂದರೆ ಆಗಿದೆ. ತಕ್ಷಣ ಗುತ್ತಿಗೆ ವಾಹನ ಚಾಲಕರ ಹಾಗೂ ಲೋಡರ್ಸ್‌ಗಳ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವರಾಜ್ ಕಟ್ಟಿಮನಿ, ಕಾರ್ಯದರ್ಶಿ ಗುರುನಾಥ್ ಅಡಿವೆಣ್ಣನವರ, ಖಜಾಂಚಿ ರಮೇಶ್ ಭೋವಿ ನೇತೃತ್ವ ವಹಿಸಿದ್ದರು. ಗುಡ್ಡಪ್ಪ ಫ. ಕಟ್ಟಿಮನಿ, ಹೊಣಕೇರಿಪ್ಪ ಹಾರೋಗೆರಿ, ಮಾಲತೇಶ ಗಿಡ್ಡನವರ, ನವೀನ ಕಟ್ಟಿಮನಿ, ರಾಜು ಕಟ್ಟಿಮನಿ, ಮಾಲತೇಶ ಕಟಗಿ, ಬಸವರಾಜ ತಳವಾರ, ಶಿವಪ್ಪ ಕಟ್ಟಿಮನಿ, ಧರ್ಮೇಂದ್ರ ಅಸುಂಡಿ, ಪ್ರಶಾಂತ ಮೂಲಿಗೌಡ್ರ, ನೀಲಪ್ಪ ಮಾದರ, ಮೈಲಾರಪ್ಪ ಬಡಿಗೇರ, ನಿಂಗಪ್ಪ ಮಾದರ, ನಾಗಪ್ಪ ಮಾದರ, ಸಂಗಪ್ಪ ದೊಡ್ಡಮನಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.