ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್‌ಗೆ ಸೀರೆ ಉಟ್ಟುಕೊಳ್ಳಲು ಬಂದ್ರಾ ಸಿದ್ದರಾಮಯ್ಯನವರೇ?; ಉದಾಸಿ

ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಂಸದ ಶಿವಕುಮಾರ ಉದಾಸಿ
Last Updated 19 ಅಕ್ಟೋಬರ್ 2021, 6:35 IST
ಅಕ್ಷರ ಗಾತ್ರ

ಹಾವೇರಿ: ‘ವಿರಾಟನಗರ’ ಎನಿಸಿರುವ ಹಾನಗಲ್‌ ಪಟ್ಟಣದ ಜನರು ಮೂರು ಲೋಕದ ಗಂಡು ಅರ್ಜುನನಿಗೇ ಸೀರೆ ಉಡಿಸಿದ್ದರು. ಸಿದ್ದರಾಮಯ್ಯನವರೇ ನೀವೂ ಸೀರೆ ಉಟ್ಟುಕೊಳ್ಳಲು ಹಾನಗಲ್‌ ಕ್ಷೇತ್ರಕ್ಕೆ ಬಂದ್ರಾ? ಎಂದು ಸಂಸದ ಶಿವಕುಮಾರ ಉದಾಸಿ ವ್ಯಂಗ್ಯವಾಡಿದರು.

ಹಾನಗಲ್‌ ಪಟ್ಟಣದಲ್ಲಿ ಭಾನುವಾರ ಬಿಜೆಪಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಹಾನಗಲ್‌ ಕ್ಷೇತ್ರದ ಜನರು ಜಾಣರಿದ್ದಾರೆ. ಅವರಿಗೆ ಯಾರನ್ನು ಮನೆಗೆ ಕಳುಹಿಸಬೇಕು, ಯಾರನ್ನು ವಿಧಾನಸೌಧಕ್ಕೆ ಕಳುಹಿಸಬೇಕು ಎಂದು ಚೆನ್ನಾಗಿ ಗೊತ್ತಿದೆ. ಕಡ್ಡಿನಾ ಗುಡ್ಡ ಮಾಡೋದೂ, ಸುಳ್ಳನ್ನು ಸತ್ಯ ಎಂದು ಕಾಂಗ್ರೆಸ್‌ ಪಕ್ಷದವರು ನಂಬಿಸುತ್ತಾರೆ. ಹಸಿಸುಳ್ಳು ಕಾಂಗ್ರೆಸ್‌ನವರ ಮನೆ ದೇವರು ಎಂದು ವಾಗ್ದಾಳಿ ನಡೆಸಿದರು.

ಸಂಗೂರು ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಸಿ.ಎಂ. ಉದಾಸಿ ಕುರಿತು ಸಿದ್ದರಾಮಯ್ಯ ಆಡಿದ ಮಾತು ನನಗೆ ಬಹಳ ನೋವಾಗಿದೆ. ಏನೂ ಆರೋಪ ಮಾಡಲು ಸಿಗಲಿಲ್ಲ ಎಂದು ಯಾರೋ ಚೀಟಿ ಬರೆದುಕೊಟ್ಟಿದ್ದನ್ನು ನಂಬಿ, ಸುಳ್ಳಿನ ಮಳೆ ಸುರಿಸಿದ್ದೀರಿ. ಮುಳುಗುತ್ತಿದ್ದ ಸಕ್ಕರೆ ಕಾರ್ಖಾನೆಯನ್ನು ಉಳಿಸಿದ್ದು ಸಿ.ಎಂ. ಉದಾಸಿ ಎಂಬುದು ನೆನಪಿರಲಿ ಎಂದು ತಿರುಗೇಟು ನೀಡಿದರು.

ನಿಂತು ಹೋಗಿರೋ ಬಸ್‌ ಹತ್ತುತ್ತೀರಾ?

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ,

ಹಾನಗಲ್‌ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆಗಳಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಯಾವ ಪ್ರಯೋಜನವಿದೆ ಎಂಬುದು ತಿಳಿಯುತ್ತಿಲ್ಲ. ಈ ಚುನಾವಣಾ ಫಲಿತಾಂಶದಿಂದ ರಾಜಕೀಯದಲ್ಲಿ ಯಾವ ಏರುಪೇರು ಆಗುವುದಿಲ್ಲ. ಕಾಂಗ್ರೆಸ್‌ ನಿಂತು ಹೋಗಿರೋ ಬಸ್‌ ಇದ್ದಂತೆ. ಓಡುತ್ತಿರುವ ಬಿಜೆಪಿ ಬಸ್‌ ಹತ್ತುತ್ತೀರೋ, ನಿಂತಿರುವ ಬಸ್‌ ಹತ್ತುತ್ತೀರೋ ನೀವೇ ತೀರ್ಮಾನಿಸಿ ಎಂದು ಚಟಾಕಿ ಹಾರಿಸಿದರು.

‘ಅಲ್ಪಸಂಖ್ಯಾತರ ಮೇಲಿನ ಪ್ರೀತಿ ಇದೇನಾ?’

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಕಾಂಗ್ರೆಸ್‌ ಪಕ್ಷದವರು ನಾವು ಅಲ್ಪಸಂಖ್ಯಾತರ ಪರ ಎಂದು ಸದಾ ಹೇಳಿಕೊಳ್ಳುತ್ತಾರೆ. ‘ಪಿಸುಮಾತು’ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಬಗ್ಗೆ ಲಘುವಾಗಿ ಮಾತನಾಡಿದ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಲೀಂ ಅಹಮದ್‌ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸುತ್ತಾರೆ. ಉಗ್ರಪ್ಪ ವಿರುದ್ಧ ಮಾತ್ರ ಕಠಿಣ ಕ್ರಮ ಕೈಗೊಳ್ಳುವುದಿಲ್ಲ. ನಿಮ್ಮ ಅಲ್ಪಸಂಖ್ಯಾತರ ಮೇಲಿನ ಪ್ರೀತಿ ಇದೇನಾ? ಎಂದು ತಿರುಗೇಟು ನೀಡಿದರು.

ರಾಜ್ಯವನ್ನು ದಿವಾಳಿ ಮಾಡಿ, ಖಾಲಿ ಖಜಾನೆ ಬಿಟ್ಟು ಹೋದ ಸಿದ್ದರಾಮಯ್ಯನವರೇ ನಿಮಗೆ ಮತ ಕೇಳುವ ನೈತಿಕತೆ ಎಲ್ಲಿದೆ? ನಿಮ್ಮ ದುರಾಡಳಿತದಿಂದಲೇ ನಾವು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದೆವು ಎಂದು ಜರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT