ಭಾನುವಾರ, ಆಗಸ್ಟ್ 9, 2020
22 °C
21 ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ; ತಂತ್ರಾಂಶ ಜ್ಞಾನ ಕಲಿಸಲು ಕಿವಿಮಾತು

ಸದ್ಯದಲ್ಲೇ ವಿನೂತನ ಶಿಕ್ಷಣ ನೀತಿ; ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಶಾಲೆಗೆ ಕೀರ್ತಿ ಬರಬೇಕೆಂದು ಮಕ್ಕಳನ್ನು ಪಾಸ್ ಮಾಡಿ ಕಳುಹಿಸಿದರೆ, ಅವರೆಲ್ಲ ನಿರುದ್ಯೋಗಿಗಳ ಪಟ್ಟಿ ಸೇರುತ್ತಾರೆ. ಅದೇ ತಂತ್ರಾಂಶದ ಜ್ಞಾನವನ್ನೂ ಕಲಿಸಿದರೆ ಅವರೇ ದೇಶ ಕಟ್ಟುತ್ತಾರೆ. ಅದೇ ನಿಟ್ಟಿನಲ್ಲಿ ಮಕ್ಕಳನ್ನು ಅಣಿಗೊಳಿಸಲು ವಿನೂತನ ಶಿಕ್ಷಣ ನೀತಿ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯ ಗುರುಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಶಿಕ್ಷಕರ ದಿನಾಚರಣೆ’‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬದಲಾಗುತ್ತಿರುವ ಕಾಲಮಾನ, ವೇಗ ಹಾಗೂ ತಂತ್ರಜ್ಞಾನಕ್ಕೆ ತಕ್ಕಂತೆ ಮಕ್ಕಳನ್ನು ಬೆಳೆಸಬೇಕಾಗಿದೆ. ಅದಕ್ಕಾಗಿ ಸರ್ಕಾರದ ಚಿಂತನೆಗಳೂ ಬದಲಾಗಬೇಕಿದೆ. ಮೊದಲು ಶಿಕ್ಷಣದ ನೀತಿಗೆ ಪರಿಷ್ಕರಣೆ ತರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಬಹಳ ವರ್ಷಗಳ ನಂತರ ಶಿಕ್ಷಣ ಖಾತೆಗೆ ಒಬ್ಬ ಬುದ್ಧಿವಂತ ಸಚಿವರು ಬಂದಿದ್ದಾರೆ. ಅವರ ಅವಧಿಯಲ್ಲಿ ಸಾಕಷ್ಟು ಸುಧಾರಣೆಗಳು ಆಗುವ ನಿರೀಕ್ಷೆ ಇದೆ. ಈಗಿರುವ ನೀತಿಯಿಂದ ಶಿಕ್ಷಕ ವರ್ಗದಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಅವುಗಳನ್ನು ಬಗೆಹರಿಸಿ ಶಿಕ್ಷಕರು ಆತ್ಮಾಭಿಮಾನದಿಂದ ಹಾಗೂ ಗೌರವದಿಂದ ಕೆಲಸ ಮಾಡುವಂತಹ ವಾತಾವರಣ ನಿರ್ಮಾಣವಾಗಲಿದೆ’ ಎಂದು ಭರವಸೆ ನೀಡಿದರು. 

ಗುರುವೇ ದೈವ: ‘ಗುರುಗಳು ಇಲ್ಲದಿದ್ದರೆ ನಾವು ಏನಾಗುತ್ತಿದ್ದೆವು? ನಾಡಿನ ಸಂಸ್ಕೃತಿ ಏನಾಗುತ್ತಿತ್ತು ಎಂಬುದನ್ನು ಒಮ್ಮೆ ಯೋಚಿಸಿ. ನಾಡಿನಲ್ಲಿ ಸಂಸ್ಕಾರ ಹಾಗೂ ಭವ್ಯಪರಂಪರೆ ಉಳಿದಿದ್ದರೆ ಅದು ಗುರುಗಳಿಂದ ಮಾತ್ರ. ಪ್ರೀತಿ–ಕಾಳಜಿ ಕೊಟ್ಟು, ಮನುಷ್ಯತ್ವ ಕಲಿಸಿ, ಜ್ಞಾನದ ಸಂಕೋಲೆ ತೊಡಿಸಿದ ಗುರುವೇ ನಿಜವಾದ ದೇವರು. ನಾವೇನಾದರೂ ಸಾಧನೆ ಮಾಡಿದ್ದರೆ ಅದು ಗುರುಗಳಿಟ್ಟ ಭಿಕ್ಷೆ’ ಎಂದರು.

‘ಒಂದು ಕಾಲದಲ್ಲಿ ಭೂಮಿ ಜಾಸ್ತಿ ಇದ್ದವರು ಜಗತ್ತು ಆಳುತ್ತಿದ್ದರು. 16–17ನೇ ಶತಮಾನದಲ್ಲಿ ದುಡ್ಡು, ವ್ಯಾಪಾರ ಇರುವವರು ಆಳಲಾರಂಭಿಸಿದರು. ಆದರೆ, 21ನೇ ಶತಮಾನ ಭೂಮಿ, ದುಡ್ಡಿದ್ದವರದ್ದಲ್ಲ. ಜ್ಞಾನ ಇದ್ದರಷ್ಟೇ ಆಳುವ ಕಾಲವಿದು’ ಎಂದರು. 

ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಾಥಮಿಕ ಶಾಲೆಯ 14 ಹಾಗೂ ಪ್ರೌಢಶಾಲೆಯ 7 ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ನೆಹರು ಓಲೇಕಾರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ಇದ್ದರು.

ಜಿಡಿಪಿ ತರೋ ವರ್ಗಕ್ಕೆ ಸಲಾಂ

‘ಸಮಯದ ಹಾಗೂ ವೈಯಕ್ತಿಕ ಬದುಕಿನ ಹಂಗು ತೊರೆದು ದುಡಿಯುತ್ತಿರುವ ಶಿಕ್ಷಕರು, ನರ್ಸ್‌ಗಳು, ಬಸ್ ಚಾಲಕರು, ನಿರ್ವಾಹಕರು, ಪೊಲೀಸರು, ಸೂರ್ಯೋದಯದ ಜತೆಗೇ ತಮ್ಮ ಕಾಯಕ ಆರಂಭಿಸುವ ರೈತರು ಹಾಗೂ ಕಾರ್ಮಿಕರು ಶ್ರಮಿಕ ವರ್ಗಕ್ಕೆ ಸೇರುತ್ತಾರೆ. ನಿಜವಾಗಿಯೂ ದೇಶ ಕಟ್ಟುತ್ತಿರುವ ಹಾಗೂ ಜಿಡಿಪಿ ತಂದು ಕೊಡುತ್ತಿರುವ ವರ್ಗವಿದು. ಅವರಿಗೆ ನನ್ನದೊಂದು ಸಲಾಂ’ ಎಂದು ಬೊಮ್ಮಾಯಿ ಹೆಮ್ಮೆಯಿಂದ ಹೇಳಿದರು.

ಉತ್ತರದ ಶಿಕ್ಷಣಕ್ಕೆ ಮಹತ್ವ

‘ಉತ್ತರ ಕರ್ನಾಟಕದ ಭಾಗದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ಸಮನ್ವಯತೆ ತಂದು ಶಿಕ್ಷಣದ ಗುಣಮಟ್ಟ ಎತ್ತರಿಸಬೇಕಿದೆ. ಉದ್ಯೋಗ ಮತ್ತು ಶಿಕ್ಷಣ ಈ ಎರಡು ಅಸ್ತ್ರಗಳು ಸರಿಯಾಗಿ ಬಳಕೆಯಾದರೆ, ಉತ್ತರ ಕರ್ನಾಟಕವು ಅಭಿವೃದ್ಧಿ ವಿಚಾರದಲ್ಲಿ ಎತ್ತರಕ್ಕೆ ಹೋಗುತ್ತದೆ. ಆ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು