ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅಖಂಡತೆಗಾಗಿ ಶ್ರಮಿಸಿದ ಶ್ಯಾಮಪ್ರಸಾದ್‌: ಸಿದ್ದರಾಜ ಕಲಕೋಟಿ

ಜನಸಂಘದ ಸಂಸ್ಥಾಪಕರ ಜನ್ಮದಿನ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿಕೆ
Last Updated 6 ಜುಲೈ 2022, 15:31 IST
ಅಕ್ಷರ ಗಾತ್ರ

ಹಾವೇರಿ: ಶ್ಯಾಮಪ್ರಸಾದ ಮುಖರ್ಜಿಯವರು ಭಾರತೀಯ ಜನತಾ ಪಕ್ಷದ ಕೋಟ್ಯಂತರ ಕಾರ್ಯಕರ್ತರಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ತಮ್ಮ ಜೀವನದುದ್ದಕ್ಕೂ ಸಮಾಜ ಹಾಗೂ ದೇಶದ ಅಖಂಡತೆಗಾಗಿ ಶ್ರಮಿಸಿದರು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಜನಸಂಘದ ಸಂಸ್ಥಾಪಕ ಡಾ.ಶ್ಯಾಮಪ್ರಸಾದ ಮುಖರ್ಜಿಯವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೇಷ್ಠ ರಾಜಕೀಯ ಚಿಂತನೆ ಹಾಗೂ ಶಿಕ್ಷಣದ ಬಗ್ಗೆ ಅಪಾರ ಅಭಿವೃದ್ದಿಪರ ಚಿಂತನೆ ಹೊಂದಿದ್ದರು. ತಮ್ಮ 33ನೇ ವಯಸ್ಸಿಗೆ ಕೊಲ್ಕತ್ತಾ ವಿ.ವಿ.ಯ ಉಪ ಕುಲಪತಿಗಳಾಗಿ ನೇಮಕವಾಗಿದ್ದು ವಿಶ್ಚದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆಯ ವಯಸ್ಸಿನ ಉಪ ಕುಲಪತಿ ಎಂಬ ಖ್ಯಾತಿ ಪಡೆದಿದ್ದರು ಎಂದರು.

ಬಂಗಾಳದ ವಿಭಜನೆಗೆ ವಿರೋಧ:

ಸ್ವಾತಂತ್ರ್ಯದ ಪೂರ್ವದಲ್ಲಿ ಬಂಗಾಳದ ವಿಭಜನೆಯನ್ನು ಮುಖರ್ಜಿ ವಿರೋಧಿಸಿದ್ದರು. ಒಂದು ವೇಳೆ ಬಂಗಾಳ ವಿಭಜನೆಯಾದರೆ ಭಾರತದಿಂದ ಪ್ರತ್ಯೇಕವಾದ ಬಂಗಾಳ ಮುಂದೊಂದು ದಿನ ಅದು ಮುಸ್ಲಿಂ ರಾಷ್ಟ್ರವಾಗಿ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ಪರಿಸ್ಥಿತಿ ಕೈಮಿರಿದಾಗ ಬಂಗಾಳ ವಿಭಜನೆಯಾಯಿತು. ಅದು ಪಾಕಿಸ್ತಾನವಾಗಿ ನಿರ್ಮಾಣವಾಯಿತು ಎಂದು ತಿಳಿಸಿದರು.

ನೆಹರು ನಿಲುವಿಗೆ ವಿರೋಧ:

ಹಿಂದೂ ಮಹಾಸಭಾದ ನಾಯಕರಾಗಿದ್ದ ಮುಖರ್ಜಿಯವರು ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಹಿಂದೂ ಮಹಾಸಭಾಕ್ಕೆ ರಾಜೀನಾಮೆ ನೀಡಿದ್ದರು. ಸ್ವಾತಂತ್ರ್ಯ ಭಾರತದ ನಂತರ ನೆಹರು ಅವರ ಸರ್ಕಾರದಲ್ಲಿ ಕಾಂಗ್ರೇಸ್ಸೇತರ ಸಚಿವರು ಕೂಡಾ ಆಗಿದ್ದರು. ಆದರೆ ನೆಹರು ಅವರ ತುಷ್ಟೀಕರಣ ನೀತಿಯನ್ನು ಖಂಡಿಸಿದ್ದರು. ಅಲ್ಲದೆ ಕಾಶ್ಮೀರದ ಬಗ್ಗೆ ನೆಹರೂ ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸಿ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸಂಸತ್ತಿನ ಭಾಷಣದಲ್ಲಿ ಒಂದು ದೇಶದಲ್ಲಿ ಇಬ್ಬರು ಪ್ರಧಾನಿ, ಎರಡು ದ್ವಜ, ಎರಡು ವಿಧಾನ ಇರಲು ಸಾಧ್ಯವೇ ಇಲ್ಲ ಎಂದು ಘೋಷಿಸಿದ್ದ ನೇತಾರ ಎಂದು ಬಣ್ಣಿಸಿದರು.

ಕಾಶ್ಮೀರ ಚಲೋ:

ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಪ್ರೇರಣೆಯಿಂದ ಭಾರತೀಯ ಜನಸಂಘ ಸ್ಥಾಪಿಸಿದರು ಹಾಗೂ ಮೋದಲ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಕಾಶ್ಮೀರದಲ್ಲಿ 370 ಆರ್ಟಿಕಲ್‌ ವಿರೋಧಿಸಿ, ಕಾಶ್ಮೀರ ಚಲೋ ನಡೆಸಿ ಬಂಧನಕ್ಕೆ ಒಳಗಾದರು. 40 ದಿನಗಳ ಗೃಹ ಬಂಧನದಲ್ಲಿದ್ದಾಗ ಅನುಮಾನಾಸ್ಪದವಾಗಿ ಮರಣ ಹೊಂದಿದರು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಆರ್ಟಿಕಲ್‌ 370ಯನ್ನು ರದ್ದುಗೊಳಿಸಿತು ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷರಾದ ಸೌಭಾಗ್ಯಮ್ಮ ಹಿರೇಮಠ, ರಾಜೇಂದ್ರ ಹಾವಣ್ಣನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಾ ಈಳಗೇರ, ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಜಿಲ್ಲಾ ಕಾರ್ಯದರ್ಶಿಗಳಾದ ಸಂತೋಷ ಆಲದಕಟ್ಟಿ, ಲತಾ ಬಡ್ನಿಮಠ, ಜಿಲ್ಲಾ ವಕ್ತಾರರಾದ ಪ್ರಭು ಹಿಟ್ನಳ್ಳಿ, ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿ ರಮೇಶ ಪಾಲನಕರ, ಗುಡ್ಡಪ್ಪ ಬರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT