ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸೂತ್ರವಾಗಿ ಮುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ

ಭಾಷಾ ಪತ್ರಿಕೆಗಳನ್ನು ಬರೆದ 20,243 ವಿದ್ಯಾರ್ಥಿಗಳು: 48 ಮಕ್ಕಳು ಗೈರು ಹಾಜರಿ
Last Updated 22 ಜುಲೈ 2021, 15:48 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್‌ ಆತಂಕದ ನಡುವೆಯೂ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ 2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸುಸೂತ್ರವಾಗಿ ಮುಕ್ತಾಯವಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಪತ್ರಿಕೆಗಳ ಪರೀಕ್ಷೆಗಳು ಗುರುವಾರ ಜಿಲ್ಲೆಯ 155 ಕೇಂದ್ರಗಳಲ್ಲಿ ನಡೆದವು. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 20,291 ವಿದ್ಯಾರ್ಥಿಗಳಲ್ಲಿ 20,243 ಮಕ್ಕಳು ಪರೀಕ್ಷೆ ಬರೆದರು. ಒಟ್ಟು 48 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಒಬ್ಬ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಯಿತು. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 10. ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು 625 ವಲಸೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷಾ ಅವ್ಯಹಾರದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದರು.

ಪರೀಕ್ಷಾ ಕೇಂದ್ರಗಳಿಗೆ ಮಾಸ್ಕ್‌ ಧರಿಸಿ ಬೆಳಿಗ್ಗೆ 8.30ಕ್ಕೆ ಬಂದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಸ್ಯಾನಿಟೈಸರ್‌ ಹಾಕಿ, ಥರ್ಮಲ್‌ ಸ್ಕ್ಯಾನರ್ ಮೂಲಕ ದೇಹದ ಉಷ್ಣಾಂಶ ಪರೀಕ್ಷಿಸಿ, ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಟ್ಟರು. ಪರೀಕ್ಷಾ ಕೇಂದ್ರಗಳನ್ನು ಹೂವು ಮತ್ತು ಅಲಂಕಾರಿಕ ವಸ್ತುಗಳಿಂದ ಸಿಂಗಾರ ಮಾಡಲಾಗಿತ್ತು.

ಒಂದು ಡೆಸ್ಕ್‌ಗೆ ಒಬ್ಬರಂತೆ, ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡು ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಸೋಂಕಿನ ಭಯವಿಲ್ಲದೆ ನಿರಾತಂಕವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಹೊಸ ಪರೀಕ್ಷಾ ವಿಧಾನದ ಬಗ್ಗೆ ಮತ್ತು ಒಎಂಆರ್‌ ಶೀಟ್‌ನಲ್ಲಿ ಉತ್ತರಿಸುವ ಬಗ್ಗೆ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ್ದ ಕಾರಣ, ಹೊಸ ವಿಧಾನವನ್ನು ಸುಲಭವಾಗಿ ವಿದ್ಯಾರ್ಥಿಗಳು ಎದುರಿಸಿದರು ಎಂದು ಹಾವೇರಿ ಬಿಇಒ ಎಂ.ಎಚ್‌.ಪಾಟೀಲ ತಿಳಿಸಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಶೀಘ್ರ: ಡಿಡಿಪಿಐ

‘ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ನೂತನ ವಿಧಾನವಾದ ಬಹು ಆಯ್ಕೆ ಪ್ರಶ್ನೆಗಳಿಗೆ ಒಎಂಆರ್‌ ಶೀಟ್‌ನಲ್ಲಿ ವಿದ್ಯಾರ್ಥಿಗಳು ಸರಿ ಉತ್ತರವನ್ನು ಗುರುತು ಮಾಡಿದ್ದಾರೆ. ಕಂಪ್ಯೂಟರ್‌ ಆಧಾರಿತ ಮೌಲ್ಯಮಾಪನ ನಡೆಯಲಿರುವುದರಿಂದ ಶೀಘ್ರದಲ್ಲೇ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ’ ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದರು.

ಹೀಗಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಕಾಲೇಜುಗಳಿಗೆ ಪ್ರವೇಶ ಪಡೆಯಲು ಅನುಕೂಲವಾಗಲಿದೆ. ಈಗಾಗಲೇ 1ರಿಂದ 10ನೇ ತರಗತಿಯ ಶಾಲಾ ದಾಖಲಾತಿ ಪ್ರಕ್ರಿಯೆ ಜೂನ್‌ 15ರಿಂದ ಜುಲೈ 1ರವರೆಗೆ ನಡೆದಿದೆ. ಶೇ 93ರಷ್ಟು ದಾಖಲಾತಿ ಪೂರ್ಣಗೊಂಡಿದೆ. ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಜುಲೈ 30ರವರೆಗೆ ಪ್ರವೇಶಾತಿ ನೀಡುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT