ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ತಾಳಕ್ಕೆ ಕುಣಿಯುತ್ತಿರುವ ಸ್ಪೀಕರ್: ಬಿ.ಸಿ.ಪಾಟೀಲ

Last Updated 28 ಜುಲೈ 2019, 9:09 IST
ಅಕ್ಷರ ಗಾತ್ರ

ಹಾವೇರಿ: ‘ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಸ್ಪೀಕರ್, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ನಮ್ಮನ್ನು ಅನರ್ಹ ಮಾಡಿದ್ದಾರೆ’ ಎಂದು ಬಿ.ಸಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಜತೆ ಮಾತಾಡಿದ ಅವರು, ‘ಬಿಜೆಪಿ‌ ಬೆಂಬಲಿಸುತ್ತಿರುವ ಎಲ್ಲ ಶಾಸಕರಿಗೂ ಒಂದು ಗತಿ ಕಾಣಿಸುವುದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೊದಲಿನಿಂದಲೂ ಹೇಳುತ್ತಿದ್ದರು. ಅಂತೆಯೇ ಈಗ ಸ್ಪೀಕರ್ ಅವರನ್ನು ಬಳಸಿಕೊಂಡು ಸ್ವಾರ್ಥ ರಾಜಕಾರಣ ಮಾಡಿದ್ದಾರೆ’ ಎಂದು ಕಿಡಿಕಾರಿದರು.

‘ರಾಜೀನಾಮೆ ನೀಡಿರುವ ಶಾಸಕರು ಸದನಕ್ಕೆ ಬರಬೇಕೆಂದು ಒತ್ತಡ ಹೇರುವಂತಿಲ್ಲ. ಹಾಜರಾಗುವುದು, ಬಿಡುವುದು ಅವರ ಇಚ್ಛೆಗೆ ಬಿಟ್ಟ ವಿಚಾರವೆಂದು ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿತ್ತು. ಅವರಿಗೆಲ್ಲ ವಿಪ್‌‌‌ ನೀಡುವಂತಿಲ್ಲ ಎಂಬುದು ಆ ಆದೇಶದ ಅರ್ಥವಾಗಿತ್ತು. ಆದರೀಗ ವಿಪ್ ನಿಯಮ ಉಲ್ಲಂಘಿಸಿದ ಕಾರಣವನ್ನೇ ನೀಡಿ ನಮ್ಮನ್ನು ಅನರ್ಹ ಮಾಡಲಾಗಿದೆ‌’ ಎಂದರು.

‘ಹಿಂದೆ ಉಮೇಶ್ ಜಾಧವ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದ ಸ್ಪೀಕರ್, ನಮ್ಮ ರಾಜೀನಾಮೆಯನ್ನೇಕೆ ಅಂಗೀಕರಿಸಲಿಲ್ಲ? ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಶ್ರೀಮಂತ ಪಾಟೀಲ ವಿರುದ್ಧ ದೂರು ಕೊಟ್ಟ ಕಾಂಗ್ರೆಸ್ ನಾಯಕರು, ಆಸ್ಪತ್ರೆಗೆ ದಾಖಲಾಗಿದ್ದ ಇನ್ನೊಬ್ಬ ಶಾಸಕ ಬಿ.ನಾಗೇಂದ್ರನ ವಿರುದ್ಧ ಏಕೆ ದೂರಲಿಲ್ಲ’ ಎಂದು ಪ್ರಶ್ನಿಸಿದರು.

‘ಇವೆಲ್ಲವನ್ನೂ ಗಮನಿಸಿದರೆ ಸ್ಪೀಕರ್ ಹಾಗೂ ಮೈತ್ರಿ ನಾಯಕರು ನಮ್ಮ ಹಕ್ಕು, ಆಲೋಚನೆಗಳ ಮೇಲೆ
ಸವಾರಿ ಮಾಡುತ್ತಿದ್ದಾರೆ ಎಂಬುದು ಎಂಥವರಿಗೂ ಗೊತ್ತಾಗುತ್ತದೆ. ರಾಜೀನಾಮೆ ನೀಡಿದವರನ್ನೂ ಅನರ್ಹಗೊಳಿಸಿದರೆ ಪ್ರಜಾಪ್ರಭುತ್ವದ ಕಗ್ಗೊಲೆಯಾದಂತೆ. ಈ ಆದೇಶ ಪ್ರಶ್ನಿಸಿ ಎಲ್ಲ ಶಾಸಕರೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ’ ಎಂದೂ ಹೇಳಿದರು.

‘ಕಾರ್ಯಕರ್ತರು ಹಾಗೂ ಕ್ಷೇತ್ರದಲ್ಲಿರುವ ನನ್ನ ಬೆಂಬಲಿಗರು ಗಾಬರಿಗೆ ಒಳಗಾಗುವುದು ಬೇಡ. ಈ ವಿಚಾರದಲ್ಲಿ‌ ನ್ಯಾಯ ನಮ್ಮ ಪರವಾಗಿಯೇ ಇದೆ. ಕಾನೂನು ಹೋರಾಟದಲ್ಲಿ ಗೆದ್ದು ಬರುತ್ತೇನೆ’ ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT