ಶನಿವಾರ, ಫೆಬ್ರವರಿ 29, 2020
19 °C
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಎಸ್‌.ಆರ್‌.ಹಿರೇಮಠ ಆಗ್ರಹ

ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹಾವೇರಿ: ರಾಮನಗರ ತಾಲ್ಲೂಕು ಬಿಡದಿ ಹೋಬಳಿ ಕೇತಿಗಾನಹಳ್ಳಿ ಗ್ರಾಮದ 110 ಎಕರೆ ಗೋಮಾಳ ಒಳಗೊಂಡಂತೆ ಸುಮಾರು 200 ಎಕರೆ ಸರ್ಕಾರಿ ಭೂಮಿಯನ್ನು ಜೆಡಿಎಸ್‌‌ನ ಎಚ್‌.ಡಿ.ಕುಮಾರಸ್ವಾಮಿ, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಹಾಗೂ ಅವರ ಸಂಬಂಧಿಕರು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ‘ಸಿಟಿಟನ್‌ ಫಾರ್‌ ಡೆಮಾಕ್ರಸಿ’ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಗಂಭೀರ ಆರೋಪ ಮಾಡಿದರು. 

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ₹500 ಕೋಟಿಗೂ ಹೆಚ್ಚು ಬೆಲೆಬಾಳುವ ಭೂಮಿ ಕಬಳಿಸಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು 2014ರ ಆಗಸ್ಟ್‌ 5ರಂದು ಕರ್ನಾಟಕ ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಐದು ವರ್ಷ ಕಳೆದರೂ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಈ ಬಗ್ಗೆ ಸಮಾಜ ಪರಿವರ್ತನಾ ಸಮುದಾಯ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಿತ್ತು. ಹೈಕೋರ್ಟ್‌ ಈ ಪ್ರಕರಣವನ್ನು 2020ರ ಜನವರಿ 6ರಂದು ವಿಚಾರಣೆ ಕೈಗೆತ್ತಿಕೊಂಡು, ಲೋಕಾಯುಕ್ತ ಪತ್ರಕ್ಕೆ ಉತ್ತರ ಕೊಡದೆ ಇರುವುದು ಗಂಭೀರ ಕರ್ತವ್ಯ ಲೋಪ. ಈ ಕುರಿತು ವಿವರಣೆ ನೀಡುವಂತೆ ಜನವರಿ 14ರಂದು ಮುಖ್ಯ ಕಾರ್ಯದರ್ಶಿ ಅವರಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ತಿಳಿಸಿದರು. 

ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ರೀತಿಯಲ್ಲೇ ಈ ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟ ಮುಂದುವರೆಸುತ್ತೇವೆ. ಎಚ್‌.ಡಿ.ಕುಮಾರಸ್ವಾಮಿ ಕುಟುಂಬದವರು ಆತ್ಮಾವಲೋಕನ ಮಾಡಿಕೊಂಡು, ಕಬಳಿಸಿರುವ ಎಲ್ಲ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು. ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌.ಸಿ.ದೊಡ್ಡಮನಿ, ವಕೀಲ ನಾರಾಯಣ ಕಾಳೆ, ವಿನಾಯಕ ಕುರುಬರ್‌ ಇತರರು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು