ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು ‘ಮಾದರಿ ನಗರ’ವಾಗಿಸಲು ಕ್ರಮ

₹382 ಕೋಟಿ ಅನುದಾನ ಬಿಡುಗೆ ಮಾಡಿಸಿದ್ದೆ: ಸಚಿವ ಆರ್‌.ಶಂಕರ್‌ ಹೇಳಿಕೆ
Last Updated 15 ಜನವರಿ 2021, 19:30 IST
ಅಕ್ಷರ ಗಾತ್ರ

ಹಾವೇರಿ: ‘ಹಿಂದೆ ಸಚಿವನಾಗಿ ಬಂದ ಸಂದರ್ಭದಲ್ಲಿ ರಾಣೆಬೆನ್ನೂರು ಕ್ಷೇತ್ರಕ್ಕೆ ₹382 ಕೋಟಿಯಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೆ. ನಾನು ಮತ್ತು ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಒಗ್ಗೂಡಿ ಹೆಚ್ಚಿನ ಅನುದಾನ ತಂದು ರಾಣೆಬೆನ್ನೂರು ತಾಲ್ಲೂಕನ್ನು ಬೆಂಗಳೂರು ಮಾದರಿಯಲ್ಲಿ ‘ಮಾದರಿ ನಗರ’ ಮಾಡಲಾಗುವುದು’ ಎಂದು ಸಚಿವ ಆರ್‌.ಶಂಕರ್‌ ಹೇಳಿದರು.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ‘ನನ್ನ ಮೇಲೆ ಈ ಹಿಂದೆ ಹಲವಾರು ಅಪವಾದಗಳು ಬಂದವು. ನನ್ನನ್ನು ಗೆಲ್ಲಿಸಿದ ಮತದಾರರು ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಿದ್ದರು. ಎಲ್ಲೋ ಒಂದು ಕಡೆ ಕೊಪ್ಪಳ ಜಿಲ್ಲೆ ಉಸ್ತುವಾರಿ ಜವಾಬ್ದಾರಿ ನೀಡಿದ್ದಕ್ಕೆ ಹಾಗೂ ಸ್ಥಿರ ಸರ್ಕಾರವನ್ನು ಜಾರಿಗೆ ತರಲು ಓಡಾಟ ಮಾಡಿದ ಪರಿಣಾಮ ತಾಲ್ಲೂಕಿನ ಸಂಪರ್ಕ ಕಡಿತಗೊಂಡಿತ್ತು. ಎಲ್ಲದಕ್ಕೂ ಈಗ ವಿರಾಮ ಬಿದ್ದಿದೆ. ರಾಜ್ಯ ಮತ್ತು ತಾಲ್ಲೂಕನ್ನು ನನ್ನ ಎರಡು ಕಣ್ಣು ಎಂದು ಭಾವಿಸಿ, ಅಭಿವೃದ್ಧಿಗೆ ಒತ್ತು ನೀಡುತ್ತೇನೆ’ ಎಂದರು.

ಮನೆ–ಮನೆಗೆ ಸಿಹಿ ಹಂಚುವೆ:

‘ನಾನು ಗೆದ್ದಾಗ ಮತದಾರರಿಗೆ ಧನ್ಯವಾದ ಹೇಳಿ, ಒಂದು ಸಿಹಿ ಕೊಡಲೂ ಸಾಧ್ಯವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರದಅವಧಿಯಲ್ಲಿ ರೆಸಾರ್ಟ್‌ ರಾಜಕಾರಣ, ಅಡ್ಡಿ ಆತಂಕಗಳ ಕಾರಣದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯದ ಕಡೆ ಒತ್ತು ನೀಡಲು ಆಗಿರಲಿಲ್ಲ.ಈಗ ಮನೆ–ಮನೆಗೆ ಭೇಟಿ ನೀಡಿ ಸಿಹಿ ಹಂಚುತ್ತೇನೆ. ಜನರು ಮೊದಲಿನ ವಿಶ್ವಾಸವಿಟ್ಟು, ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಜನರ ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

‘ಪಕ್ಷದಲ್ಲಿ ಕೆಲವರಿಗೆ ಅಸಮಾಧಾನವಾಗಿರುವುದು ನಿಜ. ಅವರು ತಮ್ಮ ನೋವು ತೋಡಿಕೊಳ್ಳಲು ಮುಖ್ಯಮಂತ್ರಿ ವಿರುದ್ಧ ಈ ರೀತಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ನಾನು ಮಂತ್ರಿಯಾಗಲು ಎಚ್‌.ವಿಶ್ವನಾಥ್‌ ಕೂಡ ಕಾರಣಕರ್ತರು. ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಿಗುವವರೆಗೂ ಸಂಯಮದಿಂದ ಇರಬೇಕು. ಮುನಿರತ್ನ ಅವರನ್ನು ಕೂಡ ಸಿ.ಎಂ. ಮನವೊಲಿಸಿದ್ದಾರೆ’ ಎಂದರು.

ಬ್ಲ್ಯಾಕ್‌ಮೇಲ್‌ ಮಾಡಿಲ್ಲ:

ಸ್ಥಿರ ಸರ್ಕಾರ ತರಲು ನಾವು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇವೆ. ಅದರ ಫಲವಾಗಿ ಮಂತ್ರಿ ಸ್ಥಾನ ಸಿಕ್ಕಿದೆ. ನಾವು ಯಾರನ್ನೂ ಬ್ಲ್ಯಾಕ್‌ಮೇಲ್‌‌ ಮಾಡಿಲ್ಲ. ಯಾರಾದರೂ ಬ್ಲ್ಯಾಕ್‌ಮೇಲ್‌‌ ಮಾಡಿದ್ದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿ ವಿರುದ್ಧ ಬಾಂಬ್‌ ಸಿಡಿಸುವವರು ಸಿಡಿಸಲಿ. ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಮತ್ತು ನನ್ನ ನಡುವೆ ಯಾವುದೇ ವೈಮನಸ್ಸಿಲ್ಲ. ಅವರನ್ನು ಮೆರವಣಿಗೆಗೆ ಕರೆದಿದ್ದೆ. ಅವರು ಹರ ಜಾತ್ರೆ ಕಾರಣದಿಂದ ಬಂದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕ್ಷೇತ್ರದ ಋಣ ತೀರಿಸುವೆ:

ರಾಣೆಬೆನ್ನೂರು ಕಾರ್ಯಕ್ಷೇತ್ರವೂ ಹೌದು, ಕರ್ಮಭೂಮಿಯೂ ಹೌದು. ನನ್ನ ಮೇಲೆ ಈ ಕ್ಷೇತ್ರದ ಋಣವಿದೆ. ಅದನ್ನು ತೀರಿಸಬೇಕಿದೆ. ಊಹಾಪೋಹಗಳಿಗೆ ತೆರೆ ಎಳೆದು ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸುತ್ತೇನೆ. ಇನ್ನಾದರೂ ನಿಂದನೆ ಮಾಡುವುದನ್ನು ನಿಲ್ಲಿಸಿ. ಒಳ್ಳೆಯ ಕಾರ್ಯಕ್ಕೆ ಸಹಕಾರ ನೀಡಿ ಎಂದು ಕೇಳಿಕೊಳ್ಳುತ್ತೇನೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ‘ಜಿಲ್ಲೆಯ ಮತ್ತೊಬ್ಬರಿಗೆ ಸಚಿವ ಸ್ಥಾನ ಸಿಕ್ಕಿರುವುದು ಸಂತಸದ ಸಂಗತಿ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಅನುಕೂಲವಾಗಲಿದೆ. ಬಿ.ಎಸ್‌.ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ, ಶಂಕರ್ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ, ಈಗ ಮಂತ್ರಿ ಮಾಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT