ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲವೇ ಜೀವನ, ಅಂತರ್ಜಲವೇ ಚೇತನ

ಜಿಲ್ಲೆಯ ಕೆರೆ–ಕಟ್ಟೆಗಳು ಭರ್ತಿ: ನಾಲ್ಕು ವರ್ಷಗಳಲ್ಲಿ 12.78 ಮೀಟರ್‌ ಅಂತರ್ಜಲ ಮಟ್ಟ ಏರಿಕೆ
Last Updated 24 ನವೆಂಬರ್ 2020, 4:49 IST
ಅಕ್ಷರ ಗಾತ್ರ

ಹಾವೇರಿ: ಕಳೆದ ಎರಡು ವರ್ಷಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ಜಿಲ್ಲೆಯ ಕೆರೆ–ಕಟ್ಟೆಗಳು ಭರ್ತಿಯಾಗಿವೆ. ಇದರ ಪರಿಣಾಮ ‘ಅಂತರ್ಜಲ ಮಟ್ಟ’ ಗಣನೀಯವಾಗಿ ಏರಿಕೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಅಂತರ್ಜಲ ಮಟ್ಟ ಏರಿಕೆಯಿಂದ ಬತ್ತಿದ ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಚಿಲುಮೆ ಕಾಣಿಸಿಕೊಂಡಿದೆ. ಇದರಿಂದ ಕೃಷಿ ಜಮೀನುಗಳಿಗೆ ಸಾಕಷ್ಟು ಪ್ರಮಾಣದ ನೀರು ದೊರೆತು, ಸಮೃದ್ಧ ಫಸಲು ಬೆಳೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಅನ್ನದಾತರು.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 2017ರಲ್ಲಿ 24.44 ಮೀಟರ್‌ ಇತ್ತು. ಪ್ರಸಕ್ತ ವರ್ಷ 11.66 ಮೀಟರ್‌ ಇದೆ. ಅಂದರೆ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 12.78 ಮೀಟರ್‌ ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ, ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿರುವುದು ಹಾಗೂ ಕೆರೆ–ಕಟ್ಟೆಗಳಲ್ಲಿ ಹೂಳು ತೆಗೆಸಿ, ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿರುವುದು.

ಭೂರಚನೆಯೂ ಕಾರಣ: ‘ಹಾವೇರಿ ಜಿಲ್ಲೆಯ ಭೂರಚನೆ ನೀರು ಬಸಿದುಕೊಳ್ಳಲು ಹೇಳಿ ಮಾಡಿಸಿದಂತಿದೆ. ಇದರಿಂದ ಮಳೆಯ ನೀರು ಚೆನ್ನಾಗಿ ಭೂಮಿಯಲ್ಲಿ ಇಂಗುತ್ತದೆ. ರೈತರು ತುಂತುರು ನೀರಾವರಿ ಮತ್ತು ಹನಿ ನೀರಾವರಿ ಪದ್ಧತಿಗಳನ್ನು ಅನುಸರಿಸುವ ಮೂಲಕ ನೀರು ಪೋಲಾಗುವುದನ್ನು ತಡೆಗಟ್ಟಬಹುದು. ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ತೆಗೆಯುವ ಆಧುನಿಕ ವಿಧಾನಗಳನ್ನು ಅನುಸರಿಸಬೇಕು. ಅಂತರ್ಜಲ ಸಂರಕ್ಷಣೆ ನಮ್ಮ ಹೊಣೆ’ ಎನ್ನುತ್ತಾರೆ ಹಿರಿಯ ಭೂವಿಜ್ಞಾನಿ ಸಂತೋಷ ಪ್ಯಾಟಿ ಗಾಣಿಗೇರ.

ಜಲ ಸಂರಕ್ಷಣೆಗೆ ಒತ್ತು: ‘ನರೇಗಾ’ ಯೋಜನೆಯಡಿ ಜಿಲ್ಲೆಯಲ್ಲಿ ನೀರು ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಕೃಷಿ ಜಮೀನುಗಳಲ್ಲಿ 6,139 ಬದುಗಳ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆ ನೀರು ಇಂಗಿಸಲು ಜಿಲ್ಲಾ ಪಂಚಾಯಿತಿ ವಿಶೇಷ ಕಾಳಜಿ ವಹಿಸಿದೆ. ಒಟ್ಟು 127 ಕೆರೆಗಳಲ್ಲಿ ಹೂಳು ತೆಗೆಯುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದರಿಂದ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿ, ಅಂತರ್ಜಲ ಮಟ್ಟ ವೃದ್ಧಿಯಾಗಲು ಕಾರಣವಾಗಿದೆ’ ಎನ್ನುತ್ತಾರೆಎಂದು ಜಿಲ್ಲಾ ಪಂಚಾಯಿತಿಯ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜನಾಧಿಕಾರಿ ಮಹಾಂತೇಶ ನರೇಗಲ್.

₹60 ಲಕ್ಷ ಅನುದಾನ: ಶಿಗ್ಗಾವಿ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ ಸುಮಾರು 17 ಕೆರೆಗಳ ಅಭಿವೃದ್ಧಿಗಾಗಿ ಸುಮಾರು ₹60 ಲಕ್ಷ ಅನುದಾನ ವೆಚ್ಚ ಮಾಡಲಾಗಿದೆ. ಅಲ್ಲದೆ ನೂರಾರು ಕೆರಗಳ ಅಭಿವೃದ್ಧಿ ಪಡಿಸಲಾಗಿದೆ. ಕೆಲವು ಕೆರೆಗಳಿಗೆ ವರದಾ ನಂದಿಯಿಂದ ಕೆರೆಗಳನ್ನು ತುಂಬಿಸಲಾಗಿದೆ. ವರದಾ ನದಿ ಕುಡಿಯುವ ನೀರಿನ ಯೋಜನೆಯಡಿ ಶಿಗ್ಗಾವಿ, ಸವಣೂರ, ಬಂಕಾಪುರ ಪ್ರತ್ಯೇಕ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ.

ಹೂಳು ತೆಗೆಸಲು ಒತ್ತಾಯ: ಬ್ಯಾಡಗಿ ತಾಲ್ಲೂಕಿನ ಬಿದರಕಟ್ಟಿ ಬಳಿ ಸಂರಕ್ಷಿತ ಅರಣ್ಯ ಇದ್ದು, ವನ್ಯಜೀವಿಗಳ ಬಾಯಾರಿಕೆ ಯನ್ನು ನೀಗಿಸುವ ‘ಬಿದರಕಟ್ಟಿ ಕೆರೆ’ ಹೆಚ್ಚು ಮಳೆ ಸುರಿದರೂ ಇನ್ನೂ ಭರ್ತಿಯಾಗಿಲ್ಲ. 500 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ‘ಹಿರೇನಂದಿಹಳ್ಳಿ ಕೆರೆ’ ಹೂಳು ತೆಗೆಯಲಾಗಿಲ್ಲ. ಈ ಕೆರೆಯನ್ನು ಸಣ್ಣ ನೀರಾವರಿ ಇಲಾಖೆಗೆ ವಹಿಸಿದ್ದರೂ ಅದರ ಅಭಿವೃದ್ದಿಗೆ ಮುಂದಾಗಿಲ್ಲ ಎಂದು ಅಲ್ಲಿಯ ಗ್ರಾಮಸ್ಥರು ದೂರಿದ್ದಾರೆ.

ರಾಣೆಬೆನ್ನೂರು ತಾಲ್ಲೂಕಿನ ಚಳ ಗೇರಿ, ಕರೂರ, ಆರೇಮಲ್ಲಾಪುರ, ಕುದರಿಹಾಳ ಗ್ರಾಮಗಳಲ್ಲಿ ಕೆರೆಗಳು ಅನೇಕ ವರ್ಷಗಳಿಂದ ನೀರಿಲ್ಲದೇ ಭಣಗು ಡುತ್ತಿದ್ದವು. ಈಗ ಉತ್ತಮ ಮಳೆ ಹಾಗೂ ತುಂಗಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆಗಳು ಭರ್ತಿಯಾಗಿವೆ.

ದೊಡ್ಡ ಕೆರೆಗಳಲ್ಲಿ ಅಸುಂಡಿ ಕೆರೆ ಪ್ರಮುಖವಾಗಿದೆ. ಸುಮಾರು 550 ಎಕರೆ ವಿಸ್ತೀರ್ಣ ಹೊಂದಿದೆ. ಹಿಂದೆ 7 ಸಾವಿರ ಎಕರೆ ಜಮೀನಿಗೆ ನೀರು ಒದಗಿಸುತ್ತಿತ್ತು. ಈಗ ಸಾಕಷ್ಟು ಹೂಳು ತುಂಬಿದ್ದು, ನೀರಿನ ಸಂಗ್ರಹ ಕಡಿಮೆಯಾಗಿದೆ.ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆರೆಗಳಿಗೆ ಕೋಟಿಹಾಳ ಗ್ರಾಮದಿಂದ ತುಂಗಭದ್ರಾ ನದಿಯಿಂದ ₹98 ಕೋಟಿ ಅನುದಾನದಲ್ಲಿ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ.

ಕೃಷಿ ಹೊಂಡ ನಿರ್ಮಾಣ: ಸವಣೂರ ತಾಲ್ಲೂಕಿನ 21 ಗ್ರಾಪಂ ವ್ಯಾಪ್ತಿಗಳಲ್ಲಿ (ಎನ್.ಆರ್.ಎಲ್. ಎಮ್) ನೈಸರ್ಗಿಕ ಪುನರುಜ್ಜೀವನ ಕಾಮಗಾರಿಗಳಲ್ಲಿ 11 ಕೆರೆಗಳಲ್ಲಿ ಹೂಳೆತ್ತುವುದು, ಚೆಕ್‌ ಡ್ಯಾಂ, ನೀರುಗಾಲುವೆ, ಕೃಷಿ ಹೊಂಡ, ಬದು ನಿರ್ಮಾಣ, ಇಂಗು ಗುಂಡಿ, ಹಳ್ಳ ಹೂಳೆತ್ತುವ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

‘ರೈತರ ಹೊಲಗಳಲ್ಲಿ ಬದುಗಳ ನಿರ್ಮಾಣ, ಕೃಷಿಹೊಂಡ, 1200 ಎರೆಹುಳು ತೊಟ್ಟಿಗಳನ್ನು ನಿರ್ಮಿಸುವ ಮೂಲಕ ನೀರು ಸಂರಕ್ಷಣೆ ಹಾಗೂ ಕೃಷಿ ಕ್ಷೇತ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಮಳೆಯ ನೀರು ಹರಿದು ಹೋಗಿ ಕೆರೆ ಕಟ್ಟೆಗಳಿಗೆ ಸೇರಲು ಎರಡು ನೀರುಗಾಲುವೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಎಸ್.ಎಚ್.ಅಮರಾಪೂರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT