ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿಆಲೂರು: ಹೊಂಬಣ್ಣನ ಬಾವಿ; ಮೊಗೆದಷ್ಟೂ ಅಚ್ಚರಿ

ಐತಿಹಾಸಿಕ ಬೃಹದಾಕಾರದ ಬಾವಿಗೆ ಬೇಕಿದೆ ಸಂರಕ್ಷಣೆ
Last Updated 21 ಜೂನ್ 2021, 6:30 IST
ಅಕ್ಷರ ಗಾತ್ರ

ಅಕ್ಕಿಆಲೂರ: ಶತಮಾನಗಳ ಇತಿಹಾಸವನ್ನು ತನ್ನೊಡಲಿನಲ್ಲಿ ಬಚ್ಚಿಟ್ಟುಕೊಂಡಿರುವ ಇಲ್ಲಿನ ಬಸವೇಶ್ವರ ನಗರದಲ್ಲಿನ ಪುರಾತನ ‘ಹೊಂಬಣ್ಣನ ಬಾವಿ’ ಸರ್ಕಾರ ಮತ್ತು ಸಮುದಾಯದ ದಿವ್ಯ ನಿರ್ಲಕ್ಷ್ಯದಿಂದ ನಿಧಾನವಾಗಿ ಕಾಲಗರ್ಭ ಸೇರಲಾರಂಭಿಸಿದೆ.

ಇಂದಿನ ಆಧುನಿಕತೆ ಮತ್ತು ತಾಂತ್ರಿಕತೆಗೆ ಸವಾಲೊಡ್ಡುವಂತಹ ಬಾವಿ ಅಳಿವಿನ ಅಂಚಿಗೆ ಬಂದು ನಿಂತಿದ್ದರೂ ಸಮುದಾಯದಲ್ಲಿ ಜಾಗೃತಿ ಮೂಡದೇ ಇರುವುದು ವಿಪರ್ಯಾಸ. ಇಲ್ಲಿನ ಹೊರವಲಯದಲ್ಲಿರುವ ಬಸವೇಶ್ವರ ನಗರದ ವಿಶಾಲ ಬಯಲಿನಲ್ಲಿ ಮೈದಳೆದಿರುವ ಸುಮಾರು 125 ಅಡಿ ಉದ್ದ ಹಾಗೂ 30 ಅಡಿ ಅಗಲವಾದ ವಿಸ್ತಾರ ಹೊಂದಿರುವ ಈ ಬಾವಿಗೆ ‘ಹೊಂಬಣ್ಣನ ಬಾವಿ’ ಎಂದು ಹೆಸರು.

ನಾಲ್ಕೈದು ದಶಕಗಳ ಹಿಂದೆ ಬಾವಿಯ ಸುತ್ತಲೂ ಅತ್ಯಧಿಕ ಪ್ರಮಾಣದಲ್ಲಿ ಮಾವಿನ ಗಿಡಗಳಿದ್ದರಿಂದ ಈ ಪ್ರದೇಶವನ್ನು ‘ಮಾವಿನ ಕೊಪ್ಪಲು’ ಎನ್ನಲಾಗುತ್ತಿತ್ತು. ಸಾರ್ವಜನಿಕರೂ ಸಹ ಕುಡಿಯುವ ನೀರಿಗಾಗಿ ಇದೇ ಬಾವಿ ಅವಲಂಬಿಸಿದ್ದರು. ಏತ ನೀರಾವರಿಯ ಕುರುಹುಗಳನ್ನು ಇಂದಿಗೂ ಸಹ ಇಲ್ಲಿ ಕಾಣಬಹುದಾಗಿದೆ.

ಶಿಲುಬೆ ಆಕೃತಿ:ಬಾವಿಯ ರಚನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಒಟ್ಟಾರೆ ಇದು ‘ಶಿಲುಬೆ ಆಕೃತಿ’ ಹೋಲುತ್ತಿರುವುದು ಗೋಚರಿಸುತ್ತದೆ.ಪುರಾತನ ಬಾವಿಯಾಗಿದ್ದರಿಂದ ನಿಧಿ ಕಳ್ಳರ ವಕ್ರದೃಷ್ಟಿ ಈ ಬಾವಿಯನ್ನೂ ಬಿಟ್ಟಿಲ್ಲ. ಬಾವಿಯ ಬಳಿಯಿರುವ ನಾಗಮೂರ್ತಿ ಇವರ ನಿಧಿಯಾಸೆ ಫಲವಾಗಿ ಭಗ್ನವಾಗಿತ್ತು. ಇತ್ತೀಚೆಗಷ್ಟೇ ನಾಗಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲಾಗಿದೆ. ಇತಿಹಾಸವನ್ನು ಸಾರುವ ಸಾಕಷ್ಟು ಶಿಲಾಶಾಸನಗಳು ಇನ್ನಿಲ್ಲವಾಗಿವೆ. ಅಲ್ಲಲ್ಲಿ ಹರಡಿದ್ದ ಕಲ್ಲುಗಳು ಕೆಲವರ ಮನೆಗಳ ಹಿತ್ತಲು ಸೇರಿವೆ.

ಇಡೀ ಬಾವಿಯೊಳಗೆ ಒಟ್ಟು 3 ಕಮಾನುಗಳಿದ್ದು ಕಣ್ಮನ ಸೆಳೆಯುತ್ತವೆ. ಎಲ್ಲ ಕಮಾನುಗಳಲ್ಲಿಯೂ ನೀರು ಸಂಗ್ರಹಗೊಂಡಿದೆ.ದೂರದ ಸವಣೂರು ಭಾಗದಿಂದ ಈ ಹೊಂಬಣ್ಣನ ಬಾವಿಯವರೆಗೆ ಸುರಂಗ ಮಾರ್ಗವಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಸಿದ್ಧಲಿಂಗೇಶ ತುಪ್ಪದ.

ಕಳ್ಳರ ಉಗ್ರಾಣ:ಸುತ್ತಲೂ ಕಲ್ಲಿನ ಕೋಟೆ ಹೊಂದಿರುವ ಈ ಬಾವಿಯಲ್ಲಿ ತೊಂದರೆಗೆ ಸಿಲುಕಿದ ಅನೇಕ ಕಳ್ಳರು ನಗನಾಣ್ಯ ಎಸೆದು ಪರಾರಿಯಾಗಿದ್ದಾರೆ ಎಂದು ಹೇಳುವ ಈ ಪ್ರದೇಶದ ನಿವಾಸಿಗಳು, ಬಾವಿಯ ಉತ್ಖನನ ಕಾರ್ಯ ನಡೆದರೆ ಇನ್ನಷ್ಟು ಪುರಾತನ ಕುರುಹು, ಮಾಹಿತಿ ಲಭಿಸಬಹುದು ಎನ್ನುತ್ತಾರೆ.

ಈ ಪ್ರದೇಶದ ಕೆಲ ನಿವಾಸಿಗಳು ಹಾಗೂ ಆಸಕ್ತರು ಜಾಗೃತಗೊಂಡಿರುವ ಫಲವಾಗಿ ಕಳೆದ ಏಳೆಂಟು ವರ್ಷಗಳ ಅವಧಿಯಲ್ಲಿ ಪುರಾತನ ಬಾವಿಯ ಸಂರಕ್ಷಣೆಯ ಪ್ರಯತ್ನ ನಡೆದಿರುವುದು ಸಮಾಧಾನಕರ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT