ಭಾನುವಾರ, ಮೇ 29, 2022
23 °C
ಸಂತಾನ ಫಲಕ್ಕಾಗಿ ಹರಕೆ ಕಟ್ಟುವ ಭಕ್ತರು: ಕೆಂಗೊಂಡದ ದುರ್ಗಾದೇವಿಗೆ ನಾಡಿನಾದ್ಯಂತ ಭಕ್ತರು

ಬ್ಯಾಡಗಿ: ಕೆಮ್ಮು ನಿವಾರಣೆಗೆ ಉಪ್ಪಿನ ಹರಕೆ

ಪ್ರಮೀಳಾ ಹುನಗುಂದ Updated:

ಅಕ್ಷರ ಗಾತ್ರ : | |

Prajavani

ಬ್ಯಾಡಗಿ: ತಾಲ್ಲೂಕಿನ ಕೆಂಗೊಂಡ ಗ್ರಾಮ ಕೋಟೆಯನ್ನು ಹೊಂದಿದ್ದ ಹಾಗೂ ಹಲವಾರು ಯುದ್ಧಗಳನ್ನು ಕಂಡಿದ್ದ ಪ್ರಾಚೀನ ಗ್ರಾಮವಾಗಿದೆ.

ಮೋಟೆಬೆನ್ನೂರ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರಿಂದ 8 ಕಿ.ಮೀ ದೂರದಲ್ಲಿದೆ. ಉತ್ತಮ ಸಾರಿಗೆ ಸಂಪರ್ಕ ಹೊಂದಿದ್ದು, ಹೊಸರಿತ್ತಿ, ಗುತ್ತಲ, ಕನವಳ್ಳಿ ಕಡೆಗೆ ಹೋಗುವ ಎಲ್ಲಾ ಸಾರಿಗೆ ಸಂಸ್ಥೆಯ ಬಸ್‌ಗಳು ಕೆಂಗೊಂಡ ಗ್ರಾಮದ ಮೂಲಕವೇ ಸಾಗುತ್ತವೆ.

ಭಕ್ತರ ದಂಡು:

‘ಪ್ರತಿ ಅಮಾವಾಸ್ಯೆಯ ದಿನದಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಅವರಿಗೆಲ್ಲ ಅಂದು ನಿರಂತರ ಅನ್ನ ಸಂತರ್ಪಣೆ ನಡೆಯುತ್ತದೆ. ದುರ್ಗಾದೇವಿ ಲಂಬಾಣಿ ಜನಾಂಗದ ಆರಾಧ್ಯ ದೇವತೆ, ನಾಡಿನಾದ್ಯಂತ ಭಕ್ತರನ್ನು ಹೊಂದಿದ್ದಾಳೆ. ಭಕ್ತರ ಸಹಕಾರದಿಂದ ದೇವಸ್ಥಾನವನ್ನು ಮೂರು ವರ್ಷಗಳಿಂದ ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ’ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಚಂದ್ರಪ್ಪ ಗುಡಗೂರ ಹೇಳಿದರು.

ದೇವಸ್ಥಾನದ ಆವರಣದಲ್ಲಿ ಕೆಮ್ಮಮ್ಮ ಎಂಬ ದೇವತೆಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ದೇವತೆಗೆ ಉಪ್ಪಿನ ಹರಕೆಯನ್ನು ನೀಡಿದರೆ ಕೆಮ್ಮ ನಿಲ್ಲುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹೀಗಾಗಿ ಕೆಮ್ಮು ಕಡಿಮೆಯಾಗದವರು ಗ್ರಾಮಕ್ಕೆ ಬಂದು ಉಪ್ಪಿನ ಹರಕೆ ತೀರಿಸುತ್ತಾರೆ.

ಸಂತಾನವಿಲ್ಲದ ದಂಪತಿ ಮಕ್ಕಳಾದ ಬಳಿಕ ಹರಕೆಯಂತೆ ಮಕ್ಕಳ ತೂಕದಷ್ಟು ಬೆಲ್ಲ ಹಾಗೂ ತೆಂಗಿನ ಕಾಯಿಗಳನ್ನು ಸಮರ್ಪಿಸುವ ಪದ್ಧತಿ ಇನ್ನು ನಡೆದುಕೊಂಡು ಬಂದಿದೆ. ಹೀಗಾಗಿ ಒಂದು ಕಾಯಂ ತಕ್ಕಡಿಯನ್ನು ದೇವಸ್ಥಾನದಲ್ಲಿ ನೇತು ಹಾಕಲಾಗಿದೆ.

ಕಲ್ಯಾಣ ಮಂಟಪ:

‘ಎಪಿಎಂಸಿ ಸಭಾಭವನವನ್ನು ಕಲ್ಯಾಣ ಮಂಟಪವಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಮಧ್ಯಮ ವರ್ಗದವರು ಮದುವೆ ಸಮಾರಂಭಗಳನ್ನು ಇಲ್ಲಿಯೇ ನೆರವೇರಿಸಲಾಗುತ್ತದೆ’ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ ಹೇಳಿದರು.

‘ಅಸುಂಡಿ ಕೆರೆ ತುಂಬಿಸುವ ಯೋಜನೆಯಡಿ ಗ್ರಾಮದ ಕೆರೆ ತುಂಬಿಸುವ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಗ್ರಾಮದ ರಾಜಶೇಖರ ಬಣಕಾರ ಹೇಳಿದರು.

ಇತಿಹಾಸ:

ಚಾಲಕ್ಯ ಶೈಲಿಯಲ್ಲಿ ನಿರ್ಮಿತವಾಗಿರುವ ಕಲ್ಮೇಶ್ವರ ದೇವಾಲಯ ಮುಖ್ಯ ಆಕರ್ಷಣೆಯಾಗಿದ್ದು, ಶಾಸನದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ತ್ರಿಕೂಟಾಚಲವಾಗಿದೆ. ಮೂರು ಗರ್ಭಗೃಹಗಳು, ಒಂದು ಅಂತರಾಳ ಹಾಗೂ ಮಧ್ಯದಲ್ಲಿ ಒಂದು ನವರಂಗ ಮಂಟಪವಿದೆ.

ಗರ್ಭಗೃಹದಲ್ಲಿ ಚಾಲುಕ್ಯಪಾಣಿ ಪೀಠದ ಮೇಲೆ ಶಿವಲಿಂಗವಿದೆ. ಅಲಂಕೃತ ಬಾಗಿಲು, ಬಾಡದ ಲಲಾಟದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಅಂತರಾಳದ ದ್ವಾರ ಬಂಧವೂ ಅಲಂಕಾರಯುತವಾಗಿದ್ದು, ಮಧ್ಯದ ಲಲಾಟದಲ್ಲಿ ಗಜಲಕ್ಷ್ಮಿ ಇದೆ. ನವರಂಗದ ನಾಲ್ಕು ಕಂಬಗಳು ಸಾಂಪ್ರದಾಯಿಕ ಕಲ್ಯಾಣ ಚಾಲುಕ್ಯರ ಶೈಲಿಯ ಲಕ್ಷಣಗಳನ್ನು ಹೊಂದಿವೆ.

ನವರಂಗದಲ್ಲಿ ಎರಡು ದೇವಕೋಷ್ಠಗಳಿದ್ದು, ಬಲಭಾಗದಲ್ಲಿ ಭಗ್ನವಾದ ವಿಷ್ಣು ಹಾಗೂ ಎಡಭಾಗದಲ್ಲಿ ಭಗ್ನವಾದ ಸೂರ್ಯನ ಶಿಲ್ಪಗಳಿವೆ. ಹೊರಗೆ ಶಾಸನವಿದ್ದು, ಕ್ರಿ.ಶ. 1179ರಲ್ಲಿ ಜೋಯಿದೇವನ ಆಳ್ವಿಕೆಯಲ್ಲಿ ಪ್ರಭು ದಾಸಗಾವುಂಡ ಮತ್ತು ಆತನ ಮಗ ಹರಿಯಮಗಾವುಂಡರಿಂದ ಮೂಲಸ್ಥಾನ ಮಲ್ಲಿಕಾರ್ಜುನ ದೇವರಿಗೆ ಬಿಟ್ಟ ಭೂದಾನದ ವಿವರಗಳನ್ನು ತಿಳಿಸುತ್ತವೆ.

ಕೆಂಗೊಂಡ ಗ್ರಾಮದಲ್ಲಿ ದುರ್ಗಮ್ಮ, ಬಸವಣ್ಣ, ಹನುಮಂತ, ದ್ಯಾಮವ್ವ, ಚೌಡವ್ವ ಉಡಚವ್ವ, ಮಾಯವ್ವ, ಕೆಮ್ಮವ್ವ ಎಂಬ ದೇವಸ್ಥಾನಗಳಿವೆ ಎಂದು ಅವಿಭಜಿತ ಧಾರವಾಡ ಜಿಲ್ಲೆಯ ಪ್ರವಾಸಿ ತಾಣಗಳು ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು