ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.21ರಂದು ಬ್ಯಾಡಗಿ ಪುರಸಭೆ ಚುನಾವಣೆ: ಗರಿಗೆದರಿದ ರಾಜಕೀಯ ಚಟುವಟಿಕೆ

Last Updated 19 ಅಕ್ಟೋಬರ್ 2021, 15:18 IST
ಅಕ್ಷರ ಗಾತ್ರ

ಬ್ಯಾಡಗಿ: ಪುರಸಭೆಯ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲು ಬಿಜೆಪಿ ಸದಸ್ಯರಲ್ಲಿ ತೀವ್ರ ಪೈಪೋಟಿ ಕಂಡು ಬಂದಿದ್ದು, ತೆರೆಮರೆಯಲ್ಲಿ ರಾಜಕೀಯ ಕಸರತ್ತುಗಳು ನಡೆಯುತ್ತಿವೆ.

ಅ.21ರಂದು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಕೆಗಳು ಗರಿಗೆದರಿವೆ. 7ನೇ ವಾರ್ಡ್‌ ಸದಸ್ಯೆ ಕವಿತಾ ಸೊಪ್ಪಿನಮಠ ಅವರು ಒಪ್ಪಂದದಂತೆ 15 ತಿಂಗಳು ಅಧ್ಯಕ್ಷರಾಗಿ ಕಾರ್ಯಭಾರ ಮಾಡಬೇಕಿತ್ತು. ಆದರೆ, ಸ್ವಪಕ್ಷಿಯ ಸದಸ್ಯರ ವಿರೋಧಕ್ಕೆ ಗುರಿಯಾಗಿ ಎಂಟೇ ತಿಂಗಳಿಗೆ ರಾಜೀನಾಮೆ ಸಲ್ಲಿಸುವ ಅನಿವಾರ್ಯತೆ ಎದುರಾಯಿತು.

2017–18ನೇ ಸಾಲಿನ ಬಾಕಿ ಬಿಲ್‌ ₹11.36 ಲಕ್ಷ ಪಾವತಿಸುವ ಸಂಬಂಧ ಕವಿತಾ ಸೊಪ್ಪಿನಮಠ ಹಾಗೂ ಸದಸ್ಯರ ನಡುವೆ ಸಮನ್ವಯತೆ ಕೊರತೆಯುಂಟಾಗಿ ಆರೋಪ ಮತ್ತು ಪ್ರತ್ಯಾರೋಪಗಳು ಎದುರಾಗಿದ್ದವು.ಸಾಮಾನ್ಯ ಸಭೆಯ ಗಮನಕ್ಕೆ ತಂದ ಬಳಿಕ ಹಣ ಪಾವತಿಸಲು ಸಮ್ಮತಿ ನೀಡುವುದಾಗಿ ಕವಿತಾ ಅವರು ಹಠ ಹಿಡಿದಿದ್ದರಿಂದ, ಕೆಲ ಸದಸ್ಯರ ಕೆಂಗಣ್ಣಿಗೆ ಗುರಿಯಾದರು.

ಕವಿತಾ ಅವರು ಅಧ್ಯಕ್ಷ ಗಾದಿಯಿಂದ ಇಳಿದ ನಂತರ ಉಪಾಧ್ಯಕ್ಷೆ ಕಲಾವತಿ ಬಡಿಗೇರ ಅವರು ಎರಡು ತಿಂಗಳಿಗೂ ಹೆಚ್ಚು ಕಾಲ ಹಂಗಾಮಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹಿಂದಿನ ಚುನಾವಣೆಯಲ್ಲಿಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಅಭ್ಯರ್ಥಿ ಹಾಗೂ ಉಪಾಧ್ಯಕ್ಷ ಸ್ಥಾನ ‘ಅ’ ವರ್ಗದ ಮಹಿಳಾ ವರ್ಗಕ್ಕೆ ಮೀಸಲಾಗಿದ್ದವು.ಬಿಜೆಪಿ 13, ಪಕ್ಷೇತರರು 4 ಹಾಗೂ ಕಾಂಗ್ರೆಸ್ 6 ಸ್ಥಾನ ಪಡೆದುಕೊಂಡಿತ್ತು. ಬಂಡಾಯವಾಗಿ ಸ್ಪರ್ಧಿಸಿದ್ದ 4 ಪಕ್ಷೇತರರು ಚುನಾವಣಾ ಬಳಿಕ ಮಾತೃ ಪಕ್ಷ ಬಿಜೆಪಿಗೆ ಮರಳಿದ್ದರು. ಹೀಗಾಗಿ ಅಧ್ಯಕ್ಷ ಹುದ್ದೆ ಬಿಜೆಪಿಗೆ ಒಲಿದಿತ್ತು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದ 14ನೇ ವಾರ್ಡ್‌ ಸದಸ್ಯೆ ಸರೋಜಾ ಉಳ್ಳಾಗಡ್ಡಿ ಅವರ ಹೆಸರು ಈ ಬಾರಿ ಮುನ್ನೆಲೆಗೆ ಬಂದಿದೆ. ಉಳಿದಂತೆ 19ನೇ ವಾರ್ಡ್‌ ಸದಸ್ಯೆ ಫಕ್ಕೀರಮ್ಮ ಚಲವಾದಿ ಸಹ ಅಧ್ಯಕ್ಷೆಯಾಗಲು ತೆರೆ ಮರೆಯ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿಯ ಎಲ್ಲಾ ಮುಖಂಡರು ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತೊಡಗಿಕೊಂಡಿರುವ ಕಾರಣ, ಯಾರನ್ನು ಪುರಸಭೆ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ತಿರ್ಮಾನವಾಗಿಲ್ಲ. ಒಂದೆರಡು ದಿನಗಳಲ್ಲಿ ಪಕ್ಷದ ಸಭೆ ನಡೆಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ನನಗೆ ಅನ್ಯಾಯವಾಗಿದ್ದು, ಉಳಿದ 5 ತಿಂಗಳ ಅವಧಿಗೆ ಮತ್ತೊಮ್ಮೆ ಅಧ್ಯಕ್ಷೆಯಾಗಲು ಅವಕಾಶ ನೀಡಲು ಮನವಿ ಮಾಡುತ್ತೇನೆ
– ಕವಿತಾ ಸೊಪ್ಪಿನಮಠ, ಪುರಸಭೆ ಬಿಜೆಪಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT