ಸಮೀಪದ ಸಂಬಂಧಿಯೇ ಆರೋಪಿ

7
ಹಾವೇರಿ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ

ಸಮೀಪದ ಸಂಬಂಧಿಯೇ ಆರೋಪಿ

Published:
Updated:
Deccan Herald

ಹಾವೇರಿ: ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನಗರದ ಜಿ.ಎಚ್. ಕಾಲೇಜಿನ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಪೊಲೀಸರು, ಸವಣೂರ ತಾಲ್ಲೂಕಿನ ಮಣ್ಣೂರ ಗ್ರಾಮದ ಮಂಜುನಾಥಗೌಡ ಪಾಟೀಲ ಎಂಬಾತನನ್ನು ಬಂಧಿಸಿದ್ದಾರೆ.

ಘಟನೆಯ ವಿವರ: ‘ವಿದ್ಯಾರ್ಥಿನಿಯ ಸಮೀಪದ ಸಂಬಂಧಿಯಾದ ಆರೋಪಿ, ವಿದ್ಯಾರ್ಥಿನಿಯನ್ನು ಸೋಮವಾರ ಬೆಳಿಗ್ಗೆ ಕಾರಿನಲ್ಲಿ ಕಾಲೇಜಿಗೆ ಕರೆದುಕೊಂಡು ಬಂದಿದ್ದನು. ಆದರೆ, ತರಗತಿ ಆರಂಭಕ್ಕೆ ವಿಳಂಬವಾದ ಕಾರಣ ನಗರದಲ್ಲಿರುವ ತನ್ನ ಅಕ್ಕನ ಮನೆಗೆ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಅಕ್ಕ ಹಾಗೂ ಮನೆಯವರು ಪ್ರವಾಸಕ್ಕೆ ತೆರಳಿದ್ದ ಕಾರಣ, ಮನೆಯಲ್ಲಿ ಯಾರೂ ಇರಲಿಲ್ಲ. ಇದನ್ನು ದುರ್ಬಳಕೆ ಮಾಡಿಕೊಂಡ ಆರೋಪಿ ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಆಕೆ ಪ್ರತಿರೋಧ ತೋರಿದಾಗ, ವೇಲ್‌ನಿಂದ ಕುತ್ತಿಗೆ ಬಿಗಿದಿದ್ದಾನೆ. ಪ್ರಜ್ಞೆ ಕಳೆದುಕೊಂಡು ಬಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಬಡಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೊಲೆ ಬಳಿಕ ನಗರದ ಎ.ಪಿ.ಎಂ.ಸಿ ಮಾರುಕಟ್ಟೆಗೆ ತೆರಳಿದ ಆರೋಪಿ ಗೋಣಿ ಚೀಲ ತಂದಿದ್ದಾನೆ. ಆ ಚೀಲದಲ್ಲಿ ಶವವನ್ನು ತುಂಬಿಕೊಂಡು, ಸಮೀಪದ ಕುಣಿಮೆಳ್ಳಿಹಳ್ಳಿ ಬಳಿ ವರದಾ ನದಿ ಸೇತುವೆ ಕೆಳಗೆ ಶವ ಹಾಕಿ ಹೋಗಿದ್ದಾನೆ. ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿರುವುದನ್ನು ಗಮನಿಸಿದ್ದ ಆರೋಪಿ, ಬುಧವಾರ ಸೀಮೆ ಎಣ್ಣೆ ತೆಗೆದುಕೊಂಡು ಬಂದು, ಸೇತುವೆ ಬಳಿ ಬಿದ್ದಿದ್ದ ಶವವನ್ನು ಸುಟ್ಟು ಹಾಕಿದ್ದಾನೆ’ ಎಂದು ಎಸ್ಪಿ ಮಾಹಿತಿ ನೀಡಿದರು.

ಪ್ರತಿಭಟನೆ: ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಜಿಲ್ಲೆಯಾದ್ಯಂತ ಶುಕ್ರವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಶನಿವಾರವೂ ಪ್ರತಿಭಟನೆಗಳು ಮುಂದುವರಿದಿತ್ತು.

ಸಂತ್ರಸ್ತೆಯ ವಿವರ ಬಹಿರಂಗ; ಎಚ್ಚರಿಕೆ ನೀಡಿದ ಎಸ್ಪಿ

ಫೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆಯ ಕುರಿತ ಯಾವುದೇ ಮಾಹಿತಿಯನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಬಾರದು. ಆದರೆ, ಈ ಪ್ರಕರಣದಲ್ಲಿ ಕೆಲವು ಮಾಧ್ಯಮ ಹಾಗೂ ಕೆಲ ವ್ಯಕ್ತಿಗಳು ಸಾಮಾಜಿಕ ಜಾಲ ತಾಣಗಳ ಮೂಲಕ ಸಂತ್ರಸ್ತೆಯ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಇವರಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳುವಂತೆ ಮಕ್ಕಳ ರಕ್ಷಣಾ ಘಟಕ ಸೂಚನೆ ನೀಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !