ಸೋಮವಾರ, ಮೇ 23, 2022
30 °C
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ

ವೇದಿಕೆಗಳ ನೀಲನಕ್ಷೆ ಶೀಘ್ರ ಸಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ ಸೇರಿದಂತೆ ವಿವಿಧ ಮಳಿಗೆಗಳ ವಿನ್ಯಾಸವನ್ನು ಸೋಮವಾರದ ಒಳಗಾಗಿ ಅಂತಿಮಗೊಳಿಸಿ ಸಲ್ಲಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದ್ದಾರೆ.

ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ನಿರ್ಮಾಣ ಹಾಗೂ ವಿವಿಧ ಮಳಿಗೆಗಗಳ ವಿನ್ಯಾಸ ಕುರಿತಂತೆ ಎಂ.ಸಿ.ಎ. ತಂಡ ಅಧಿಕಾರಿಗಳೊಂದಿಗೆ ಗುರುವಾರ ಉದ್ದೇಶಿತ ನಿವೇಶನದ ಸ್ಥಳ ಪರಿಶೀಲನೆ ನಡೆಸಿತು.

ಎಂಜಿನಿಯರ್‌ಗಳು ಹಾಗೂ ಎಂ.ಸಿ.ಎ. ತಂಡದೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿ, ಮುಖ್ಯ ವೇದಿಕೆ ನಿರ್ಮಾಣ, ಪುಸ್ತಕ ಮಳಿಗೆಗಳ ನಿರ್ಮಾಣ ಹಾಗೂ ವಸ್ತುಪ್ರದರ್ಶನ ಮಳಿಗೆಗಳು, ಊಟದ ಪೆಂಡಾಲ್ ನಿರ್ಮಾಣ, ಮಾಧ್ಯಮ ಕೇಂದ್ರ, ಫುಡ್ ಕೋರ್ಟ್, ವಾಹನ ನಿಲುಗಡೆ, ನೋಂದಣಿ ಕೌಂಟರ್, ಸಾರ್ವಜನಿಕ ಓಡಾಟಕ್ಕೆ ರಸ್ತೆ ನಿರ್ಮಾಣ, ವಾಹನ ನಿಲುಗಡೆ ವ್ಯವಸ್ಥೆ, ಸಮಾನಾಂತರ ವೇದಿಕೆಗಳ ನಿರ್ಮಾಣ ಹಾಗೂ ವೇದಿಕೆಗಳ ನೀಲನಕ್ಷೆಗಳನ್ನು ಅಂತಿಮಗೊಳಿಸಿ ಸೋಮವಾರದೊಳಗಾಗಿ ಸಲ್ಲಿಸಲು ಸೂಚನೆ ನೀಡಿದರು.

ಸಮ್ಮೇಳನಕ್ಕೆ ಪೂರ್ವ ಸಿದ್ಧತೆಗಳು ನಿರಂತರವಾಗಿ ನಡೆಯಬೇಕು. ಸಮ್ಮೇಳನ ನಡೆಯುವ ಖಾಲಿ ಜಮೀನಿನ ಸ್ವಚ್ಛತೆ ಮತ್ತು ಸಮತಟ್ಟುಗೊಳಿಸುವ ಕಾರ್ಯ, ತಾತ್ಕಾಲಿಕ ರಸ್ತೆ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎರಡು ಸಮಾನಾಂತರ ವೇದಿಕೆ

ಮುಖ್ಯ ವೇದಿಕೆ ಹೊರತುಪಡಿಸಿ ಎರಡು ಸಮನಾಂತರ ವೇದಿಕೆ ನಿರ್ಮಾಣ ಅಗತ್ಯವಿದೆ. ಒಂದು ಸಾವಿರದಿಂದ ಒಂದೂವರೆ ಸಾವಿರ ಸಾಮರ್ಥ್ಯದ ಆಸನ ವ್ಯವಸ್ಥೆಯ ಸಮಾನಾಂತರ ವೇದಿಕೆ ಅವಶ್ಯ ಇದ್ದು, ಹಳೆ ಪಿ.ಬಿ. ರಸ್ತೆಯಲ್ಲಿರುವ ಸಿದ್ಧರಾಮೇಶ್ವರ ಸಮುದಾಯ ಭವನ, ಅಂಬೇಡ್ಕರ್‌ ಭವನ, ಜಿ.ಎಚ್. ಕಾಲೇಜು ಕ್ರೀಡಾಂಗಣದಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡುವ ಕುರಿತಂತೆ ಅಧಿಕಾರಿಗಳಿಂದ ಸಲಹೆ ಪಡೆಯಲಾಯಿತು.

ಈಗಾಗಲೇ 19 ಸಮಿತಿಗಳನ್ನು ರಚಿಸಲಾಗಿದೆ. ಸಮಿತಿವಾರು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಅನುಕೂಲವಾಗುವಂತೆ ಬೇಡಿಕೆಯ ಪಟ್ಟಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಯಿತು.

ಫೆಬ್ರುವರಿ ಕೊನೆಯ ವಾರದಲ್ಲಿ ನಿಗದಿಯಾದ ಸಮ್ಮೇಳನ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಶೀಘ್ರವೇ ದಿನಾಂಕ ನಿಗದಿಯಾಗಬಹುದು. ಸಮ್ಮೇಳನದ ಸಿದ್ಧತೆ ಕೆಲಸಗಳು ಹಿನ್ನಡೆಯಾಗಬಾರದು. ನಿರಂತರವಾಗಿ ಸಿದ್ಧತಾ ಕಾರ್ಯಗಳನ್ನು ಸಮಿತಿಗಳ ಸದಸ್ಯ ಕಾರ್ಯದರ್ಶಿಗಳು ನಡೆಸುವಂತೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿಜಯಕುಮಾರ ಸಂತೋಷ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲಪ್ಪ ಆಲದಕಟ್ಟಿ, ಕಾರ್ಯದರ್ಶಿ ಎಸ್.ಎಸ್. ಬೇವಿನಮರದ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಇಂಜನೀಯರ ಚನ್ನವೀರಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ವಿರಕ್ತಿಮಠ, ಪೌರಾಯುಕ್ತ ಪರಶುರಾಮ ಚಲವಾದಿ, ವಾ.ಕ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ಇತರ ಅಧಿಕಾರಿಗಳು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು