ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಆಯೋಗದ ಕಣ್ಣು-ಕಿವಿಯಾಗಿ ಕಾರ್ಯನಿರ್ವಹಿಸಿ: ಎಸ್.ಆರ್.ಉಮಾಶಂಕರ್

ವಿಧಾನ ಪರಿಷತ್ ಚುನಾವಣೆ: ಕೇಂದ್ರ ಸಾಮಾನ್ಯ ವೀಕ್ಷಕ ಎಸ್.ಆರ್.ಉಮಾಶಂಕರ್
Last Updated 4 ಡಿಸೆಂಬರ್ 2021, 15:25 IST
ಅಕ್ಷರ ಗಾತ್ರ

ಹಾವೇರಿ: ಮುಕ್ತ ನ್ಯಾಯ ಸಮ್ಮತ ಚುನಾವಣೆಗೆ ಸೂಕ್ಷ್ಮ ವೀಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಮತಗಟ್ಟೆಗಳ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಆಯೋಗದ ಕಣ್ಣು-ಕಿವಿಯಾಗಿ ಕಾರ್ಯನಿರ್ವಹಿಸುವಂತೆ ನಿಯೋಜಿತ ಸೂಕ್ಷ್ಮ ವೀಕ್ಷಕರಿಗೆ ಕರ್ನಾಟಕ ಸರ್ಕಾರದ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಚುನಾವಣಾ ಸಾಮಾನ್ಯ ವೀಕ್ಷಕ ಎಸ್.ಆರ್.ಉಮಾಶಂಕರ್ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ನಿಯೋಜಿತ ಸೂಕ್ಷ್ಮ ವೀಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮತದಾನ ಪ್ರಕ್ರಿಯೆ ಡಿ.10ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಡಿ.9ರಂದು ಡಿಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗಳಿಗೆ ಮತಗಟ್ಟೆ ಸಿಬ್ಬಂದಿ ಮತಪೆಟ್ಟಿಗೆಗಳೊಂದಿಗೆ ತೆರಳಲಿದ್ದಾರೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲೆಯ ಏಳು ತಾಲ್ಲೂಕು ಪಂಚಾಯಿತಿ ಕಚೇರಿಗಳಲ್ಲಿ (ರಟ್ಟಿಹಳ್ಳಿ ಹೊರತುಪಡಿಸಿ) ಮತಗಟ್ಟೆಗಳನ್ನು ತೆರೆಯಲಾಗುವುದು.

ಜಿಲ್ಲೆಯಲ್ಲಿ 230 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ಮತಗಟ್ಟೆಗೆ ಓರ್ವ ಸೂಕ್ಷ್ಮ ವೀಕ್ಷಕರನ್ನು (ಮೈಕ್ರೋ ಅಬ್ಸರ್ವರ್‌) ನೇಮಕ ಮಾಡಲಾಗುತ್ತದೆ. ಮತಗಟ್ಟೆ ಸಿಬ್ಬಂದಿಯೊಂದಿಗೆ ನಿಗದಿತ ಮತಗಟ್ಟೆಗಳಿಗೆ ತೆರಳಿ ಮತದಾನ ಪೂರ್ವ ದಿನ ಹಾಗೂ ಮತದಾನದ ದಿನ ಆಯೋಗದ ಮಾರ್ಗಸೂಚಿಯಂತೆ ಕೈಗೊಂಡಿರುವ ಸಿದ್ಧತೆಗಳು ಮತ್ತು ಮತದಾನ ಪ್ರಕ್ರಿಯೆ ಕುರಿತಂತೆ ಸೂಕ್ಷ್ಮ ವೀಕ್ಷಕರು ಉಪಸ್ಥಿತರಿದ್ದು, ಗಮನಹರಿಸಬೇಕು ಎಂದು ತಿಳಿಸಿದರು.

ಮತಗಟ್ಟೆ ಕೋಣೆಯೊಳಗೆ ಅಧಿಕೃತ ಪಾಸ್ ಹೊಂದಿದ ಒಬ್ಬ ಅಭ್ಯರ್ಥಿಯ ಪರ ಗರಿಷ್ಠ ಒಬ್ಬ ಏಜೆಂಟ್‍ರಿಗೆ ಮಾತ್ರ ಒಳಗೆ ಕೂರಲು ಅನುಮತಿ ನೀಡಬೇಕು. ಮತದಾನದ ಗೋಪ್ಯತೆಗೆ ಕುಂದುಂಟಾಗದಂತೆ ಗಮನಹರಿಸಬೇಕು. ಮತಪಟ್ಟಿಗೆಗಳು ಕಿಟಕಿ, ಬಾಗಿಲುಗಳ ಸಮೀಪ ಇರಿಸದಂತೆ ಕ್ರಮವಹಿಸಬೇಕು. ಒಬ್ಬ ಮತದಾರನಿಗೆ ಒಂದು ಮತಪತ್ರವನ್ನು ನೀಡಬೇಕು. ನೇರಳೆ ಬಣ್ಣದ ಸ್ಕೆಚ್‍ಪೆನ್‍ನಿಂದ ಮಾರ್ಕ್‌ ಮಾಡುವುದರಿಂದ ಮತ ಚಲಾಯಿಸಬೇಕಾಗಿದೆ ಎಂದರು.

ಅನಕ್ಷರಸ್ಥರು, ಅಂಧರು ಹಾಗೂ ಅಸ್ವಸ್ಥರ ಮತದಾನಕ್ಕೆ ನೆರವಾಗಲು 18 ವರ್ಷ ಮೇಲ್ಪಟ್ಟ ಒಬ್ಬ ಸಹಾಯಕರನ್ನು ನೇಮಕ ಮಾಡಿಕೊಳ್ಳಲು ಚುನಾವಣಾ ಆಯೋಗದ ಅವಕಾಶ ಕಲ್ಪಿಸಿದೆ. ಆದರೆ ಚುನಾವಣೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿ, ಚುನಾಯಿತ ಯಾವೊಬ್ಬ ಜನಪ್ರತಿನಿಧಿಗಳು ಸಹಾಯಕರಾಗಿ ಕಾರ್ಯನಿರ್ವಹಿಸುವಂತಿಲ್ಲ. ಮತದಾರನಿಗೆ ಮತದಾನ ಮಾಡಿದ ಕುರಿತಂತೆ ಫೋಟೋಗ್ರಫಿ ಮಾಡಲು ಅವಕಾಶವಿರುವುದಿಲ್ಲ. ಯಾರಿಗೆ ಮತ ಚಲಾಯಿಸುತ್ತೇನೆ ಅಥವಾ ಚಲಾಯಿಸುವೆ ಎಂಬುದನ್ನು ಬಹಿರಂಗಪಡಿಸಲು ಅವಕಾಶವಿರುವುದಿಲ್ಲ.

ಬೆಳಿಗ್ಗೆ 8ರಿಂದ ಮತದಾನ ಆರಂಭವಾಗಲಿದೆ. ಒಂದು ಮತಗಟ್ಟೆಯಲ್ಲಿ ಕನಿಷ್ಠ ಒಂಭತ್ತರಿಂದ ಗರಿಷ್ಠ ಅಂದಾಜು 25 ಮತದಾರರು ಒಳಗೊಂಡಿದ್ದಾರೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡರೂ ಮತದಾನಕ್ಕೆ ನಿಗಧಿಯಾದ ಕೊನೆಯ ಸಮಯ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಮತಗಟ್ಟೆಯಲ್ಲಿ ಉಪಸ್ಥಿತರಿರಬೇಕು. 11 ಅಂಶಗಳ ವರದಿಯನ್ನು ಸೂಕ್ಷ್ಮ ವೀಕ್ಷಕರು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಹಾಗೂ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕ ಅರವಿಂದ ಐರಣಿ ಅವರು ಸೂಕ್ಷ್ಮ ವೀಕ್ಷಕರ ಕರ್ತವ್ಯಗಳ ಕುರಿತಂತೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT