ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಲಕ್ಕಿ ಕಂಪಿನ ನಾಡು’ ಸ್ತಬ್ಧ

ಭಾನುವಾರದ ಲಾಕ್‌ಡೌನ್‌: ಬಸ್‌, ಆಟೊ, ಟ್ಯಾಕ್ಸಿ ಸಂಚಾರ ಬಂದ್, ಮುಚ್ಚಿದ್ದ ಅಂಗಡಿ ಮಳಿಗೆಗಳು
Last Updated 12 ಜುಲೈ 2020, 12:47 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಭಾನುವಾರದ ಲಾಕ್‌ಡೌನ್‌’ಗೆ ‘ಏಲಕ್ಕಿ ಕಂಪಿನ ನಾಡು’ ಸಂಪೂರ್ಣ ಸ್ತಬ್ಧವಾಗಿತ್ತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಾರಿಗೆ ಮತ್ತು ಖಾಸಗಿ ಬಸ್‌, ಆಟೊ, ಟ್ಯಾಕ್ಸಿಗಳು ರಸ್ತೆಗಿಳಿಯಲಿಲ್ಲ. ಶಾಪಿಂಗ್‌ ಕಾಂಪ್ಲೆಕ್ಸ್‌, ಕಿರಾಣಿ, ಬಟ್ಟೆ, ಜ್ಯುವೆಲರಿ, ಪ್ಲಾಸ್ಟಿಕ್‌, ಹೋಟೆಲ್‌, ರೆಸ್ಟೋರೆಂಟ್‌, ಬಾರ್‌ಗಳ ಬಾಗಿಲುಗಳು ಮುಚ್ಚಿದ್ದವು. ನಗರದ ಸಾರಿಗೆ ನಿಲ್ದಾಣ, ರೈಲ್ವೆ ನಿಲ್ದಾಣ, ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆ, ಜಾನುವಾರು ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.

ರಸ್ತೆ ಭಣಭಣ:

ನಗರದ ಹಳೇ ಪಿ.ಬಿ.ರಸ್ತೆ, ಹಾನಗಲ್‌ ರಸ್ತೆ, ಕಾಗಿನೆಲೆ ರಸ್ತೆ, ಗುತ್ತಲ ರಸ್ತೆ, ಎಂ.ಜಿ.ರಸ್ತೆಗಳು ಜನರ ಸಂಚಾರವಿಲ್ಲದೆ ಭಣಗುಡುತ್ತಿದ್ದವು.ಆಂಬುಲೆನ್ಸ್‌, ಅತ್ಯಗತ್ಯ ಸರಕು ಸಾಗಣೆ ವಾಹನ, ಕೋವಿಡ್‌ ತುರ್ತು ಸೇವೆಯಲ್ಲಿ ತೊಡಗಿದ್ದ ಸಿಬ್ಬಂದಿಗಳ ವಾಹನಗಳನ್ನು ಹೊರತುಪಡಿಸಿ, ಇತರ ವಾಹನಗಳಿಗೆ ಪೊಲೀಸರು ನಿರ್ಬಂಧ ವಿಧಿಸಿದ್ದರು.

ತರಕಾರಿ, ಹಾಲು, ಔಷಧ ಮಳಿಗೆ ಮತ್ತು ಆಸ್ಪತ್ರೆಗಳು ಎಂದಿನಂತೆಯೇ ತೆರೆದಿದ್ದವು. ಸಂಜೆ 4 ಗಂಟೆಯ ನಂತರ ಬೈಕ್‌ ಸವಾರರ ಓಡಾಟ ಸ್ವಲ್ಪ ಹೆಚ್ಚಾಗಿತ್ತು. ಲಾಕ್‌ಡೌನ್‌ ಸಂದರ್ಭದಲ್ಲೂ ಕೆಲವು ನಗರದ ಯುವಕರು ಹೆಗ್ಗೇರಿ ಕೆರೆಯಲ್ಲಿ ಮೀನು ಹಿಡಿಯುವಲ್ಲಿ ನಿರತರಾಗಿದ್ದರು.

ಕೃಷಿ ಚಟುವಟಿಕೆಗಳು ಅಬಾಧಿತ:

ಲಾಕ್‌ಡೌನ್ ದಿನವೂ ಹೊಲ–ಗದ್ದೆಗಳಲ್ಲಿ ರೈತರು ಮತ್ತು ಕೃಷಿ ಕೂಲಿಕಾರ್ಮಿಕರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು. ಬೆಳಿಗ್ಗೆಯಿಂದ ಆಗಾಗ ತುಂತುರು ಮಳೆ ಬರುತ್ತಿತ್ತು. ಅದರ ನಡುವೆಯೂ ಮುಂಗಾರು ಹಂಗಾಮಿನ ಚಟುವಟಿಕೆಗಳು ಅಬಾಧಿತರವಾಗಿ ನಡೆದವು. ರೈತರು ಮೆಕ್ಕೆಜೋಳದ ಹೊಲಗಳಲ್ಲಿ ಎಡೆಕುಂಟೆ ಹೊಡೆಯುತ್ತಿದ್ದ ದೃಶ್ಯ, ಕೂಲಿ ಕಾರ್ಮಿಕರು ಹೊಲಗಳಲ್ಲಿ ಕಳೆ ತೆಗೆಯುವ ದೃಶ್ಯಗಳು ಕಂಡುಬಂದವು.

ಮಿಶ್ರ ಪ್ರತಿಕ್ರಿಯೆ:

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರ ಲಾಕ್‌ಡೌನ್‌ ಜಾರಿಗೊಳಿಸಿದ ಮಾದರಿಯಲ್ಲೇ, ಹಾವೇರಿ ಜಿಲ್ಲೆಯಲ್ಲೂ ಲಾಕ್‌ಡೌನ್‌ ಜಾರಿಗೊಳಿಸಬೇಕೇ? ಕುರಿತ ಪ್ರಶ್ನೆಗಳಿಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

‘ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಹೀಗಾಗಿ ಲಾಕ್‌ಡೌನ್‌ ಅನ್ನು ನಮ್ಮ ಜಿಲ್ಲೆಯಲ್ಲೂ ಜಾರಿಗೊಳಿಸಬೇಕು ಎಂದು ಕೆಲವರು ಒತ್ತಾಯಿಸಿದರು. ಮತ್ತೆ ಕೆಲವರು, ‘ನಿತ್ಯ ಲಾಕ್‌ಡೌನ್‌ ಜಾರಿಗೊಳಿಸಿದರೆ ಬಡವರ ಬದುಕು ಮೂರಾಬಟ್ಟೆಯಾಗುತ್ತದೆ’ ಎಂದು ಲಾಕ್‌ಡೌನ್‌ಗೆ ವಿರೋಧ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT