ಭಾನುವಾರ, ಮೇ 9, 2021
26 °C
ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಬಾನುವಳ್ಳಿ ಸೂಚನೆ

ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ. ಕೋವಿಡ್ ಹೆಚ್ಚಳವಾಗಿರುವುದರಿಂದ ಕೋವಿಡ್ ನಿಯಂತ್ರಣಕ್ಕೆ ಆದ್ಯತೆ ನೀಡಿ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾರ್ಚ್ ತಿಂಗಳ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

‘ಜಲಜೀವನ ಮಿಷನ್’ ಯೋಜನೆಯಡಿ ಪೈಪ್‍ಲೈನ್‌ ಕಾರ್ಯ ಪ್ರಗತಿಯಲ್ಲಿದ್ದು, ಹಲವು ಗ್ರಾಮಗಳಲ್ಲಿ ಸರಿಯಾದ ರೀತಿಯಲ್ಲಿ ಸಮೀಕ್ಷೆಯಾಗಿಲ್ಲ ಎಂಬ ದೂರುಗಳಿವೆ. ಸಂಬಂಧಿಸಿದ ಎಂಜಿನಿಯರ್‌ ಕುರಿತಂತೆ ಕ್ರಮವಹಿಸಿ ಸಮಸ್ಯೆ ನಿವಾರಣೆ ಮಾಡಲು ಸೂಚಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಏಜೆನ್ಸಿಗಳಿಗೆ ಹಣ ನೀಡಲಾಗುತ್ತಿದೆ. ಆದರೂ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ದುರಸ್ತಿಯಲ್ಲಿರುವ ಶುದ್ಧ ನೀರಿನ ಘಟಕಗಳ ರಿಪೇರಿಗೆ ಸಂಬಂಧಪಟ್ಟ ಏಜೆನ್ಸಿಗಳಿಗೆ ತಾಕೀತು ಮಾಡುವಂತೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಮಾತನಾಡಿ, ‘ಜಿಲ್ಲೆಯ ತಾಲ್ಲೂಕುಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳೊಂದಿಗೆ ನೀರಿನ ಅಭಾವವಿರುವ ಗ್ರಾಮಗಳ ಕುರಿತು ಚರ್ಚಿಸಲಾಗುವುದು. ಜಿಲ್ಲಾ ಪಂಚಾಯಿತಿ ಸದಸ್ಯರು ಒಂದು ವಾರದೊಳಗೆ ಇಂತಹ ಗ್ರಾಮಗಳ ಪಟ್ಟಿ ನೀಡಿದಲ್ಲಿ ಟಾಸ್ಕ್‌ಫೋರ್ಸ್‌ ಮಂಜೂರು ಮಾಡಲಾಗುವುದು’ ಎಂದು ತಿಳಿಸಿದರು.

‘ಜಲಜೀವನ್ ಮಿಷನ್’ ಯೋಜನೆಯಡಿ 372 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. 306 ಟೆಂಡರ್ ಪೋರ್ಟ್ ಮಾಡಲಾಗಿದೆ ಹಾಗೂ 162 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 62 ಕಾಮಗಾರಿಗೆ ಮರು ಟೆಂಡರ್ ಕರೆಯಲಾಗಿದೆ. 3ನೇ ಸಲ ಟೆಂಡರ್ ಕರೆದಲ್ಲಿ ಯಾವುದೇ ಟೆಂಡರ್ ಬಾರದಿದ್ದಲ್ಲಿ ಮೂರರಿಂದ ನಾಲ್ಕು ಕಾಮಗಾರಿಗಳನ್ನು ಸೇರಿಸಿ ಒಂದು ಪ್ಯಾಕೇಜ್ ಮಾಡಿ ಟೆಂಡರ್ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆ ಕುರಿತು ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಬಿ. ಮಳ್ಳಳ್ಳಿ ಅವರು, 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 45 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ. 42 ಹೊಸ ಕೆರೆ ನಿರ್ಮಾಣ, 67 ಕೆರೆಗಳ ಸೌಂದರ್ಯೀಕರಣ, ಗೋಕಟ್ಟೆ ಸೇರಿದಂತೆ 262 ಜಲ ಮೂಲಗಳ ಪುನಶ್ಚೇತನ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿಲ್‌ ಪಾಸ್‌ ಮಾಡುವುದಿಲ್ಲ: ಸಿಇಒ

ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಚಿಸಿದರು. ಹೊಸ ಕೊಳವೆಬಾವಿ ಕೊರೆಸಲು ಅವಕಾಶ ಇಲ್ಲದಿದ್ದರೂ ಕೊಳವೆಬಾವಿ ಕೊರೆಸಿರುವ ಎಂಜಿನಿಯರ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇಲಾಖೆಯಿಂದ ಹಣ ಪಾವತಿಸಲು ಬಿಲ್ ಪಾಸ್ ಮಾಡುವುದಿಲ್ಲ ಎಂದು ಸಿಇಒ ಮೊಹಮ್ಮದ್‌ ರೋಶನ್‌ ಎಚ್ಚರಿಸಿದರು.

‘ಪರವಾನಗಿ ರದ್ದು ಮಾಡಿ’

ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟವಾಗದಂತೆ ಎಚ್ಚರವಹಿಸಬೇಕು. ನಿಗದಿತ ದರಕ್ಕಿಂತ ಅಧಿಕ ದರಕ್ಕೆ ಮಾರಾಟ ಮಾಡುವ ವ್ಯಾಪಾರಿಗಳ ಪರವಾನಗಿ ರದ್ದು ಮಾಡಬೇಕು. ಮುಂಗಾರು ಹಂಗಾಮಿಗೆ ಗೊಬ್ಬರ ಅಭಾವ ಉಂಟಾಗದಂತೆ ಅಗತ್ಯ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ರಸಗೊಬ್ಬರವನ್ನು ಸೊಸೈಟಿಗಳ ಮೂಲಕ ಯಾವುದೇ ಗೊಂದಲ, ಸಂಘರ್ಷಗಳು ಉಂಟಾಗದಂತೆ ವ್ಯವಸ್ಥಿತವಾಗಿ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಸಿಇಒ ಮೊಹಮ್ಮದ್‌ ರೋಶನ್‌ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಜಿ.ಪಂ.ಯೋಜನಾಧಿಕಾರಿ ನಿರ್ಮಲಾ ಎನ್.ಕೆ. ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.