ಗುರುವಾರ , ಆಗಸ್ಟ್ 6, 2020
28 °C

ರಾಜೇಶ್ವರಿ ರವಿ ಸಾರಂಗಮಠ, ಕೈದಿಗಳ ಪಾಲಿಗೆ ಇವರೇ ‘ಅಕ್ಷರ ಅಕ್ಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸುಸಜ್ಜಿತ ವಾತಾವರಣದಲ್ಲಿ ಕಪ್ಪು ಹಲಿಗೆ ಮೇಲೆ ಬಿಳಿಯ ಅಕ್ಷರ ಬರೆದು ಪಾಠ ಹೇಳುವ ಶಿಕ್ಷಕರನ್ನು ನೋಡಿದ್ದೇವೆ. ಸನ್ಮಾನಗಳ ಜತೆಗೆ ಶ್ರಮದ ಫಲವಾಗಿ ಸಂಬಳ ಪಡೆಯುವ ಬಡ ಗುರುಗಳನ್ನೂ ಕಂಡಿದ್ದೇವೆ. ಆದರೆ, ಏನನ್ನೂ ನಿರೀಕ್ಷಿಸದೇ ಜೈಲಿನಲ್ಲಿ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸುವ ರಾಜೇಶ್ವರಿ ರವಿ ಸಾರಂಗಮಠ, ಬಂದಿಗಳ ಪಾಲಿನ ‘ಅಕ್ಷರ ಅಕ್ಕ’ ಎನಿಸಿಕೊಂಡಿದ್ದಾರೆ.

ಗುರುವಾರ ದೇಶದಾದ್ಯಂತ ಶಿಕ್ಷಕರ ದಿನಾಚರಣೆ. ಗುರುವಿಗೆ ಸಲ್ಲಿಸಬಹುದಾದ ಗೌರವದ ದಿನ. ‘ನಾನಾ ರೂಪದಲ್ಲಿ ಗುರು ಇರುವನು. ನಾನಾ ಅವತಾರಗಳಲ್ಲಿ ಗುರು ಬರುವನು’ ಎಂಬ ಮಾತಿಗೊಂದು ಅಪರೂಪದ ಸಾಕ್ಷಿ ಶಿಕ್ಷಕಿ ರಾಜೇಶ್ವರಿ ರವಿ ಸಾರಂಗಮಠ.

1982ರಲ್ಲಿ ಜನಿಸಿದ ರಾಜೇಶ್ವರಿ, ಮೂಲತಃ ಅಕ್ಕಿಆಲೂರಿನವರು. ಓದಿದ್ದು ಕೇವಲ ಪಿಯುಸಿ. ಬಾಲ್ಯದಿಂದಲೂ ನಾಟಕ, ಹಾಡು, ಏಕಪಾತ್ರಾಭಿನಯ ಹಾಗೂ ಸಮಾಜ ಸೇವೆಯ ಗುಂಗು. ತಂದೆ ಚಂದ್ರಶೇಖರಯ್ಯ. ತಾಯಿ ಶಕುಂತಲಾ. ಪತಿ ರವಿ ಅವರು ಸದ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಕನ್ನಡ ನಾಡು ಸಾಕ್ಷರರ ನಾಡು’ ಆಂದೋಲನದ ಮೂಲಕ 1998ರಿಂದ ಅಕ್ಷರ ಕಲಿಸುವ ಪಯಣ ಆರಂಭಿಸಿದ ರಾಜೇಶ್ವರಿ, ಆರು ತಿಂಗಳ ಕಾಲ ಜಿಲ್ಲಾ ಕಾರಾಗೃಹದ ಬಂದಿಗಳಿಗೆ ಅಕ್ಷರ ಕಲಿಸುವ ಕಾಯಕ ಮಾಡಿದ್ದಾರೆ. 2009ರಲ್ಲಿ ಎಂದೂ ಶಾಲೆಗೆ ಹೋಗದ ಗುತ್ತಲದ ವಿಜಯಾ ಮೈಲಾರ ಕಳ್ಳಿಮಠ ಎಂಬ ಅಂಗವಿಕಲ ಬಾಲಕಿಗೂ ಅಕ್ಷರಾಭ್ಯಾಸ ಮಾಡಿಸಿ, ಆಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟುವ ಮಟ್ಟಿಗೆ ಪ್ರಯಾಸ ತೆಗೆದುಕೊಂಡಿದ್ದರು.

ಕಳೆದ ಆಗಸ್ಟ್‌ನಲ್ಲಿ ಜಿಲ್ಲಾ ಕಾರಾಗೃಹದ 21 ಅನಕ್ಷರಸ್ಥ ಕೈದಿಗಳಿಗೆ, ಮೂಲಸಾಕ್ಷರತಾ ಪರೀಕ್ಷೆಯನ್ನು ನಡೆಸಿದರು. ಸದ್ಯದಲ್ಲೇ ಅವರಿಗೆಲ್ಲ ಪ್ರಮಾಣ ಪತ್ರ ವಿತರಣೆ ಆಗಲಿದೆ. ಲೇಖಕಿಯೂ ಆಗಿರುವ ರಾಜೇಶ್ವರಿ, ‘ಹೆಣ್ಣು ಪ್ರಣತಿ’ ಹಾಗೂ ‘ಹೆಣ್ಣು ಹೃದಯ’ ಎಂಬ ಕೃತಿಗಳನ್ನು ರಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು