ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ

ಪಶ್ಚಿಮ ಶಿಕ್ಷಕರ ಮತಕ್ಷೇತ್ರ: 162 ಅಧಿಕಾರಿಗಳ ನೇಮಕ– ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
Last Updated 11 ಜೂನ್ 2022, 13:12 IST
ಅಕ್ಷರ ಗಾತ್ರ

ಹಾವೇರಿ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಜೂನ್ 13ರಂದು ಮತದಾನ ಜರುಗಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಮತದಾನವು ಸುಗಮ ಹಾಗೂ ಮುಕ್ತವಾಗಿ ಜರುಗಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೂನ್ 13ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಜೂನ್ 15ರಂದು ಬೆಳಗಾವಿ ಜ್ಯೋತಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲ್ಲಿ ನಡೆಯಲಿದೆ. ಜೂನ್ 17ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ.

ಸಹಾಯವಾಣಿ:

ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಆಯಾ ಮತದಾರರಿಗೆ ಅವರ ಕ್ರಮಸಂಖ್ಯೆ ಮಾಹಿತಿ ನೀಡಲು ಓರ್ವ ಬಿ.ಎಲ್.ಓ.ಗಳನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಕಾರ್ಯಕರ್ತರನ್ನು ನೇಮಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು 30 ಜನ ಹಾಗೂ 26 ಜನ ಸೂಕ್ಷ್ಮ ವೀಕ್ಷಕರು ಸೇರಿದಂತೆ ಒಟ್ಟು 162 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮತದಾನ ಮಾಡುವ ಎಲ್ಲ ಮತದಾರರ ಬಲಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಚ್ಚಲಾಗುವುದು.

ಮಸ್ಟರಿಂಗ್- ಡಿ ಮಸ್ಟರಿಂಗ್:

ಜಿಲ್ಲೆಯ 8 ತಾಲ್ಲೂಕುಗಳ ಕೇಂದ್ರ ಸ್ಥಾನದಲ್ಲಿರುವ ಎಲ್ಲ ತಹಶೀಲ್ದಾರ್‌ ಕಾರ್ಯಾಲಯಗಳಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯ ಜರುಗಲಿದೆ. ಮತದಾನ ಮುಕ್ತಾಯದ ನಂತರ ಮತಗಟ್ಟೆಗಳಿಂದ ಎಲ್ಲ ತಾಲ್ಲೂಕಿನ ಡಿ-ಮಸ್ಟರಿಂಗ್ ಕೇಂದ್ರಗಳಲ್ಲಿ ತಹಶೀಲ್ದಾರರು ಸೀಲಾದ ಮತಪೆಟ್ಟಿಗೆಗಳು ಮತ್ತು ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ದಾಖಲೆಗಳನ್ನು ಸಂಗ್ರಹಿಸುವರು.

ತಾಲ್ಲೂಕು ಕೇಂದ್ರಗಳಿಂದ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮತಪೆಟ್ಟಿಗೆಗಳು ಮತ್ತು ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ದಾಖಲೆಗಳನ್ನು ಅಗತ್ಯ ಪೋಲಿಸ್ ಬಂದೋಸ್ತ್ ಮೂಲಕ ಸಾಗಾಣಿಕೆ ಮಾಡಲಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಲ್ಲ ತಾಲ್ಲೂಕುಗಳ ಮತಪೆಟ್ಟಿಗೆಗಳನ್ನು ಪಡೆದ ನಂತರ ಇಲ್ಲಿಂದ ಅಗತ್ಯ ಪೊಲೀಸ್‌ ಭದ್ರತೆಯೊಂದಿಗೆ ಬೆಳಗಾವಿಯ ಜ್ಯೋತಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸ್ಥಾಪಿಸಿದ ಭದ್ರತಾ ಕೊಠಡಿಗೆ ತಲುಪಿಸಿ, ಚುನಾವಣಾಧಿಕಾರಿಗಳಿಗೆ ಜಿಲ್ಲೆಯ ಎಲ್ಲ ಮತಪೆಟ್ಟಿಗೆ ಹಾಗೂ ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ದಾಖಲೆಗಳನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

ಮತದಾನಕ್ಕೆ ವಿಶೇಷ ಸಾಂದರ್ಭಿಕ ರಜೆ

ಹಾವೇರಿ: ಪಶ್ವಿಮ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಸಂಬಂದಿಸಿದಂತೆ ಜೂನ್ 13ರಂದು ಸೋಮವಾರ ಮತದಾನ ನಡೆಯಲಿದೆ. ಮತದಾರರು ಮತಚಲಾಯಿಸಲು ಅಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ ತಿಳಿಸಿದ್ದಾರೆ.

ಈ ವಿಧಾನ ಪರಿಷತ್ತಿನ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು ಸೇರಿಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕಾಯಂ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.

ಪರ್ಯಾಯ ಗುರುತಿನ ಚೀಟಿ

ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು ಭಾರತ ಚುನಾವಣಾ ಆಯೋಗದ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಡ್ರೈವಿಂಗ್ ಲೈಸನ್ಸ್‌, ಪಾನ್ ಕಾರ್ಡ್‌, ಇಂಡಿಯನ್ ಪಾಸಪೋರ್ಟ್, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನೌಕರರಿಗೆ ನೀಡಿರುವ ಸೇವಾ ಗುರುತಿನ ಚೀಟಿ, ಲೋಕಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಕಚೇರಿಯಿಂದ ನೀಡಲಾದ ಗುರುತಿನ ಚೀಟಿ, ಶಿಕ್ಷಕರ ಮತಕ್ಷೇತ್ರಕ್ಕೆ ಅರ್ಹ ಶಿಕ್ಷಕರಿಗೆ ಶಿಕ್ಷಣ ಸಂಸ್ಥೆಗಳಿಂದ ನೀಡಲಾದ ಸೇವಾ ಗುರುತಿನ ಚೀಟಿಯನ್ನು ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT