ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪ್ರಾಬಲ್ಯ

ಗ್ರಾಮ ಪಂಚಾಯಿತಿ ಚುನಾವಣೆ: ಬೆಂಬಲಿಗರಿಂದ ಪಟಾಕಿ ಸಿಡಿಸಿ, ಸಂಭ್ರಮಾಚರಣೆ
Last Updated 31 ಮಾರ್ಚ್ 2021, 15:49 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ನಾಲ್ಕು ತಾಲ್ಲೂಕುಗಳ 12 ಗ್ರಾಮ ಪಂಚಾಯಿತಿಗಳಿಗೆ ನಡೆದಿದ್ದ ಚುನಾವಣೆಯ ‘ಮತ ಎಣಿಕೆ’ ಪ್ರಕ್ರಿಯೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬುಧವಾರ ನಡೆದು, ಫಲಿತಾಂಶ ಹೊರಬಿದ್ದಿದೆ.

ರಾಣೆಬೆನ್ನೂರು ತಾಲ್ಲೂಕಿನ 6 ಬ್ಯಾಡಗಿ ತಾಲ್ಲೂಕಿನ 2, ಶಿಗ್ಗಾವಿ ತಾಲ್ಲೂಕಿನ 1 ಹಾಗೂ ಹಾನಗಲ್‌ ತಾಲ್ಲೂಕಿನ 3 ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ನಡೆದ ಮತ ಎಣಿಕೆ ಕಾರ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪ್ರಾಬಲ್ಯ ಸಾಧಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತು.

ಹಾನಗಲ್‌ ವರದಿ

ಹಾನಗಲ್ ತಾಲ್ಲೂಕಿನ 3 ಗ್ರಾಮ ಪಂಚಾಯ್ತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಪಕ್ಷದ ಬಾವುಟ ಹಿಡಿದು ಕುಣಿದಾಡಿದರು. ಪರಸ್ಪರ ಬಣ್ಣ ಹಚ್ಚಿಕೊಂಡು ಪಟಾಕಿ ಸಿಡಿಸಿ ಗೆಲುವಿನ ಖುಷಿ ಹೆಚ್ಚಿಸಿದರು.

ಹುಲ್ಲತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಸನಾಬಾದಿ ಗ್ರಾಮದ ವಿಜೇತ ಅಭ್ಯರ್ಥಿಗಳ ಜೊತೆಯಲ್ಲಿ ಗ್ರಾಮದ ಬಿಜೆಪಿ ಮುಖಂಡರಾದ ಸಿ.ಕೆ. ಪಾಟೀಲ, ಸಂಕನಗೌಡ ಪಾಟೀಲ, ಫಕ್ಕೀರೇಶ ಹೊಸಮನಿ, ಶಬ್ಬೀರ್ ಮಲ್ಲಿಗಾರ, ಬಾಬಾಜಾನ್ ಕಾಲೇನವರ, ಮಲ್ಲೇಶಪ್ಪ ಕೂಡ್ಲರ, ಸೋಮಪ್ಪ ನೇರ್ಕಿ, ಬಸವರಾಜ ಅರಳೇಶ್ವರ ಮತ್ತಿತರರು ಪಟಾಕಿ ಸಿಡಿಸಿದರು.

ಕೂಡಲ, ಹಾವಣಗಿ ಮತ್ತು ಹುಲ್ಲತ್ತಿ ಗ್ರಾಮ ಪಂಚಾಯ್ತಿನ ಒಟ್ಟು 41 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 101 ಅಭ್ಯರ್ಥಿಗಳು ಕಣದಲ್ಲಿದ್ದರು. ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿತು. ಸಂಜೆ ತನಕ ಮತ ಎಣಿಕೆ ನಡೆಯಿತು. ಮತ ಎಣಿಕೆಗಾಗಿ 6 ಟೇಬಲ್‌ ಸ್ಥಾಪಿಸಲಾಗಿತ್ತು. 18 ಜನ ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.

ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್, ಶಿರಸ್ತೇದಾರ್ ಎಸ್.ಆರ್.ಸಿದ್ಧನಗೌಡ, ಚುನಾವಣಾಧಿಕಾರಿ ವಸಂತ ನಾಯ್ಕ, ಯಜ್ಞೇಶ ನಾಯ್ಕ, ದಿನೇಶ ಸಿಂಗಾಪೂರ, ಮೂರು ಗ್ರಾಮ ಪಂಚಾಯ್ತಿ ಸೆಕ್ಟರ್ ಅಧಿಕಾರಿಗಳಾದ ಮಂಜುನಾಥ ಬಣಕಾರ, ಸಂತೋಷಕುಮಾರ, ಗಿರೀಶ ರಡ್ಡೇರ ಇದ್ದರು.

ಶಿಗ್ಗಾವಿ ವರದಿ

ಹನುಮರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೋಟಳ್ಳಿ 1, ಕಂಕನವಾಡ 1, ಚಾಕಾಪುರ 3, ಚಿಕ್ಕನೆಲ್ಲೂರು 1, ಹಾಗೂ ಹನುಮರಹಳ್ಳಿ 3, ಸ್ಥಾನ ಸೇರಿದಂತೆ ಒಟ್ಟು 9 ಸ್ಥಾನಗಳಿಗೆ ಚುನಾವಣೆ ಫಲಿತಾಂಶ ಪ್ರಕಟವಾಯಿತು.

ಅದರಲ್ಲಿ ಹನುಮರಹಳ್ಳಿ ಗ್ರಾಮದ ನೀಲಮ್ಮ ಶಿವಪ್ಪ ಆಡಿನ, ಶೇಕಪ್ಪ ನರಸಪ್ಪ ನೀರಲಗಿ, ಶಿಲ್ಪಾ ಫಕ್ಕೀರಗೌಡ ಗುಡ್ಡನಗೌಡ್ರ, ಮೋಟಳ್ಳಿ ಗ್ರಾಮದ ರೇಣವ್ವ ಸುರೇಶ ಹರಿಜನ, ಕಂಕನವಾಡ ಗ್ರಾಮದ ದ್ಯಾಮನಗೌಡ ಪಾಟೀಲ, ಚಾಕಾಪುರದ ಚನ್ನವ್ವ ಹನುಮಂತಪ್ಪ ಬಾಲೇಹೊಸೂರ, ಬಿ.ಸಿ.ಪಾಟೀಲ, ಕುಸುಮವ್ವ ಮಹಾಲಿಂಗನಗೌಡ ಪಾಟೀಲ, ಚಿಕ್ಕನೆಲ್ಲೂರ ಗ್ರಾಮದ ಬಸವರಾಜ ಹನುಮಂತಪ್ಪ ಹರಿಜನ ಅವರು ವಿಜೇತರಾಗಿದ್ದಾರೆ.

ಮತ ಎಣಿಕೆ ಫಲಿತಾಂಶ ಬರುತ್ತಿದಂತೆ ಗ್ರಾಮಸ್ಥರು, ಅಭ್ಯರ್ಥಿಗಳ ಅಭಿಮಾನಿಗಳು ಹೆಗಲ ಮೇಲೆ ಕೂರಿಸಿಕೊಂಡು ಕುಣಿದು ಕುಪ್ಪಳಿಸುವ ದೃಶ್ಯ ಕಂಡು ಬಂದಿತು. ತಹಶೀಲ್ದಾರ್ ಮಂಜುನಾಥ ಮುನೋಳಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಕಾಗಿನೆಲೆ: ಕಾಂಗ್ರೆಸ್‌ ಬೆಂಬಲಿಗರ ಪಾರಮ್ಯ

ಬ್ಯಾಡಗಿ: ತಾಲ್ಲೂಕಿನ ಎರಡು ಗ್ರಾಮ ಪಂಚಾಯ್ತಿಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ತಲಾ ಒಂದೊಂದು ಪಂಚಾಯ್ತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ.

ಇದರಿಂದ ಬಿಜೆಪಿ ಬೆಂಬಲಿತರು 13 ಹಾಗೂ ಕಾಂಗ್ರೆಸ್‌ ಬೆಂಬಲಿತರು 7 ಪಂಚಾಯ್ತಿಗಳಲ್ಲಿ ಅಧಿಕಾರ ಪಡೆದಂತಾಯಿತು. ತಡಸ ಗ್ರಾಮ ಪಂಚಾಯ್ತಿಯ ಒಂದು ಕ್ಷೇತ್ರದ ಫಲಿತಾಂಶ ಮೂರು ಗಂಟೆಯ ಬಳಿಕ ಪ್ರಕಟಗೊಂಡಿತು. ಕಾಗಿನೆಲೆ ಪಂಚಾಯ್ತಿಯ ಒಂದು ಕ್ಷೇತ್ರದ ಫಲಿತಾಂಶ ಸಂಜೆ 6.30ರ ಬಳಿಕ ಪ್ರಕಟಗೊಂಡಿತು.

ಮತ ಎಣಿಕೆ ಕೇಂದ್ರಕ್ಕೆ ಹಾವೇರಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಭೇಟಿ ನೀಡಿ ಕೋವಿಡ್ ನಿಯಮಾನುಸಾರ ಎಣಿಕೆ ಕಾರ್ಯ ನಡೆಯುತ್ತಿರುವ ಕುರಿತು ಪರಿಶೀಲನೆ ನಡೆಸಿದರು. ತಹಶೀಲ್ದಾರ್‌ ರವಿಕುಮಾರ ಕೊರವರ, ಉಪತಹಶೀಲ್ದಾರ ರವಿ ಭೋಗಾರ, ಸೆಕ್ಟರ್ ಅಧಿಕಾರಿ ಮಹೇಶ ಮರೆಣ್ಣನವರ, ಶಿರಸ್ತೇದಾರ ಆರ್.ಎಂ.ಮುಗುಳಿ, ರಾಜಪ್ಪ ಬಂಕಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT