ಭಾನುವಾರ, ಮೇ 29, 2022
23 °C
ಚುರುಕು ಸಂಭಾಷಣೆ, ಪಕ್ವ ಭಾವಾಭಿನಯದಿಂದ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದ ನಾಟಕ

ಹಾವೇರಿ: ರೈತರ ಸಂಕಟ ತೆರೆದಿಟ್ಟ ‘ಜನ ಶತ್ರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಅದ್ಧೂರಿ ರಂಗ ಪರಿಕರ, ವಸ್ತ್ರಾಲಂಕಾರಗಳಿಲ್ಲದೆಯೂ ಒಂದು ಗಂಟೆಯ ಕಾಲ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿಟ್ಟು, ಮನಗೆಲ್ಲುವಲ್ಲಿ ‘ಜನ ಶತ್ರು’ ನಾಟಕ ಯಶಸ್ವಿಯಾಯಿತು. 

ಐವರು ಪಾತ್ರಧಾರಿಗಳು ತಮ್ಮ ಮನೋಜ್ಞ ಅಭಿನಯದಿಂದ ರಂಗಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು. ಉಸಿರು ಬಿಗಿ ಹಿಡಿದು ನೋಡುವ ನಾಟಕ ‘ಜನ ಶತ್ರು’ ಇಲ್ಲಿಯ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಮಂಗಳವಾರ ಪ್ರದರ್ಶನಗೊಂಡಿತು. 

ಹೆವ್ರಿ ಇಬ್ಸನ್ ಅವರ ‘ಜನತೆಯ ಶತ್ರು’ (An enemy of the people) ಎಂಬ ನಾಟಕ ಆಧಾರಿತ ‘ಜನ ಶತ್ರು’ ನೋಡುಗನ ಮನಸ್ಸು ಮತ್ತು ಸಂವೇದನೆಗಳನ್ನು ಹುರಿಗೊಳಿಸಿತು. ನಿತ್ಯ ನಾವೆಲ್ಲ ಓದುವ ರೈತರ ಆತ್ಮಹತ್ಯೆಯ ನಂತರ ಹುಟ್ಟುವ ನೋವು ಸಂಕಟ ತಲ್ಲಣಗಳಿಗೆ ಒಂದು ಪ್ರತಿರೋಧದ ಧ್ವನಿ ಎತ್ತುವ ಶಕ್ತಿಯುತ ನಾಟಕ ಎನಿಸಿತು. 

ಹತ್ತಿ ಬೆಳೆಯುವ ರೈತನೊಬ್ಬ, ಅನಾರೋಗ್ಯದಿಂದ ಬಳಲುವ ತನ್ನ ಹೆಂಡತಿಯ ಚಿಕಿತ್ಸೆಗಾಗಿ ಸಾಲ ಮಾಡುತ್ತಾನೆ. ಹಳೆಯ ಸಾಲ ತೀರಿಸದ ಕಾರಣ ಬ್ಯಾಂಕು ಸಾಲ ನೀಡಲು ನಿರಾಕರಿಸಿದಾಗ ಅನಿವಾರ್ಯವಾಗಿ ಮೀಟರ್ ಬಡ್ಡಿ ಲೇವಾದೇವಿ ಮಾಡುವ ದಲ್ಲಾಳಿ ಬಳಿ ಸಾಲ ಪಡೆಯುತ್ತಾನೆ. ಆದರೆ, ಬೆಳದ ಹತ್ತಿಗೆ ಹುಳ ಹತ್ತಿ ನಾಶವಾದಾಗ ಅನಿವಾರ್ಯವಾಗಿ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಕಥೆ ಈ ರೀತಿ ಆರಂಭವಾಗಿ ಆನಂತರ ರೈತನ ಹೆಂಡತಿ ಗಂಡನ ಸಾಲ ಮರುಪಾವತಿಸಲಾಗದೆ ದಲ್ಲಾಳಿ ಬ್ಯಾಂಕುಗಳ ಕಾಟದ ವಿರುದ್ಧ ಹೋರಾಟಕ್ಕೆ ಇಳಿಯುತ್ತಾಳೆ. ತನ್ನಂತೆ ನೋವುಂಡ ವಿಧವಾ ರೈತ ಹೆಂಡತಿಯರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಾಳೆ. ಇವಳ ಹೋರಾಟಕ್ಕೆ ಪ್ರತಿಯಾಗಿ ಪೊಲೀಸ್‌, ಶಾಸಕ, ದಲ್ಲಾಳಿ ಎಲ್ಲರೂ ಒಗ್ಗೂಡಿ ಹೋರಾಟವನ್ನು ಬಗ್ಗು ಬಡಿಯುವ ಪ್ರಯತ್ನ ಮಾಡುತ್ತಾರೆ. ರೈತ ಮಹಿಳೆಯರೆಲ್ಲರೂ ಒಂದುಗೂಡಿದರೂ ಅವಳು ಕರೆದ ಸಭೆಗೆ ಯಾರೂ ಬರದಂತೆ ನೋಡಿಕೊಳ್ಳುತ್ತಾರೆ.

ಕಥಾನಾಯಕಿ ಅಂತಿಮವಾಗಿ ಒಬ್ಬಂಟಿಯಾದರೂ ಸರಿ ಸಾಮಾಜಿಕ ಜಾಲತಾಣಗಳ ಮೂಲಕ ದನಿ ಎತ್ತುತ್ತಾಳೆ. ಇಷ್ಟೆಲ್ಲವುಗಳ ನಡುವೆ ಇವಳಿಗೆ ಸಾಥ್‌ ನೀಡುವ ಏಕೈಕ ವ್ಯಕ್ತಿ ಒಬ್ಬ ಪ್ರಜ್ಞಾವಂತ ಪತ್ರಕರ್ತ ಮಾತ್ರ.

ಎದೆ ತಟ್ಟುವ ಚುರುಕು ಸಂಭಾಷಣೆ, ಪಕ್ವ ಭಾವಾಭಿನಯ, ಸಂಭಾಷಣೆಗಳ ನಡುವಿನ ಮೌನ ಬಳಸುವಿಕೆ ಇಡೀ ಪ್ರೇಕ್ಷಕ ಸಮುದಾಯವನ್ನು ಢವಢವಗುಟ್ಟುವಂತೆ ಉಸಿರು ಬಿಗಿ ಹಿಡಿಸಿತ್ತು. ನಾಟಕದ ಕಥಾ ನಾಯಕಿ ರೈತನ ಹೆಂಡತಿ ಕೊನೆಯಲ್ಲಿ ‘ಹುಸಿ ಹುತ್ತುಗಳ ನಡುವೆ, ಪೊಳ್ಳು ಮಾತುಗಳ ಬಹುಮತದ ಈ ವ್ಯವಸ್ಥೆಯಲ್ಲಿ, ಅಮಾಯಕ ಜನರ ಸತ್ಯಧ್ವನಿ ಸಾಯಬಾರದು. ಸತ್ಯಕ್ಕಾಗಿ ಒಂಟಿಯಾದರೂ ಸರಿಯೇ ನಾವೆಲ್ಲ ದನಿ ಎತ್ತಬೇಕು’ ಎಂದು ಹೇಳುವ ಮಾತು ಇಂದಿನ ವ್ಯವಸ್ಥೆಗೆ ಚಾಟಿಯಾಗಿತ್ತು. ಅಂತರಾಳವನ್ನು ಶುದ್ಧಗೊಳಿಸಿ ಹೋರಾಟಕ್ಕೆ ಪ್ರೇರೇಪಿಸುವಂತ್ತಿತ್ತು.

ನಾಟಕದ ಕೇಂದ್ರವಾದ ರೈತನ ಪತ್ನಿಯಾಗಿ ಶಿಲ್ಪಾ ಎಸ್., ದಲ್ಲಾಳಿ ಪಾತ್ರದಲ್ಲಿ ನಾಗರಾಜ ಕಾಸಂಬಿ. ಶಾಸಕ ಪಾತ್ರದಲ್ಲಿ ಜಗದೀಶ ಕಟ್ಟಿಮನಿ, ರೈತ ಮತ್ತು ಪತ್ರಕರ್ತನಾಗಿ ಗಣೇಶ ಹೆಗ್ಗೋಡ ಮತ್ತು ನಿಶಾಂತ ಮುತ್ತಣ್ಣ ಪಾತ್ರಗಳಿಗೆ ಜೀವ ತುಂಬಿದರು.

ಸುರೇಂದ್ರನಾಥ ರಚಿಸಿ ನಿರ್ದೇಶಿಸಿದ ನಾಟಕದ ಹಿನ್ನಲೆಯಲ್ಲಿ ಡಾ.ಶ್ರೀಪಾದ ಭಟ್ಟ, ಪ್ರಭು ಗುರಪ್ಪನವರ, ನಾಗರಾಜ ಧಾರೇಶ್ವರ, ಶಿವಮೂರ್ತಿ ಹುಣಸಿಕಟ್ಟಿ, ಹರೀಷ ಗುರಪ್ಪನವರ, ಕಲಾವಿದ ಕರಿಯಪ್ಪ ಹಂಚಿನಮನಿ ಕೈಜೋಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು