ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಣೀಯ: ಶಾಸಕ ನೆಹರು ಓಲೇಕಾರ

ವೀರಸೌಧದಲ್ಲಿ 79ನೇ ಹುತಾತ್ಮ ದಿನಾಚರಣೆ
Last Updated 1 ಏಪ್ರಿಲ್ 2022, 13:57 IST
ಅಕ್ಷರ ಗಾತ್ರ

ಹಾವೇರಿ: ‘ಅಹಿಂಸಾತ್ಮಕ ಹೋರಾಟ ಮೈಲಾರ ಮಹಾದೇವಪ್ಪ ಅವರ ಧ್ಯೇಯವಾಗಿತ್ತು. ಬ್ರಿಟಿಷರ ವಿರುದ್ಧ ಸಂಘಟನೆ ಮಾಡುತ್ತಿದ್ದರು ಹಾಗೂ ನೇರವಾಗಿ ಹೋರಾಟ ಮಾಡಿದರು. ಮೈಲಾರ ಮಹಾದೇವಪ್ಪ ಅವರ ಜೀವನ ಚರಿತ್ರೆ ಕೇಳಿದರೆ ರೋಮಾಂಚನವಾಗುತ್ತದೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಹುತಾತ್ಮರ ವೀರಸೌಧದಲ್ಲಿ ಶುಕ್ರವಾರ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಹುತಾತ್ಮ ಮೈಲಾರ ಮಹದೇವ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ 1943ರಂದು ಜೀವ ಬಲಿದಾನ ಮಾಡಿದ ಸ್ಮರಣೆಯ 79ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೈಲಾರ ಅವರ ಚರಿತ್ರೆ ಇತಿಹಾಸದಲ್ಲಿ ಬರಬೇಕು. ಈ ವಿಷಯವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂಗೆ ಅನುದಾನ ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗುವುದು. ಮೈಲಾರ ಚರಿತ್ರೆ ಪ್ರತಿ ಮನೆ– ಮನೆ ಮುಟ್ಟಬೇಕು ಹಾಗೂ ಹೋರಾಟಗಾರರಂತಹ ಮಕ್ಕಳು ಪ್ರತಿ ಮನೆಯಲ್ಲಿ ಜನಿಸಬೇಕು. ನಾವೆಲ್ಲ ಸ್ವಚ್ಛಂದವಾಗಿ ಬದುಕಲು ಅವರ ಹೋರಾಟ ಕಾರಣವಾಗಿದೆ. ಇಂತಹ ಮಹನೀಯರನ್ನು ಮರೆಯಬಾರದು ಎಂದರು.

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಮಾತನಾಡಿ, ‘ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂನಲ್ಲಿ ಗುಜರಾತ್‌ ಹಾಗೂ ದೆಹಲಿ ಮಾದರಿಯಲ್ಲಿ ಮೈಲಾರ ಅವರ ಜೀವನ ಚರಿತ್ರೆ ಸಾಕ್ಷ್ಯಚಿತ್ರ ಪ್ರದರ್ಶನ ಮಾಡುವ ಮೂಲಕ ಶಾಲಾ-ಕಾಲೇಜು ಮಕ್ಕಳಿಗೆ ಸ್ವಾತಂತ್ರ್ಯ ಚಳವಳಿ ಮಾಹಿತಿ ತಿಳಿಸುವ ಕೆಲಸವಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ಡಿಡಿಪಿಯು ಎಚ್.ಉಮೇಶಪ್ಪ, ತಹಶೀಲ್ದಾರ್‌ ಗಿರೀಶ ಸ್ವಾದಿ, ಟ್ರಸ್ಟ್ ಸದಸ್ಯರಾದ ಎಚ್.ಎಸ್.ಮಹದೇವ, ವಿ.ಎನ್.ತಿಪ್ಪಗೌಡರ, ಸತೀಶ ಕುಲಕರ್ಣಿ ಹಾಗೂ ನಾಗೇಂದ್ರ ಕಟಕೋಳ, ಸಾಹಿತಿ ಸಂಕಮ್ಮ ಸಂಕಣ್ಣನವರ, ಕವಯತ್ರಿ ಲತಾ ವಾಲಿ, ಮುರುಗೆಪ್ಪ ಶೆಟ್ಟರ, ಎಸ್.ಎಫ್.ಎನ್. ಗಾಜಿಗೌಡ್ರ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು.

‘ಹೋರಾಟಗಾರ್ತಿಯರನ್ನು ಗುರುತಿಸಬೇಕಿದೆ’
ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿಗಳಾದ ಇಂದಿರಾ ಕೃಷ್ಣಪ್ಪ ಮಾತನಾಡಿ,ಮಹಿಳೆಯರ ಹೋರಾಟದ ಕುರಿತು ಎಲ್ಲಿಯೂ ಉಲ್ಲೇಖಗಳಿಲ್ಲ. ಜೈಲುಗಳ ದಾಖಲಾತಿಗಳಲ್ಲಿ ಮೂರು ಸಾವಿರ ಮಹಿಳಾ ಹೋರಾಟಗಾರ್ತಿಯರಿದ್ದಾರೆ. ಈ ಪೈಕಿ 100 ಜನರ ಮಾಹಿತಿ ಕಲೆ ಹಾಕಲಾಗಿದ್ದು, ಆರು ಪುಟಗಳ ಲೇಖನ ಕೇಂದ್ರ ಪ್ರಸಾರ ಇಲಾಖೆಯ ಮ್ಯಾಗ್‌ಜಿನ್‌ನಲ್ಲಿ ಪ್ರಕಟಿಸಲಾಗಿದೆ. ಹೋರಾಟಗಾರ್ತಿಯರನ್ನು ಗುರುತಿಸುವ ಕೆಲಸವಾಗಬೇಕು ಎಂದರು.

ಶಿಗ್ಗಾವಿ ಚನ್ನಪ್ಪ ಕುನ್ನೂರ ಪ.ಪೂ.ಕಾಲೇಜು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮೈಲಾರ ಮಹದೇವರ ಕುರಿತು ಉಪನ್ಯಾಸ ನೀಡಿದರು.ಡಾ.ಮಾಲತೇಶ ಮೈಲಾರ ಅವರು ರಚಿಸಿದ ‘ಹುತಾತ್ಮ ಮಹದೇವ ಮೈಲಾರ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಳ್ಳಪ್ಪ ಸಿದ್ದಪ್ಪ ಕೊಪ್ಪದ ಹಾಗೂ ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಮೈಲಾರ ಮಹದೇವಪ್ಪನವರ ಮೊಮ್ಮಕ್ಕಳಾದ ಮಹದೇವ್, ಡಾ.ಎಚ್.ಎಸ್ ನರೇಂದ್ರ, ಟ್ರಸ್ಟ್‌ನ ಸದಸ್ಯರಾದ ತಿಪ್ಪನಗೌಡ, ಸತೀಶ ಕುಲಕರ್ಣಿ, ನಾಗೇಂದ್ರ ಕಟಕೊಳ್. ಎಸ್.ಎಫ್.ಐ ಸಂಘಟನೆಯ ರೇಣುಕಾ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT