ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಕಟ್ಟೆಗೆ ಹೆಸರುವಾಸಿಯಾಗಿದ್ದ ಬಿಸನಳ್ಳಿ

ಕಾಶಿಪೀಠದ ಶಾಖಾಮಠ ಆರಂಭ: ಧಾರ್ಮಿಕ ಕಾರ್ಯಗಳ ವೈಭವ
Last Updated 14 ಮೇ 2022, 14:56 IST
ಅಕ್ಷರ ಗಾತ್ರ

ಶಿಗ್ಗಾವಿ: ಹವಾಮಾನದ ವೈಪರೀತ್ಯದಿಂದಾಗಿ ಬಿಸಿಲಿನ ತಾಪಮಾನ ಅಧಿಕವಾದಾಗ ಸಾಧು, ಸಂತರು, ಪಂಚಪೀಠಾಧಿಪತಿಗಳು ವಿಶ್ರಾಂತಿ ಪಡೆಯಲು ಬಿಸನಳ್ಳಿ ಗ್ರಾಮದಲ್ಲಿ ಕೆಲಕಾಲ ತಂಗಿ, ನಂತರ ಪ್ರಯಾಣ ಮುಂದುವರಿಸುತ್ತಿದ್ದರು. ಅದರಿಂದ ಈ ಗ್ರಾಮವನ್ನು ‘ಬಿಸನಳ್ಳಿ’ ಎಂದು ರೂಢಿಯಲ್ಲಿ ನಾಮಕರಣವಾಯಿತು ಎಂದು ಗ್ರಾಮಸ್ಥರು ಹೇಳುತ್ತಾರೆ.

ಗ್ರಾಮದ ಹಿರಿಯರಾದ ದಿವಂಗತ ಗುರುಸಿದ್ದಪ್ಪ ದೂಡ್ಡಮುರಿಗೆಪ್ಪ ಆಜೂರ ಅವರು ಅಂದು ಸುತ್ತಲಿನ ಗ್ರಾಮದಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧಾನಧರ್ಮದ ಕಾರ್ಯಗಳನ್ನು ಮಾಡುವ ಮೂಲಕ ಕಲ್ಮೇಶ್ವರ ದೇವಸ್ಥಾನವನ್ನು ನಿರ್ಮಿಸಿದರು. ಅಲ್ಲದೆ ಹುಬ್ಬಳ್ಳಿ ಮೂರುಸಾವಿರ ಮಠದ ನಿರ್ಮಾಣಕ್ಕೆ ಮತ್ತು ಹಾನಗಲ್‌ನ ಕುಮಾರೇಶ್ವರ ಮಠದ ನಿರ್ಮಾಣಕ್ಕಾಗಿ ದೇಣಿಗೆ ಸಲ್ಲಿಸಿ ದೇವಾಲಯ ನಿರ್ಮಾಣ ಮಾಡಲು ಸಹಕರಿಸಿದ್ದಾರೆ.

ಗ್ರಾಮದ ಹಿರಿಯರಾದ ವೀರಪ್ಪ ಸವಣೂರ ಹಿಂದೆ ಗ್ರಾಮದಲ್ಲಿನ ವ್ಯಾಜ್ಯಗಳಿಗೆ ನ್ಯಾಯಕಟ್ಟೆಯಲ್ಲಿ (ಗ್ರಾಮ ಪಂಚಾಯ್ತಿ) ಬುದ್ಧಿವಂತಿಕೆ ಮೂಲಕ ಗ್ರಾಮದಲ್ಲಿಯೇ ತೀರ್ಪು ನೀಡುತ್ತಿದ್ದರು. ಅವರಿಂದ ಯಾವುದೇ ಗ್ರಾಮದ ವ್ಯಾಜ್ಯಗಳು ಕೋರ್ಟ್‌, ಕಚೇರಿ ಮೆಟ್ಟಿಲು ಹತ್ತಲು ಬಿಡುತ್ತಿರಲಿಲ್ಲ.

‘ಇಲ್ಲಿ ಕಲ್ಮೇಶ್ವರ ದೇವಸ್ಥಾನ, ಮಾರುತಿ ದೇವಸ್ಥಾನ, ಲಕ್ಷ್ಮೀದೇವಿ ದೇವಸ್ಥಾನಗಳಿವೆ. ಹೆಚ್ಚಾಗಿ ಬೆಳೆಯುತ್ತಿದ್ದ ಕಾರಣ ಹಸಿ ಮೆಣಸಿನಕಾಯಿಗೆ ಈ ಗ್ರಾಮ ಹೆಸರುವಾಸಿಯಾಯಿತು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಾರಣ ಹಸಿಮೆಣಸಿನಕಾಯಿ ಖರೀದಿಗೆ ಪ್ರಮುಖ ಕೇಂದ್ರ ಸ್ಥಳವಾಗಿತ್ತು. ಹುಬ್ಬಳ್ಳಿ, ಹಾವೇರಿ, ಗದಗ ಸೇರಿದಂತೆ ದೂರದ ಪಟ್ಟಣಗಳಿಂದ ಬಂದು ಖರೀದಿ ಮಾಡುತ್ತಿದ್ದರು. ಕಾಲಕ್ರಮೇಣ ತನ್ನ ವೈಭವವವನ್ನು ಕಳೆದುಕೊಂಡಿತು’ ಎಂದು ಬಿಸನಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಶಂಭುಲಿಂಗಪ್ಪ ಆಜೂರ ಹೇಳುತ್ತಾರೆ.

ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆಗಳು ಹಾಗೂ ವಿವಿಧ ಸಮುದಾಯಗಳ ಸಭಾಭವನ ನಿರ್ಮಾಣ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹೀಗಾಗಿ ನಮ್ಮೂರು ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕುತ್ತಿದೆ ಎಂದು ಬಿಸನಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಉಮೇಶ ಅಂಗಡಿ ಹೇಳಿದರು.

ಕಾಶಿಪೀಠಕ್ಕೆ ಭೂಮಿ ದಾನ:

ಗ್ರಾಮದ ಹಿರಿಯರಾದ ದಿವಂಗತ ಸುಭಾಸಚಂದ್ರ ಬಸಪ್ಪ ಆಜೂರ ಅವರ ಸ್ಮರಣಾರ್ಥ ಅವರ ಮಕ್ಕಳಾದ, ಮುರಿಗೇಶ ಆಜೂರ, ಸೋಮೇಶ್ವರ ಆಜೂರ ಅವರು ಕಾಶಿಪೀಠಕ್ಕೆ ಭೂಮಿ ದಾನ ಮಾಡಿದ ಹಿನ್ನೆಲೆಯಲ್ಲಿ ಕಳೆದ 2013-14ರಲ್ಲಿ ಕಾಶಿಪೀಠದ ಜಂಗಮವಾಡಿ ಶಾಖಾಮಠವಾಗಿ ಆರಂಭಗೊಂಡಿದೆ.

ಅಲ್ಲಿಂದ ಪ್ರತಿವರ್ಷ ಕಾಶಿಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ‘ಸಿದ್ಧಾಂತ ಶಿಖಾಮಣಿ’ ಗ್ರಂಥ ಪಾರಾಯಣ, ಸರ್ವಧರ್ಮ ಸಾಮೂಹಿಕ ವಿವಾಹಗಳು, ಲಿಂಗದೀಕ್ಷಾ, ಮಹಾತ್ಮರ ದಿನಾಚರಣೆಗಳು, ವಿವಿಧ ಧರ್ಮ ಸಮಾರಂಭಗಳು ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳ ವೈಭವ ಆರಂಭವಾಗಿದೆ.

ಇಲ್ಲಿ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತಿ, ಸಂಗೀತ ಮತ್ತು ಯೋಗ ಪಾಠಶಾಲೆ ಪ್ರಾರಂಭವಾಗಿದೆ. ಇಲ್ಲಿ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಗೋಶಾಲೆ, ಆಯುರ್ವೇದಿಕ್‌ ಕಾಲೇಜು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕಾಶಿಪೀಠದ ಸ್ವಾಮೀಜಿ ಹೆಚ್ಚಿನ ಆದ್ಯತೆ ನೀಡಿದ್ದು, ಮುಂದೆ ಇನ್ನಷ್ಟು ಹೆಮ್ಮರವಾಗಿ ಬೆಳೆಯಲಿದೆ ಎಂದು ಇದರ ವ್ಯವಸ್ಥಾಪಕರು ಹಾಗೂ ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT