ಶುಕ್ರವಾರ, ಜುಲೈ 1, 2022
27 °C
ಒಳಾಂಗಣ ಕ್ರೀಡಾಂಗಣದಲ್ಲಿ ಕಳಪೆ ಕಾಮಗಾರಿಯ ಕಿರಿಕಿರಿ: ಶೌಚಾಲಯಗಳು ಬಂದ್‌

ಸವಣೂರು ಕ್ರೀಡಾಂಗಣ ಸೌಕರ್ಯಗಳಿಲ್ಲದೆ ಭಣಭಣ

ಗಣೇಶಗೌಡ ಎಂ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಸವಣೂರು: ಅಥ್ಲೆಟಿಕ್‌ ಟ್ರ್ಯಾಕ್‌ ಇಲ್ಲ, ಕ್ರೀಡಾ ಅಂಕಣಗಳಿಲ್ಲ, ನೀರು–ವಿದ್ಯುತ್‌ ಸೌಕರ್ಯವಿಲ್ಲ, ಫೆಡ್‌ಲೈಟ್‌ ವ್ಯವಸ್ಥೆಯಿಲ್ಲ... ಹೀಗೆ ಮೂಲಸೌಕರ್ಯದಿಂದ ವಂಚಿತವಾಗಿ ಹೆಸರಿಗಷ್ಟೇ ಕ್ರೀಡಾಂಗಣ ಎಂಬಂತಿದೆ ‘ಸಿಎಂ ತವರು ಕ್ಷೇತ್ರ’ದ ಸವಣೂರು ತಾಲ್ಲೂಕು ಕ್ರೀಡಾಂಗಣ. 

8 ಎಕರೆ ವಿಶಾಲವಾದ ಜಾಗವನ್ನು ಹೊಂದಿರುವ ತಾಲ್ಲೂಕು ಕ್ರೀಡಾಂಗಣ ಸಮಸ್ಯೆಗಳಿಂದ ಭಣಗುಡುತ್ತಿದೆ. ಪೆವಿಲಿಯನ್‌ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಸಭೆ, ಜಯಂತಿಗಳ ಸಂದರ್ಭ ಗಣ್ಯರು, ಕ್ರೀಡಾಪಟುಗಳು ಆತಂಕದಲ್ಲೇ ಕುಳಿತುಕೊಳ್ಳುವಂತಾಗಿದೆ. ಬಿಸಿಲಿನಲ್ಲಿ ಬಾಯಾರುವ ಕ್ರೀಡಾಪಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ವಿದ್ಯುತ್‌ ಸೌಲಭ್ಯ ಕಲ್ಪಿಸಿ, ಫೆಡ್‌ಲೈಟ್‌ ವ್ಯವಸ್ಥೆ ಮಾಡದ ಕಾರಣ ರಾತ್ರಿ ವೇಳೆ ಕ್ರೀಡಾಂಗಣ ಕತ್ತಲಲ್ಲಿ ಮುಳುಗುತ್ತದೆ. ಇದರಿಂದ ರಾತ್ರಿ ವೇಳೆ ಅನೈತಿಕ–ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. 

ಒಳಾಂಗಣ ಕ್ರೀಡಾಂಗಣದ ಕಿಟಕಿಗಳಿಗೆ ಪಕ್ಷಿಗಳು ಬರದಂತೆ ಗಾಜು ಮತ್ತು ಜಾಲರಿಯನ್ನು ಅಳವಡಿಸಬೇಕಿತ್ತು. ಅಳವಡಿಸದ ಕಾರಣ ಪಕ್ಷಿಗಳು ಒಳಬಂದು ಷಟಲ್‌ ಕ್ರೀಡಾಂಗಣವನ್ನು ಗಲೀಜು ಮಾಡುತ್ತಿವೆ. ಪಕ್ಷಿಗಳ ಹಿಕ್ಕೆಗಳು ಬೀಳುತ್ತಿರುವುದರಿಂದ ದುರ್ವಾಸನೆ ಬರುತ್ತಿದೆ. ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದ ಕ್ರೀಡಾಂಗಣ ನಿರ್ವಹಣೆ ಸಮಪರ್ಕವಾಗಿಲ್ಲ ಎಂದು ಕ್ರೀಡಾಪ್ರೇಮಿಗಳಾದ ಗಣೇಶ ಗಾಣಿಗೇರ, ಸಿದ್ದು ನಾರಾಯಣಪುರ ದೂರಿದರು. 

ಜೋತು ಬಿದ್ದ ವೈರ್‌:

ಒಳಾಂಗಣ ಕ್ರೀಡಾಂಗಣಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದರೂ, ನಿರ್ವಹಣೆಯಿಲ್ಲದ ಕಾರಣ ವೈರುಗಳು ಅಲ್ಲಲ್ಲಿ ಜೋತು ಬಿದ್ದಿದ್ದು, ಇವು ಅಪಾಯ ಆಹ್ವಾನಿಸುತ್ತಿವೆ. ಒಳಾಂಗಣ ಕ್ರೀಡಾಂಗಣ ನಿರ್ವಹಿಸಲು ಸಿಬ್ಬಂದಿ ಕೊರತೆ ಇರುವ ಕಾರಣ ಹೊರಗುತ್ತಿಗೆ ನೀಡಲು 2 ಬಾರಿ ಆನ್‌ಲೈನ್‌ ಮೂಲಕ ಟೆಂಡರ್‌ ಆಹ್ವಾನಿಸಿದ್ದರೂ, ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎನ್ನುತ್ತಾರೆ ಇಲಾಖೆ ಸಿಬ್ಬಂದಿ. 

ಹಾಳಾದ ಜಿಮ್‌ ಉಪಕರಣ:

ದೇಹದಾರ್ಢ್ಯತೆ ಕಾಯ್ದುಕೊಳ್ಳಲು ಅಗತ್ಯವಾದ ಜಿಮ್ ವಿಭಾಗದಲ್ಲಿ ಹಳೆಯ ಮಾದರಿಯ ಉಪಕರಣಗಳಿವೆ. ಕೆಲವು ಹಾಳಾಗಿದ್ದು, ಮೂಲೆ ಸೇರಿವೆ. ಉಳಿದ ಉಪಕರಣಗಳು ಬಳಕೆಗೆ ಯೋಗ್ಯವಾಗಿಲ್ಲ. ಕ್ರೀಡಾಪಟುಗಳಿಗೆ ಅಗತ್ಯವಾದ ಕ್ರೀಡಾ ಸಲಕರಣೆಗಳನ್ನು ಇಲ್ಲಿ ನೀಡುತ್ತಿಲ್ಲ. ಖಾಸಗಿ ಅಂಗಡಿಗಳಲ್ಲಿ ದುಬಾರಿ ಹಣ ಕೊಟ್ಟು ಖರೀದಿಸುವಷ್ಟು ಶಕ್ತಿ ಬಡ ಕ್ರೀಡಾಪಟುಗಳಿಗಿಲ್ಲ ಎಂದು ಕ್ರೀಡಾಪಟುಗಳಾದ ಉಮೇಶ ಅತ್ತಿಗೇರಿ, ಬೀರಪ್ಪ ತಳ್ಳಿಹಳ್ಳಿ ಸಮಸ್ಯೆ ತೋಡಿಕೊಂಡರು. 

ನಿರ್ವಹಣೆ ಇಲ್ಲದ ಕಾರಣ ಕ್ರೀಡಾಂಗಣದಲ್ಲಿ ಗಿಡಗಂಟಿ ಬೆಳೆದು ಅನೈರ್ಮಲ್ಯ ವಾತಾವರಣ ಉಂಟಾಗಿದೆ. ಕಲುಷಿತ ನೀರು ಕ್ರೀಡಾಂಗಣದೊಳಗೆ ಹರಿಯುತ್ತಿರುವ ಕಾರಣ ದುರ್ವಾಸನೆ ಬೀರುತ್ತಿದೆ. ಕಾಂಪೌಂಡ್‌ ಮತ್ತು ಭದ್ರತಾ ಸಿಬ್ಬಂದಿ ಕೊರತೆಯಿಂದ ಜಾನುವಾರುಗಳು ಮೈದಾನದೊಳಗೆ ನುಗ್ಗುತ್ತಿವೆ. ಇಂಥ ದುಸ್ಥಿತಿಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಕ್ರೀಡಾಪಟುಗಳು, ಆಯೋಜಕರು ಹಿಂದೇಟು ಹಾಕುತ್ತಿದ್ದಾರೆ. 

‘ಸೋರುವ ಕಟ್ಟಡ, ಬಿರುಕುಬಿಟ್ಟ ಗೋಡೆ’

‘ಕ್ರೀಡೆಗಳನ್ನು ಪ್ರೋತ್ಸಾಹಿಸಲು ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಸರ್ಕಾರ ₹1 ಕೋಟಿ ಅನುದಾನ ನೀಡಿತ್ತು. ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಗುತ್ತಿಗೆ ಪಡೆದಿದ್ದ ಜಿಲ್ಲಾ ನಿರ್ಮಿತಿ ಕೇಂದ್ರದವರು ಕಳಪೆ ಕಾಮಗಾರಿ ಮಾಡಿದ್ದಾರೆ. ನಿರ್ಮಾಣವಾದ 2–3 ವರ್ಷಗಳಲ್ಲೇ ಮಳೆಗಾಲದಲ್ಲಿ ಚಾವಣಿಯಲ್ಲಿ ನೀರು ಸೋರುತ್ತಿದೆ. ಗೋಡೆಗಳ ಮೇಲೆ ನೀರು ಹರಿದು, ಬಿರುಕು ಬಿಟ್ಟಿವೆ. ಜನರ ತೆರಿಗೆ ಹಣ ಪೋಲಾಗಿದೆ ಎಂದು ಕ್ರೀಡಾಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದರು. 

2017ರಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯಾಗಿದ್ದರೂ, ಕಾಮಗಾರಿ ಮಾತ್ರ ಪೂರ್ಣಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ‘ಪ್ಲಂಬಿಂಗ್‌ ಕಾಮಗಾರಿ ಪೂರ್ಣಗೊಂಡಿಲ್ಲ, ಎಲೆಕ್ಟ್ರಿಕ್‌ ಕಾಮಗಾರಿ ಪೂರ್ಣಗೊಳಿಸಿ ಬಲ್ಬ್‌ಗಳನ್ನು ಅಳವಡಿಸಿಲ್ಲ. ವುಡ್‌ ಕೋರ್ಟ್‌ಗಳ ಪಿನ್ಸಿಂಗ್‌ ಮತ್ತು ಗಮ್‌ ಮಾಡಿಲ್ಲ. ಕಿಟಕಿಗಳಿಗೆ ಗಾಜು ಅಳವಡಿಸಿಲ್ಲ. ಈ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ’ ಎಂದು ಇಲಾಖೆ ಪತ್ರ ಬರೆದಿದ್ದರೂ, ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.

**

ಪುರುಷ ಹಾಗೂ ಸ್ತ್ರೀಯರಿಗೆ ಪ್ರತ್ಯೇಕ ಶೌಚಾಲಯಗಳಿದ್ದರೂ ನೀರಿನ ಅಭಾವದಿಂದ ಬಾಗಿಲು ತೆರೆದಿಲ್ಲ. ಇದರಿಂದ ಆಟಗಾರರಿಗೆ ತೊಂದರೆಯಾಗಿದೆ
- ಕೆ.ಸಿ.ಮಾಗೋಡ, ಕ್ರೀಡಾಪಟು, ಸವಣೂರು

**

ಕೋಚ್‌ಗಳ ಕೊರತೆಯಿಂದ ಕ್ರೀಡಾಪಟುಗಳಿಗೆ ತರಬೇತಿ ಸಿಗುತ್ತಿಲ್ಲ. ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸಿ, ಕ್ರೀಡೆಗಳಿಗೆ ಉತ್ತೇಜನ ನೀಡಲಿ
- ಬಸವರಾಜ ಶಿರೂರ, ಕ್ರೀಡಾಪಟು, ಸವಣೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು