ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರ ಮನ ಮಿಡಿದ ‘ಮನೆಗೆ ಮರಳದವರು’

ಶೇಷಗಿರಿಯ ಗಜಾನನ ಯುವಕ ಮಂಡಳಿಯಿಂದ ನಾಟಕ ಪ್ರದರ್ಶನ
Last Updated 29 ಜೂನ್ 2022, 14:02 IST
ಅಕ್ಷರ ಗಾತ್ರ

ಹಾವೇರಿ:ಬಗಲಲ್ಲಿ ಕಟ್ಟಿಕೊಂಡಿದ್ದ ನಾಡ ಬಾಂಬ್ ಸಿಡಿತದಿಂದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಅಮರ ಮರಣವನ್ನಪ್ಪಿದ ಮೆಣಸಿನಾಳ ತಿಮ್ಮನಗೌಡರ ಹೋರಾಟ ಜೀವನ ಚರಿತ್ರೆ ಆಧಾರಿತ ‘ಮನೆಗೆ ಮರಳದವರು’ ಎಂಬ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ನಗರದ ಶ್ರೀಮತಿ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಈಚೆಗೆಶೇಷಗಿರಿಯ ಗಜಾನನ ಯುವಕ ಮಂಡಳಿಯ ಏಳು ಕಲಾವಿದರು ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ಅರ್ಧ ಗಂಟೆಯ ನಾಟಕದಲ್ಲಿ ಕಟ್ಟಿಕೊಡುವಲ್ಲಿ ಯಶಸ್ವಿಯಾದರು. ನೋಡುಗರ ಮನದಲ್ಲಿ ಅಚ್ಚಳಿಯದಂತೆ ಅಭಿನಯಿಸಿದರು.

‘ನಿಮ್ಮೆಲ್ಲ ಸಾಲ ಪತ್ರಗಳನ್ನು ನಿಮ್ಮೆದುರೇ ಹರಿದು ಹಾಕುತ್ತಿದ್ದೇನೆ. ದುಡ್ಡು ಮುಖ್ಯವಲ್ಲ ದೇಶ ಮುಖ್ಯ’ ಎಂದು ಹೇಳುವ ತಿಮ್ಮನಗೌಡರು ನಾಟಕದ ಕೊನೆಯಲ್ಲಿ ಬಾಂಬ್ ಸಿಡಿತದಿಂದ ಸಾಯುವಾಗ ‘ನನ್ನ ಕಣ್ಣೆದುರು ಆ ಕೆಂಪು ಸೂರ್ಯ ಕಾಣುತ್ತಿದ್ದಾನೆ. ದೂರದಲ್ಲಿ ಹಾರುವ ಸ್ವತಂತ್ರ ಭಾರತದ ಬಾವುಟ ಕಾಣುತ್ತಿದೆ. ಮಹಾತ್ಮ ಅವರು ಕಾಣುತ್ತಿದ್ದಾರೆ’ – ಎಂದು ಕೊನೆ ಉಸಿರೆಳೆಯುವಾಗ ಇಡೀ ಪ್ರೇಕ್ಷಕ ಸಮುದಾಯ ಆರ್ದ್ರ ಭಾವದಿಂದ ತಪ್ತವಾಗಿತ್ತು.

ಸಹಜ ಅಭಿನಯ, ಕಥೆಯ ನಿರೂಪಣೆ, ದೇಶಪ್ರೇಮ ಬಿಂಬಿಸುವ ಹಾಡುಗಳು ಹಾಗೂ ಆ ಕಾಲ ಘಟ್ಟದ ಸರಳ ವಸ್ತ್ರ ವಿನ್ಯಾಸ ಇವೆಲ್ಲ ನಾಟಕಕ್ಕೆ ಸಹಜತೆ ತಂದುಕೊಟ್ಟವು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಭು ಗುರಪ್ಪನವರ ರಚಿಸಿ, ನಿರ್ದೇಶಿಸಿ ರಂಗಕ್ಕೆ ತಂದಿದ್ದರು.

ದೇಶಪ್ರೇಮಿ ತಿಮ್ಮನಗೌಡರಾಗಿ ಜಗದೀಶ ಕಟ್ಟೀಮನಿ, ನಿರೂಪಕರಾಗಿ ಸಿದ್ದಪ್ಪ ರೊಟ್ಟಿ, ದೇಶಪ್ರೇಮಿಗಳಾಗಿ ಷಡಕ್ಷರಿ ಚಕ್ರಸಾಲಿ, ಶಿವಮೂರ್ತಿ ಹುಣಸಿಹಳ್ಳಿ, ಜಮೀರ ಪಠಾಣ, ಹರೀಶ ಗುರಪ್ಪನವರ ಹಾಗೂ ಪ್ರಜ್ವಲ್ ಸುಂಕದ ಅಭಿನಯಿಸಿದ್ದರು. ನಾಗರಾಜ ಧಾರೇಶ್ವರ ಮತ್ತು ಸಂತೋಷ ಎಸ್. ಎಂ. ನಾಟಕವನ್ನು ಸಂಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT