ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಟ್ರಿ ‘ಹ್ಯಾಟ್ರಿಕ್‌’: ಭಾರತ ಜಯಭೇರಿ

ಇಂಟರ್‌ಕಾಂಟಿನೆಂಟಲ್‌ ಕಪ್ ಟೂರ್ನಿ: ಚೀನಾ ತೈಪೆಗೆ ಆರಂಭಿಕ ನಿರಾಸೆ
Last Updated 1 ಜೂನ್ 2018, 19:41 IST
ಅಕ್ಷರ ಗಾತ್ರ

ಮುಂಬೈ: ಮುಂಚೂಣಿ ವಿಭಾಗದ ಆಟಗಾರ ಸುನಿಲ್‌ ಚೆಟ್ರಿ ಶುಕ್ರವಾರ ಮುಂಬೈ ಫುಟ್‌ಬಾಲ್‌ ಅರೆನಾದಲ್ಲಿ ಮೋಡಿ ಮಾಡಿದರು.

ಚೆಟ್ರಿ ದಾಖಲಿಸಿದ ‘ಹ್ಯಾಟ್ರಿಕ್‌’ ಗೋಲುಗಳ ನೆರವಿನಿಂದ ಭಾರತ ತಂಡ ಇಂಟರ್‌ಕಾಂಟಿ ನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿತು.

ಟೂರ್ನಿಯ ತನ್ನ ಮೊದಲ ಹೋರಾಟದಲ್ಲಿ ಚೆಟ್ರಿ ಬಳಗ 5–0 ಗೋಲುಗಳಿಂದ ಚೀನಾ ತೈಪೆ ತಂಡವನ್ನು ಪರಾಭವಗೊಳಿಸಿತು. ಈ ಮೂಲಕ ತೈಪೆ ಎದುರಿನ ಗೆಲುವಿನ ದಾಖಲೆಯನ್ನು 5–2ಕ್ಕೆ ಹೆಚ್ಚಿಸಿಕೊಂಡಿತು.

ತವರಿನ ಅಭಿಮಾನಿಗಳ ಎದುರು ಕಣಕ್ಕಿಳಿದಿದ್ದ ಭಾರತ, ಆರಂಭದಿಂದಲೇ ವೇಗದ ಆಟಕ್ಕೆ ಮುಂದಾಯಿತು.

14ನೇ ನಿಮಿಷದಲ್ಲಿ ಚೆಟ್ರಿ, ಆತಿಥೇಯರ ಖಾತೆ ತೆರೆದರು. 34ನೇ ನಿಮಿಷದಲ್ಲಿ ಅವರು ವೈಯಕ್ತಿಕ ಎರಡನೇ ಗೋಲು ದಾಖಲಿಸಿದರು. ಜೆಜೆ ಲಾಲ್‌ಪೆಕ್ಲುವಾ ಒದ್ದು ಕಳುಹಿಸಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಚೆಟ್ರಿ ಅದನ್ನು ಎದುರಾಳಿ ಆವರಣದ ಎಡತುದಿಯಿಂದ ಗುರಿ ಮುಟ್ಟಿಸಿದ ರೀತಿ ಮನಸೆಳೆಯುವಂತಿತ್ತು. ಇದರೊಂದಿಗೆ ಭಾರತ 2–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲೂ ಆತಿಥೇಯ ಆಟಗಾರರು ಅಬ್ಬರಿಸಿದರು. 48ನೇ ನಿಮಿಷದಲ್ಲಿ ಉದಾಂತ್‌ ಸಿಂಗ್ ಗೋಲು ದಾಖಲಿಸಿದ್ದರಿಂದ ತಂಡದ ಮುನ್ನಡೆ 3–0ಗೆ ಹೆಚ್ಚಿತು. ಚೆಂಡನ್ನು ಆಕರ್ಷಕ ರೀತಿಯಲ್ಲಿ ಡ್ರಿಬಲ್‌ ಮಾಡುತ್ತಾ ಎದುರಾಳಿ ತಂಡದ ರಕ್ಷಣಾವ್ಯೂಹ ಭೇದಿಸಿದ ಉದಾಂತ್‌ ಅದನ್ನು ಎಡಗಾಲಿನಿಂದ ಒದ್ದು ತೈಪೆ ತಂಡದ ಗೋಲುಪೆಟ್ಟಿಗೆಯೊಳಗೆ ಸೇರಿಸಿದರು.

62ನೇ ನಿಮಿಷದಲ್ಲಿ ಮತ್ತೊಮ್ಮೆ ಕಾಲ್ಚಳಕ ತೋರಿದ ಚೆಟ್ರಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿದರು. 78ನೇ ನಿಮಿಷದಲ್ಲಿ ಪ್ರಣಯ್‌ ಹಲ್ದಾರ್‌ ಚೆಂಡನ್ನು ಗುರಿ ಮುಟ್ಟಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಸೋಮವಾರ ನಡೆಯುವ ಹೋರಾಟದಲ್ಲಿ ಭಾರತ ತಂಡ ಕೀನ್ಯಾ ವಿರುದ್ಧ ಸೆಣಸಲಿದೆ. ಇದು ಚೆಟ್ರಿ ಪಾಲಿಗೆ 100ನೇ ಪಂದ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT