‘ಕೈ’ ಚಿತ್ತ ಹೈಕಮಾಂಡ್‌ನತ್ತ

ಶನಿವಾರ, ಮಾರ್ಚ್ 23, 2019
28 °C
ಹೈಕಮಾಂಡ್ ಕದ ತಟ್ಟುತ್ತಿರುವ ಆಕಾಂಕ್ಷಿಗಳು: ಬೆಂಗಳೂರಿನಲ್ಲಿ ಮಾ.16ರಂದು ಸಭೆ

‘ಕೈ’ ಚಿತ್ತ ಹೈಕಮಾಂಡ್‌ನತ್ತ

Published:
Updated:
Prajavani

ಹಾವೇರಿ: ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ರ್‍ಯಾಲಿ, ಚುನಾವಣೆ ಘೋಷಣೆಯ ಬಳಿಕ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದೆ.

ಹಾವೇರಿ ಕ್ಷೇತ್ರದ ಟಿಕೆಟ್‌ಗಾಗಿ ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಡಿ.ಆರ್. ಪಾಟೀಲ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಸಲೀಂ ಅಹ್ಮದ್ ನಡುವೆ ಅಂತಿಮ ಪೈಪೋಟಿಯಿದ್ದು, ಇತರರೂ ಪ್ರಯತ್ನದಿಂದ ಹಿಂದೆ ಸರಿದಿಲ್ಲ. ಹೀಗಾಗಿ, ಬಹುತೇಕ ನಾಯಕರು ದೆಹಲಿಗೆ ದೌಡಾಯಿಸಿದರೆ, ಇನ್ನೂ ಕೆಲವರು ಬೆಂಗಳೂರಿನಲ್ಲಿ ನಾಯಕರ ಮನವೊಲಿಸುವ ಕಸರತ್ತಿಗೆ ಕೈ ಹಾಕಿದ್ದಾರೆ. ಕೆಲವರು ಕ್ಷೇತ್ರದಲ್ಲೇ ಬ್ಯೂಸಿಯಾಗಿದ್ದಾರೆ.

ಜೆಡಿಎಸ್ ಜೊತೆಗಿನ ಮೈತ್ರಿ ಪ್ರಕ್ರಿಯೆಯೇ ಇನ್ನೂ ಪೂರ್ಣಗೊಳ್ಳದ ಕಾರಣ, ಪಕ್ಷದ ವರಿಷ್ಠರು ‘ಮೈತ್ರಿ ಮಾತುಕತೆ’ಯಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ, ಹಾವೇರಿ ಕ್ಷೇತ್ರವು ಕೈ ಪಾಲಾಗುವುದು ನಿಚ್ಚಳ. ಇಲ್ಲಿ ನಡೆದ 16 ಚುನಾವಣೆಗಳಲ್ಲಿ 12 ಬಾರಿ ಕಾಂಗ್ರೆಸ್‌ ಗೆದ್ದಿದೆ. ಹೀಗಾಗಿ, ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ ಹೆಚ್ಚಿದೆ.

ಟಿಕೆಟ್ ಆಕಾಂಕ್ಷಿಗಳ ಪೈಕಿ ಮಾಜಿ ಸಚಿವ ಬಸವರಾಜ ಶಿವಣ್ಣನವರ ಹೆಸರು ಮುಂಚೂಣಿಯಲ್ಲಿದೆ. ಕಾಂಗ್ರೆಸ್ ಮತ ಬ್ಯಾಂಕ್ ಜೊತೆ ಪ್ರಬಲವಾದ ಕುರುಬ ಹಾಗೂ ಪರಿಶಿಷ್ಟ ಮತಗಳನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ನೇರವಾಗಿ ಜನಸಾಮಾನ್ಯರ ಜೊತೆ ಬೆರೆಯುವುದು ಹಾಗೂ ಸರಳತೆಯು ಅವರಿಗೆ ಪೂರಕವಾಗಿದೆ. 1998ರಲ್ಲಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದಲ್ಲದೇ, ಸಚಿವರಾಗಿ, ಶಾಸಕರಾಗಿ ಕ್ಷೇತ್ರದ ಪರಿಚಯ ಹೊಂದಿದ್ದಾರೆ. ಮೂಲತಃ ಜನತಾ ಪರಿವಾರದಿಂದ ಬಂದ ಕಾರಣ ಕಾಂಗ್ರೆಸೇತರ ಮತಗಳನ್ನೂ ಸೆಳೆಯಬಲ್ಲರು ಎಂಬುದು ಅವರ ಬೆಂಬಲಿಗರ ವಾದ.

ಲೋಕಸಭಾ ಕ್ಷೇತ್ರವು ಎರಡು ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದ್ದು, ಹಾವೇರಿಯಲ್ಲಿ ಶೇ 60.80 ಮತದಾರರು ಇದ್ದರೆ, ಗದಗದಲ್ಲಿ ಶೇ 39.20 ಮತದಾರರಿದ್ದಾರೆ. ಇದು ಹಾವೇರಿಯಲ್ಲಿ ಪ್ರಭಾವ ಹೊಂದಿರುವ ಶಿವಣ್ಣವರಿಗೆ ಲಾಭದಾಯಕ ಎನ್ನುತ್ತಾರೆ  ಬೆಂಬಲಿಗರು.

ಪಂಚಾಯತ್‌ ರಾಜ್‌ ಮೂಲಕ ಕ್ಷೇತ್ರದಲ್ಲಿ ಒಡನಾಟ ಹೊಂದಿದ ಮಾಜಿ ಶಾಸಕ ಡಿ.ಆರ್. ಪಾಟೀಲ ಮತ್ತೊಬ್ಬ ಪ್ರಬಲ ಸ್ಪರ್ಧಿ. ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಅವರಿಗೆ ಪೂರಕವಾಗಿದೆ. ಅಲ್ಲದೇ, ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ, ಶಾಸಕರಾಗಿ ಅವರು ರಾಜಕೀಯ ಪ್ರಭಾವಿಗಳಾಗಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲರ ಬೆಂಬಲಿಗರ ಬಲವೂ ಇದೆ ಎನ್ನುತ್ತಾರೆ ಅವರ ಹಿತೈಷಿಗಳು.

2008ರ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಧಾರವಾಡ ದಕ್ಷಿಣವು ಹಾವೇರಿ ಲೋಕಸಭಾ ಕ್ಷೇತ್ರವಾಯಿತು. ಅನಂತರ ಸತತ ಎರಡು ಬಾರಿ ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್ ಸ್ಪರ್ಧಿಸಿದ್ದರು. ಅವರ ಮತಗಳಿಕೆಯು 2009ಕ್ಕಿಂತ 2014ರಲ್ಲಿ ಶೇ 3.69 ಹೆಚ್ಚಳವಾಗಿದೆ. ‘ಅನುಕಂಪ’ವೂ ಇದೆ. ಅಲ್ಲದೇ, ನಡೆದ 16 ಚುನಾವಣೆಗಳಲ್ಲಿ 10 ಬಾರಿ ಮುಸ್ಲಿಂ ಅಭ್ಯರ್ಥಿಗಳು ಜಯಗಳಿಸಿದ್ದು, ಈ ಬಾರಿ ಹೆಚ್ಚಿನ ಸಾಧ್ಯತೆ ಇದೆ ಎನ್ನುತ್ತಾರೆ ಅವರ ಬೆಂಬಲಿಗರು. 

ಆದರೆ, ವೀರಶೈವ ಲಿಂಗಾಯತ ಸಮುದಾಯದ ಗಡ್ಡದೇವರಮಠ, ಜಿ.ಎಸ್.ಪಾಟೀಲ, ಸಂಜೀವಕುಮಾರ್ ನೀರಲಗಿ, ಬಿ.ಸಿ.ಪಾಟೀಲ ಮತ್ತಿತರ ಹೆಸರುಗಳೂ ಇವೆ. ಕೊನೆ ಕ್ಷಣದಲ್ಲಿ ಶಾಕೀರ್‌ ಸನದಿ ಮತ್ತಿತರ ಪೈಕಿ ‘ಅಚ್ಚರಿ’ಯ ಅಭ್ಯರ್ಥಿ ಹೆಸರು ಪ್ರಕಟಗೊಂಡರೂ ವಿಶೇಷವಿಲ್ಲ. ನಮ್ಮದು ‘ಹೈಕಮಾಂಡ್’ ಪಕ್ಷ ಎನ್ನುತ್ತಾರೆ ಕಾರ್ಯಕರ್ತರೊಬ್ಬರು.   

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !