ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ನಿಷೇಧ; ಕಡತಕ್ಕಷ್ಟೇ ಸೀಮಿತ!

ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲದ ಧೂಮಪಾನ: ಪೂರ್ಣ ಪ್ರಮಾಣದಲ್ಲಿ ಜಾರಿಯಾಗದ ಜಿಲ್ಲಾಧಿಕಾರಿ ಆದೇಶ
Last Updated 6 ಜೂನ್ 2022, 15:28 IST
ಅಕ್ಷರ ಗಾತ್ರ

ಹಾವೇರಿ:‘ತಂಬಾಕು ಮುಕ್ತ ಶಾಲೆ’ ಮತ್ತು ‘ಧೂಮಪಾನ ನಿಷೇಧಿತ ಪ್ರದೇಶ’ ಎಂಬ ಘೋಷಣೆಗಳು ಜಿಲ್ಲೆಯಲ್ಲಿ ನಾಮಫಲಕ ಮತ್ತು ಕಡತಗಳಿಗೆ ಮಾತ್ರ ಸೀಮಿತವಾಗಿವೆ.ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದರೂ, ವ್ಯಾಪಾರಿಗಳು ಶಾಲೆಯ ಸಮೀಪದಲ್ಲೇ ತಂಬಾಕು ಉತ್ಪನ್ನಗಳನ್ನು ಕದ್ದುಮುಚ್ಚಿ ಮಾರುತ್ತಲೇ ಇದ್ದಾರೆ.

ಜಿಲ್ಲೆಯ ಎಲ್ಲ ಪ್ರವಾಸಿ ತಾಣ, ಪ್ರಮುಖ ದೇವಸ್ಥಾನ ಹಾಗೂ ಶಾಲೆಗಳನ್ನು ತಂಬಾಕು ಮುಕ್ತ ಸ್ಥಳಗಳನ್ನಾಗಿ ಘೋಷಿಸಬೇಕು.ಎಲ್ಲ ಸರ್ಕಾರಿ ಕಚೇರಿಗಳಲ್ಲಿ ‘ತಂಬಾಕು ಮುಕ್ತ ಕಚೇರಿ’ ಎಂಬ ನಾಮಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಕಳೆದ ವರ್ಷ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

‘ಬ್ಯಾಡಗಿ ತಾಲ್ಲೂಕಿನ ಗುಮ್ಮನಹಳ್ಳಿ ಮತ್ತು ರಾಣೆಬೆನ್ನೂರು ತಾಲ್ಲೂಕಿನ ಬೇವಿನಹಳ್ಳಿ ಈ ಎರಡು ಗ್ರಾಮಗಳನ್ನು ‘ತಂಬಾಕು ಮುಕ್ತ ಗ್ರಾಮಗಳು’ ಎಂದು ಘೋಷಣೆ ಮಾಡಲಾಗಿದೆ.ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗಿನ ಒಟ್ಟು 1884 ಶಾಲೆಗಳಲ್ಲಿ 217 ಶಾಲೆಗಳು ಮಾತ್ರ ‘ತಂಬಾಕು ಮುಕ್ತ ಶಾಲೆ’ ಎಂದು ಘೋಷಣೆ ಮಾಡಿಕೊಂಡಿವೆ. 18 ಸರ್ಕಾರಿ ಕಚೇರಿಗಳು ಮಾತ್ರ ‘ತಂಬಾಕು ಮುಕ್ತ ಕಚೇರಿ’ ಎಂದು ಘೋಷಣೆ ಮಾಡಿಕೊಂಡಿವೆ. ಉಳಿದ ಶಾಲೆ ಮತ್ತು ಕಚೇರಿಗಳು ‘ತಂಬಾಕು ಮುಕ್ತ’ ಎಂದು ಘೋಷಣೆ ಮಾಡಿಕೊಳ್ಳಬೇಕಿದೆ’ ಎಂದುತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಡಾ.ಸಂತೋಷ ದಡ್ಡಿ ಮಾಹಿತಿ ನೀಡಿದರು.

ತಂಬಾಕು ನಿಯಂತ್ರಣ ಕಾನೂನು (ಕೋಟ್ಪಾ–2003) ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದೆ. ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು, ಉತ್ತೇಜನ, ಪ್ರಾಯೋಜಕತೆಗೂ ನಿಷೇಧವಿದೆ. ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತ ವಯಸ್ಕರಿಗೆ ಮಾರಾಟ ಮಾಡುವುದು ಹಾಗೂ ಮಾರಾಟ ಮಾಡಿಸುವುದರ ಮೇಲೂ ನಿಷೇಧವಿದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್‌, ಹೃದಯ ಕಾಯಿಲೆ ಸೇರಿದಂತೆ ಮಾರಣಾಂತಿಕ ರೋಗಗಳು ಬರುತ್ತವೆ. ಒಂದು ಸಿಗರೇಟ್‌ನಲ್ಲಿ 200 ವಿಷಕಾರಿ ರಾಸಾಯನಿಕಗಳಿರುತ್ತವೆ ಎನ್ನುತ್ತಾರೆ ವೈದ್ಯರು.

‘ತಕ್ಷಣ ದೂರು ನೀಡಿ’

ಶಿಗ್ಗಾವಿ:ತಾಲ್ಲೂಕಿನ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ‘ತಂಬಾಕು ಮುಕ್ತ ಶಾಲೆ’ ಕುರಿತು ತರಬೇತಿ ನೀಡಲಾಗಿದೆ. ಒಂದು ವೇಳೆ ಅಂತಹ ತಂಬಾಕು ಮಾರಾಟ ಮಾಡುವ ಅಂಗಡಿಗಳು ಕಂಡು ಬಂದರೆ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ತಿಳಿಸಲಾಗಿದೆ. ಹೀಗಾಗಿ ಎಲ್ಲ ಶಾಲೆಗಳು ತಂಬಾಕು ಮುಕ್ತ ಕ್ಯಾಂಪಸ್‌ಗಳಾಗಿವೆ ಎಂದು ಬಿಇಒ ಪಿ.ಕೆ.ಚಿಕ್ಕಮಠ ಹೇಳಿದರು.

ತಾಲ್ಲೂಕಿನ ಎಲ್ಲ ಪಂಚಾಯ್ತಿಗಳ ಮತ್ತು ಸರ್ಕಾರಿ ಕಚೇರಿಗಳ ಮುಂದೆ ‘ತಂಬಾಕು ಮುಕ್ತ ಕಚೇರಿ’ ಎಂಬ ನಾಮಫಲಕಗಳನ್ನು ಹಾಕಲಾಗಿದೆ. ಎಲ್ಲದೆ ಸಿಬ್ಬಂದಿಗೆ ತಿಳಿಸಲಾಗಿದೆ. ಸಾರ್ವಜನಿಕರು ಸಹ ಕಚೇರಿಯಲ್ಲಿ ತಂಬಾಕು ಬಳಕೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಾ.ಪಂ. ಇಒ ಪ್ರಶಾಂತ ತುರ್ಕಾಣಿ ತಿಳಿಸಿದರು.

ಸಿಗದ ಪರ್ಯಾಯ ಉದ್ಯೋಗ

ಸವಣೂರು: ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಜನರು ಬೀಡಿ ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, ಇವರ ಜೀವನ ಸಂಕಷ್ಟದಲ್ಲಿದೆ. ಇವರ ದುಡಿಮೆ ಹೊಟ್ಟೆ–ಬಟ್ಟೆಗೆ ಸರಿಯೋಗುತ್ತದೆ. ಇವರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ 158 ಹಾಗೂ ನಗರ ಪ್ರದೇಶದಲ್ಲಿ 32 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಶಾಲಾ ಆವರಣದ 100 ಮೀ. ಅಂತರದಲ್ಲಿ ತಂಬಾಕು ಮಾರಾಟವನ್ನು ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ.

ತಂಬಾಕು ಮುಕ್ತ ಸರ್ಕಾರಿ ಕಚೇರಿಗಳನ್ನಾಗಿಸಲು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈಗಾಗಲೇ ಕ್ರಮ ಕೈಗೊಂಡು ತಾಲ್ಲೂಕಿನ 21 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತಂಬಾಕು ಮಾರಾಟವನ್ನು ನಿಷೇಧಿಸಿ ತಂಬಾಕು ಮುಕ್ತ ಪಂಚಾಯ್ತಿಗಳನ್ನಾಗಿ ನಿರ್ಮಾಣ ಮಾಡಲು ಸಿಬ್ಬಂದಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ತಾ.ಪಂ ಇಒ ಮುನಿಯಪ್ಪ ಪಿ.

ನೌಕರರಿಂದಲೇ ನಿಯಮ ಉಲ್ಲಂಘನೆ

ಬ್ಯಾಡಗಿ: ‘ಸರ್ಕಾರಿ ಕಚೇರಿ ಆವರಣದಲ್ಲಿ ತಂಬಾಕು ಸೇವನೆ ಮಾಡುವ ಮೂಲಕಕಚೇರಿಯಲ್ಲಿನ ಸಿಬ್ಬಂದಿಯೇ ಈ ನಿಯಮವನ್ನು ಉಲ್ಲಂಘಿಸುತ್ತಿದ್ದು, ಅದನ್ನು ಮೊದಲು ಹತೋಟಿಗೆ ತರಬೇಕಾಗಿದೆ. ‘ತಂಬಾಕು ಮುಕ್ತ ಸಂಸ್ಥೆ’ ಎನ್ನುವ ಘೋಷವಾಕ್ಯ ಬಿಇಒ ಕಚೇರಿಯಿಂದ ಅನುಷ್ಠಾನಗೊಳ್ಳಬೇಕಾಗಿದೆ’ ಎಂದುಸಾಮಾಜಿಕ ಹೋರಾಟಗಾರ ಮಂಜುನಾಥ ಪೂಜಾರ ಹೇಳಿದರು.

ತಾಲ್ಲೂಕಿನಲ್ಲಿ 172 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದು, ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ‘ತಂಬಾಕು ಮುಕ್ತ ಕ್ಯಾಂಪಸ್‌’ ಎನ್ನುವ ಘೋಷ ವಾಕ್ಯಗಳನ್ನು ಬರೆಸಬೇಕಾಗಿದೆ. ಪೇಂಟರ್‌ ಹಾಗೂ ಇನ್ನಿತರ ಕೆಲಸಗಾರರ ಕೊರತೆಯಿಂದ ಇನ್ನೂ ಬರೆಸಲಾಗಿಲ್ಲ. ಈ ಘೋಷವಾಕ್ಯಗಳ ಅನುಷ್ಠಾನವನ್ನು ನಮ್ಮ ಕಚೇರಿಯಿದಲೇ ಆರಂಭಿಸಬೇಕಾಗಿದೆ ಎಂದು ಬಿಇಒ ಸತ್ಯನಾರಾಯಣ ಕೆ.ಎಂ. ಹೇಳಿದರು.

‘ದಂಡದ ಮೊತ್ತ ಹೆಚ್ಚಿಸಿ’

ರಾಣೆಬೆನ್ನೂರು:ತಂಬಾಕು ಮುಕ್ತ ಶಾಲೆ ಕುರಿತು ಶಾಲಾ ಕಾಲೇಜುಗಳ ಬಳಿ ಜಾಗೃತಿ ಮೂಡಿಸುವ ಸೈನ್‌ ಬೋರ್ಡ್‌ಗಳನ್ನು ಹಾಕಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಫಲಕದಲ್ಲಿ ಮುಖ್ಯ ಶಿಕ್ಷಕರ ಹೆಸರು, ಮೊಬೈಲ್‌ ನಂಬರ್‌ ಹಾಕಲಾಗುವುದು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗ್ರಾಮಗಳಲ್ಲಿ ಉಪನ್ಯಾಸ, ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ ಜೆ.ಎನ್‌. ತಿಳಿಸಿದ್ದಾರೆ.

‘ತಂಬಾಕು ನಿಯಮ ಉಲ್ಲಂಘಿಸಿದರೆ, ದಂಡದ ಮೊತ್ತ ಹೆಚ್ಚಿಸಬೇಕು. ಸರ್ಕಾರಿ ಕಚೇರಿ, ಗ್ರಂಥಾಲಯ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದ ಕಟ್ಟುನಿಟ್ಟಾಗಿ ಜಾರಿಯಾಗಬೇಕು’ ಎನ್ನುತ್ತಾರೆ ವಂದೇ ಮಾತರಂ ವೇದಿಕೆಯ ಸಂಚಾಲಕ ಜಗದೀಶ ಕೆರೂಡಿ.

ಶಾಲೆಗಳ ಆಸುಪಾಸಿನಲ್ಲೇ ಮಾರಾಟ

ರಟ್ಟೀಹಳ್ಳಿ:ರಟ್ಟೀಹಳ್ಳಿ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಕಾಂಪೌಂಡ್‌ಗೆ ಹೊಂದಿಕೊಂಡು ಇರುವ ಬೀಡಾ ಸ್ಟಾಲ್‌ಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ, ಮಾರಾಟ ನಿರಂತರವಾಗಿ ನಡೆಯುತ್ತಲಿದೆ. ತಂಬಾಕು ನಿಯಂತ್ರಣ ಮಂಡಳಿಯವರು ಕೇವಲ ನೆಪ ಮಾತ್ರಕ್ಕೆ ಬೀಡಾ ಅಂಗಡಿಗಳಿಗೆ ಭೇಟಿ ನೀಡಿ, ಅವರಿಂದ ದಂಡ ವಸೂಲಿ ಮಾಡುತ್ತಾರೆ. ಅದರೆ ಕಟ್ಟುನಿಟ್ಟಾಗಿ ಅವುಗಳ ಮಾರಾಟಕ್ಕೆ ನಿಯಂತ್ರಣ ಹೇರುವುದಿಲ್ಲ.

ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳ ಆಸುಪಾಸಿನಲ್ಲಿಯೇ ಸಿಗರೇಟು, ಗುಟ್ಕಾ, ತಂಬಾಕು ಮಾರಾಟ ಮಾಡಲಾಗುತ್ತಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಹರಿಜನ ಮತ್ತು ವಿಜೇಂದ್ರ ಅಂಗಡಿ ತಿಳಿಸಿದರು.

‘ಕಟ್ಟುನಿಟ್ಟಿನ ಕ್ರಮ ಜಾರಿಯಾಗಿಲ್ಲ’

ಹಾನಗಲ್: ತಾಲ್ಲೂಕಿನ ಕೆಲವು ಸರ್ಕಾರಿ ಶಾಲೆಗಳ ಅಂಗಳದಲ್ಲಿ ಮಾತ್ರ ‘ತಂಬಾಕು ಮುಕ್ತ ಶಾಲೆ’ ಎಂಬ ಫಲಕ ಗೋಚರಿಸುತ್ತದೆ. ಆವರಣ ಗೋಡೆಗಳ ಮೇಲೆ ಬರಹವೂ ಕಾಣುತ್ತವೆ. ಆದರೆ, ಹೆಚ್ಚಿನ ಸಂಖ್ಯೆಯ ಶಾಲೆ–ಕಾಲೇಜುಗಳಲ್ಲಿ ಈ ಸಂದೇಶಕ್ಕೆ ಜಾಗವಿಲ್ಲ.

ಸರ್ಕಾರಿ ಕಚೇರಿ ಕಟ್ಟಡಗಳು 100 ಮೀ. ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ತಡೆಯೊಡ್ಡುವ ಕಟ್ಟುನಿಟ್ಟಿನ ಕ್ರಮಗಳು ಜಾರಿಗೊಳ್ಳುತ್ತಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಗುಟಕಾ, ಅಡಿಕೆ ಉಗುಳಿದ ಕುರುಹುಗಳು ಅಸಹ್ಯವಾಗಿ ರಾಚುತ್ತವೆ.

‘ಪ್ರತಿಯೊಂದು ಶಾಲೆಯಲ್ಲಿ ತಂಬಾಕು ಮುಕ್ತ ಶಾಲೆ ಎಂಬ ಫಲಕ ಬರೆಯಬೇಕು ಎಂಬ ಉದ್ದೇಶದಿಂದ ಇತ್ತೀಚೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಶಾಲೆ ಸಮೀಪದಲ್ಲಿ ತಂಬಾಕು ಪದಾರ್ಥಗಳ ಮಾರಾಟದ ದೂರು ಬಂದಲ್ಲಿ ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಲಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌.ಹುರಳಿ ತಿಳಿಸಿದ್ದಾರೆ.

***

2021–22ನೇ ಸಾಲಿನಲ್ಲಿ 49 ದಾಳಿ ನಡೆಸಿ, 488 ಪ್ರಕರಣ ದಾಖಲಿಸಿ, ₹38,850 ದಂಡ ಹಾಕಿದ್ದೇವೆ. ಶಾಲೆಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ
– ಡಾ.ಸಂತೋಷ ದಡ್ಡಿ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ

***

ಬೀಡಿ ಕಾರ್ಮಿಕರಿಗೆ ಗುರುತಿನ ಚೀಟಿ ಕೊಟ್ಟು, ಪರ್ಯಾಯ ಉದ್ಯೋಗ ಕೈಗೊಳ್ಳಲು ಕೌಶಲ ತರಬೇತಿ, ಸಾಲ ನೀಡಲು ಕ್ರಮ ಕೈಗೊಂಡಿದ್ದೇವೆ.
– ಶಂಕರ್‌ ಜಿ.ಎಸ್‌., ತಹಶೀಲ್ದಾರ್‌, ರಾಣೆಬೆನ್ನೂರು

***

ತಂಬಾಕು ಸೇವನೆಯಿಂದ ಹೃದಯ ಕಾಯಿಲೆ ಹಾಗೂ ಕ್ಯಾನ್ಸರ್‌ ಬರುವ ಸಾಧ್ಯತೆಯಿದೆ. ಮೇ 31ರಂದು ಜಾಗೃತಿ ಮೂಡಿಸಲು ಮುಂದಾಗಿದ್ದೇವೆ
– ಡಾ.ಕಾಂತೇಶ ಭಜಂತ್ರಿ,ತಾಲ್ಲೂಕು ಆರೋಗ್ಯ ಅಧಿಕಾರಿ

***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಮಾರುತಿ ಪೇಟಕರ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT