ಚುನಾವಣೆ: ಹವಾಮಾನವೇ ಈಗ ಸವಾಲು!

ಶುಕ್ರವಾರ, ಏಪ್ರಿಲ್ 26, 2019
35 °C
ಅಭ್ಯರ್ಥಿ–ಪಕ್ಷಗಳಿಗೆ ಪ್ರಚಾರದ ಸಂಕಟ, ಸಿಬ್ಬಂದಿಗೆ ಬೇಕಾಗಿದೆ ಅಗತ್ಯ ಸೌಕರ್ಯ

ಚುನಾವಣೆ: ಹವಾಮಾನವೇ ಈಗ ಸವಾಲು!

Published:
Updated:
Prajavani

ಹಾವೇರಿ: ದಿನೇ ದಿನೇ ಹೆಚ್ಚುತ್ತಿರುವ ಬಿಸಿಲ ಝಳ ಹಾಗೂ ಸಂಜೆಯ ಬಳಿಕ ಸುರಿಯುವ ಗುಡುಗು, ಸಿಡಿಲು, ಮಿಂಚು ಸಹಿತ ಅಕಾಲಿಕ ಮಳೆಯೇ ಪ್ರಚಾರದಲ್ಲಿ ತೊಡಗಿರುವ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಸವಾಲಾಗಿದೆ. ಇತ್ತ ಚೆಕ್‌ಪೋಸ್ಟ್ ಹಾಗೂ ಇತರ ಚುನಾವಣಾ ಸಿಬ್ಬಂದಿಯೂ ಬಳಲುವಂತೆ ಮಾಡಿದೆ. 

ಜಿಲ್ಲೆಯಲ್ಲಿ ಬಿಸಿಲಿನ ಝಳ ಏರಿಕೆಯಾಗುತ್ತಿದ್ದು ಗುರುವಾರ 41 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ತಾಪಮಾನವೂ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಇದರಿಂದಾಗಿ ಮಧ್ಯಾಹ್ನದ ವೇಳೆ ಗಿಜಿಗುಟ್ಟುತ್ತಿದ್ದ ಮಾರುಕಟ್ಟೆಯು ಬಹುತೇಕ ಬಿಕೋ ಎನ್ನಲು ಶುರುವಾಗಿದೆ.

ಕಳೆದ ಕೆಲವು ದಿನಗಳಲ್ಲಿ ಬಿಸಿಲು ತೀವ್ರವಾಗಿದೆ. ಮಧ್ಯಾಹ್ನ 12 ಗಂಟೆ ಬಳಿಕ ಹೊರಗೆ ಹೋಗುವುದೇ ಸಾಹಸ. ಇನ್ನು ಡಾಂಬರು ಅಥವಾ ಸಿ.ಸಿ. ರಸ್ತೆಯಲ್ಲಿ ಹೋದರೆ, ದೇಹವೇ ಬಳಲುತ್ತದೆ. ಅಲ್ಲೇ ಕುಸಿದು ಬೀಳುತ್ತೇವೆ ಎನ್ನುವಂತೆ ಭಾಸವಾಗುತ್ತಿದೆ ಎಂದು ಹಿರೇಕೆರೂರಿನ ಅಟೋಮೊಬೈಲ್ ಎಂಜಿನಿಯರ್‌ ವಿನಾಯಕ ಜಿ.ಟಿ. ತಿಳಿಸಿದರು.  ಬಹುತೇಕರು, ಮಧ್ಯಾಹ್ನ 12ರ ಬಳಿಕ ಮನೆ ಸೇರಿದರೆ, ಮತ್ತೆ 4 ಗಂಟೆಯ ಬಳಿಕವೇ ಹೊರಬರುತ್ತಿದ್ದಾರೆ.

ಪಕ್ಷಗಳ ಪರದಾಟ:
ಒಂದೆಡೆ ಬಿಸಿಲಿನ ಝಳದಿಂದ ಜನತೆ ಸಮಸ್ಯೆ ಎದುರಿಸುತ್ತಿದ್ದರೆ, ಇತ್ತ ಮತದಾನಕ್ಕೆ 12 ದಿನಗಳು ಉಳಿದಿದ್ದು, ಪ್ರಚಾರದಲ್ಲಿ ತೊಡಗಿರುವ ಪಕ್ಷಗಳು, ಅಭ್ಯರ್ಥಿಗಳಿಗೆ ಕಠಿಣ ಸವಾಲು ಎದುರಾಗಿದೆ.

‘ಬಿಸಿಲಿನ ಝಳದ ಪರಿಣಾಮ ಬೆಳಿಗ್ಗೆ 8ಕ್ಕೆ ಪ್ರಚಾರ ಆರಂಭಿಸುತ್ತೇವೆ. 10ರಿಂದ 11 ಗಂಟೆಗೆ ಮೊದಲ ಹಂತ ಕೊನೆಗೊಳಿಸುತ್ತೇವೆ. ಸಂಜೆ 5ರಿಂದ 8 ಗಂಟೆ ತನಕ ಮನೆ ಮನೆ ಪ್ರಚಾರ ನಡೆಸುತ್ತೇವೆ. ಮಧ್ಯಾಹ್ನದ ಅವಧಿಯಲ್ಲಿ ನೆರಳಲ್ಲಿ ಕುಳಿತುಕೊಂಡು ಪ್ರಚಾರದ ರೂಪುರೇಷೆ, ಸ್ಪಂದನೆಗಳ ಕುರಿತು ಚರ್ಚೆ ನಡೆಸುತ್ತೇವೆ’ ಎಂದು ಬಿಜೆಪಿ ವಕ್ತಾರ ಪ್ರಭು ಹಿಟ್ನಳ್ಳಿ ತಿಳಿಸಿದರು.

‘ಬೆಳಿಗ್ಗೆ 7ರಿಂದ 10ರ ತನಕ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸುತ್ತೇವೆ. ಮಧ್ಯಾಹ್ನದ ವೇಳೆಯಲ್ಲಿ ಕಾರ್ಯಕರ್ತರು ವಿಶ್ರಾಂತಿ  ಪಡೆದು, ಬಳಿಕ ಚರ್ಚೆ ನಡೆಸುತ್ತೇವೆ. ಮತ್ತೆ ಸಂಜೆ 5ರ ಬಳಿಕ ಪ್ರಚಾರ ಆರಂಭಿಸುತ್ತೇವೆ’ ಎಂದು ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮರೆಣ್ಣವರ ತಿಳಿಸಿದರು.

‘ಪ್ರಚಾರಕ್ಕೆ ಇನ್ನು ಕೇವಲ 240 ಗಂಟೆ (10 ದಿನ)ಗಳು ಸಿಗಲಿವೆ. ಈ ಪೈಕಿ ರಾತ್ರಿಯನ್ನು ಕಳೆದರೆ, 180 ಗಂಟೆಗಳೂ ಇಲ್ಲ. ಆದರೆ, ಲೋಕಸಭಾ ಕ್ಷೇತ್ರದ ಉತ್ತರದಿಂದ ದಕ್ಷಿಣಕ್ಕೆ ಸುಮಾರು 240 ಕಿ.ಮೀ. ಅಂತರವಿದೆ. ಈ ನಡುವೆ 17 ಲಕ್ಷ ಮತದಾರರು ಇದ್ದಾರೆ. ಹೀಗಾಗಿ ಅಭ್ಯರ್ಥಿಗಳು ಹಾಗೂ ಪ್ರಮುಖರಿಗೆ ಸಾಕಷ್ಟು ಸವಾಲು ಎದುರಾಗಿದೆ’ ಎಂದು ವಿವಿಧ ಪಕ್ಷಗಳ ಮುಖಂಡರು ತಿಳಿಸಿದರು.

ಈ ನಡುವೆಯೇ ಕಳೆದೆರಡು ದಿನಗಳಿಂದ ಸಂಜೆ ಬಳಿಕ ಗುಡುಗು, ಸಿಡಿಲು, ಮಿಂಚಿನ ಸಹಿತ ಮಳೆಯಾಗುತ್ತಿದೆ. ಇದರಿಂದಾಗಿ ಸಂಜೆಯ ಅವಧಿಯೂ ನಷ್ಟವಾಗುತ್ತಿದೆ ಎನ್ನುತ್ತಾರೆ ಕಾರ್ಯಕರ್ತರು.

ಚುನಾವಣಾ ಸಿಬ್ಬಂದಿಗೂ ಬಿಸಿ
ಜಿಲ್ಲೆಯಲ್ಲಿ 23 ಚೆಕ್‌ಪೋಸ್ಟ್‌ಗಳಿಗೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಬಿಸಿಲಿನ ಝಳದಿಂದ ಬಳಲುತ್ತಿದ್ದಾರೆ. ಇತ್ತ ಫ್ಲೈಯಿಂಗ್ ಸ್ಕ್ವಾಡ್ ಮತ್ತಿತರ ತಂಡಗಳಲ್ಲಿನ ಚುನಾವಣಾ ಸಿಬ್ಬಂದಿಯೂ ಬಿಸಿಲಿನಿಂದ ನೊಂದು ಹೋಗಿದ್ದಾರೆ. 

‘ಒಂದೆಡೆ ಬಿಸಿಲ ಝಳ. ಇನ್ನೊಂದೆಡೆ ರಸ್ತೆ ಡಾಂಬರಿನ ಬಿಸಿ. ನೆರಳಿಗೆ ಹಾಕಿದ ಶೀಟ್‌ನ ಬಿಸಿ. ಮಧ್ಯೆ ನಾವು ಬೆಂದು ಹೋಗುತ್ತಿದ್ದೇವೆ. ಚುನಾವಣಾ ಆಯೋಗವು ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ವ್ಯವಸ್ಥೆಗಳನ್ನೂ ಕಲ್ಪಿಸಬೇಕು’ ಎಂದು ಸಿಬ್ಬಂದಿ ಒಬ್ಬರು ಕಷ್ಟ ತೋಡಿಕೊಂಡರು.

**

ಬಿಸಿಲ ಝಳ ಹಾಗೂ ಸಂಜೆಯ ಮಳೆಯ ನಡುವೆಯೇ ಚೆಕ್‌ಪೋಸ್ಟ್‌ ಮತ್ತಿರೆಡೆಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಕುರಿತು ಜಿಲ್ಲಾಡಳಿತದ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. 
–ಕೆ. ಪರಶುರಾಂ, ಎಸ್ಪಿ, ಹಾವೇರಿ

**

ಜಿಲ್ಲಾಡಳಿತವು ನೀರು, ನರೇಗಾ ಇತ್ಯಾದಿ ಜನರ–ರೈತರ ಸಮಸ್ಯೆಗೆ ಸ್ಪಂದಿಸದೇ, ಯಾರ ಅಹವಾಲನ್ನೂ ಆಲಿಸದೇ, ಕೇವಲ ಪ್ರಚಾರಕ್ಕಾಗಿ ‘ಸ್ವೀಪ್‌’ ಕಾರ್ಯಕ್ರಮ ಮಾಡುತ್ತಿದ್ದರೆ, ಜನತೆಯೇ  ಸ್ವೀಪ್‌ (ಗುಡಿಸಿ) ಆಗಿ ಗುಳೆ ಹೋಗುತ್ತಾರೆ. 
–ರಾಮಣ್ಣ ಕೆಂಚಳ್ಳೇರ, ರೈತ ಮುಖಂಡರು 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !