ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕೊರತೆ; ಸೊರಗಿದ ಪ್ರವಾಸೋದ್ಯಮ

ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾದ ಪ್ರವಾಸಿ ತಾಣಗಳು; ಪಾಳುಬಿದ್ದ ಐತಿಹಾಸಿಕ ಸ್ಮಾರಕಗಳು
Last Updated 8 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಹಾವೇರಿ: ‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಎನಿಸಿದ ಹಾವೇರಿ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಆದರೆ, ಬಹುತೇಕ ತಾಣಗಳು ಹೊರಜಿಲ್ಲೆಗಳ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ. ಅನುದಾನ, ಪ್ರಚಾರ ಮತ್ತು ಮೂಲಸೌಕರ್ಯಗಳ ಕೊರತೆಗಳೇ ಇದಕ್ಕೆ ಕಾರಣವಾಗಿವೆ.

ಪ್ರವಾಸಿ ತಾಣಗಳಿಗೆ ಹೋಗಲು ಮುಖ್ಯವಾಗಿ ಉತ್ತಮ ರಸ್ತೆ ಮತ್ತು ಬಸ್‌ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ. ಮಾಹಿತಿ ನೀಡುವ ನಾಮಫಲಕಗಳು, ಕುಡಿಯುವ ನೀರು, ಶೌಚಾಲಯ, ಬೆಳಕಿನ ವ್ಯವಸ್ಥೆ, ಆಹಾರ ಮತ್ತು ವಸತಿ ಸೌಲಭ್ಯಗಳಿಲ್ಲದೆ ಪ್ರವಾಸಿ ತಾಣಗಳು ಮತ್ತು ಐತಿಹಾಸಿಕ ಸ್ಮಾರಕಗಳು ಕಳಾಹೀನವಾಗಿವೆ.

ಬಾಡಾದ ‘ಕನಕ ಅರಮನೆ’, ಕಾಗಿನೆಲೆಯ ‘ಕನಕ ಪರಿಸರಸ್ನೇಹಿ ಉದ್ಯಾನ’, ಶಿಗ್ಗಾವಿ ತಾಲ್ಲೂಕಿನ ‘ರಾಕ್‌ ಗಾರ್ಡನ್‌’, ‘ಅಗಡಿ ತೋಟ’, ಶಿಶುವಿನಹಾಳ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತಿವೆ. ಆದರೆ,ನವಿಲುಧಾಮ, ಕೃಷ್ಣಮೃಗ ವನ್ಯಜೀವಿಧಾಮಗಳು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿವೆ. ಅಭಿವೃದ್ಧಿ ಕಾಣದ ಈ ತಾಣಗಳಲ್ಲಿ ನವಿಲು ಮತ್ತು ಕೃಷ್ಣಮೃಗಗಳನ್ನು ದುರ್ಬೀನು ಹಾಕಿಕೊಂಡು ಹುಡುಕುವ ಪರಿಸ್ಥಿತಿ ಇದೆ ಎಂಬುದು ಪ್ರವಾಸಿಗರ ದೂರು.

ಪ್ರಚಾರದ ಕೊರತೆ:

ವರದಾ ಮತ್ತು ತುಂಗಾ ನದಿಗಳ ಸಂಗಮಸ್ಥಳವಾದ ಗಳಗನಾಥ, ಹಾವೇರಿ ನಗರದ ಪುರಸಿದ್ಧೇಶ್ವರ ದೇವಾಲಯ, ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ, ಚೌಡದಾನಪುರ, ಹಿರೇಕೆರೂರಿನ ದುರ್ಗಾದೇವಿ ದೇವಸ್ಥಾನ, ಸರ್ವಜ್ಞನ ಕವಿ ನೆಲೆಸಿದ್ದ ಅಬಲೂರು, ಹಾನಗಲ್‌ನ ತಾರಕೇಶ್ವರ, ಬಿಲ್ಲೇಶ್ವರ ದೇವಾಲಯ, ರಟ್ಟೀಹಳ್ಳಿಯ ಮಗದ–ಮಾಸೂರು ಕೆರೆ, ಕದಂಬೇಶ್ವರ ದೇಗುಲ, ಸವಣೂರಿನ ನವಾಬರ ಕೋಟೆ, ವಿಷ್ಣುತೀರ್ಥ, ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿ, ಸಾತೇನಹಳ್ಳಿ ಮುಂತಾದ ತಾಣಗಳು ವೈಶಿಷ್ಟ್ಯಪೂರ್ಣವಾಗಿವೆ. ಇವುಗಳನ್ನು ಅಭಿವೃದ್ಧಿಪಡಿಸಿ, ಸೂಕ್ತ ಪ್ರಚಾರ ನೀಡಿದರೆ ಪ್ರವಾಸಿಗರನ್ನು ಆಕರ್ಷಿಸಬಹುದು ಎನ್ನುತ್ತಾರೆ ನಾಗರಿಕರು.

ಸೋರುತ್ತಿರುವ ಸ್ಮಾರಕಗಳು:

ಹಾವೇರಿ ನಗರದ ಪುರಸಿದ್ಧೇಶ್ವರ, ಗಳಗನಾಥದ ಗಳಗೇಶ್ವರ, ಹರಳಹಳ್ಳಿಯ ಸೋಮೇಶ್ವರ, ಚೌಡದಾನಪುರದ ಮುಕ್ತೇಶ್ವರ, ರಟ್ಟೀಹಳ್ಳಿಯ ಕದಂಬೇಶ್ವರ, ಬಾಳಂಬೀಡದ ಕಲ್ಮೇಶ್ವರ, ನರೇಗಲ್‌ನ ಸರ್ವೇಶ್ವರ, ಹಾನಗಲ್‌ನ ತಾರಕೇಶ್ವರ, ಬಿಲ್ಲೇಶ್ವರ, ವೀರಭದ್ರೇಶ್ವರ ಹಾಗೂ ಬಂಕಾಪುರದ ನಗರೇಶ್ವರ ದೇವಸ್ಥಾನಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರುವ ಐತಿಹಾಸಿಕ ಸ್ಮಾರಕಗಳಾಗಿವೆ. ಇವುಗಳಲ್ಲಿ ಕೆಲವು ಸ್ಮಾರಕಗಳು, ದೇಗುಲಗಳು ಸೋರುತ್ತಿದ್ದು, ಮೂಲಸೌಕರ್ಯ ಕೊರತೆ ಎದುರಿಸುತ್ತಿವೆ.

ನನಸಾಗದ ಗಾಜಿನ ಮನೆ:

ಹಾವೇರಿ ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಯಲ್ಲಿ ‘ಗಾಜಿನ ಮನೆ’ ನಿರ್ಮಾಣದ ಕಾಮಗಾರಿ ಐದು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. ರಾಷ್ಟ್ರಿಯ ಹೆದ್ದಾರಿಗೆ (ಪುಣೆ– ಬೆಂಗಳೂರು) ಹೊಂದಿಕೊಂಡಿರುವ ಈ ಕೆರೆ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತದೆ ಎಂದು ನಿರೀಕ್ಷಿಸಿದ್ದ ಜನರ ಕನಸು ಇಂದಿಗೂ ನನಸಾಗಿಲ್ಲ.

‘ಕೂಡಲಸಂಗಮದ ಮಾದರಿಯಲ್ಲಿ ಶಿವಶರಣ ಅಂಬಿಗರ ಚೌಡಯ್ಯ ಲಿಂಗೈಕ್ಯವಾದ ಚೌಡದಾನಪುರವನ್ನು ಅಭಿವೃದ್ಧಿಪಡಿಸಬೇಕು. ಕವಿ ಸರ್ವಜ್ಞನ ಅಬಲೂರು ಮತ್ತು ಕಾದಂಬರಿ ಪಿತಾಮಹ ಗಳಗನಾಥನ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಪಾಳು ಬಿದ್ದಿರುವ ಕದಂಬರ ಕೋಟೆಯನ್ನು ಜೀರ್ಣೋದ್ಧಾರ ಮಾಡಬೇಕು’ ಎಂದು ಉಪನ್ಯಾಸಕ ಕಾಂತೇಶ ಅಂಬಿಗೇರ ಒತ್ತಾಯಿಸಿದರು.

ಪ್ರಸ್ತಾವಗಳಿಗೆ ಸಿಗದ ಅನುಮೋದನೆ

ಹಾವೇರಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಿ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಾವೇರಿಯ ಪ್ರವಾಸೋದ್ಯಮ ಇಲಾಖೆಯು 10 ಹೊಸ ಪ್ರಸ್ತಾವಗಳನ್ನು ನಾಲ್ಕು ವರ್ಷಗಳ ಹಿಂದೆ ಸರ್ಕಾರಕ್ಕೆ ಸಲ್ಲಿಸಿತ್ತು.

ಹಾವೇರಿ ತಾಲ್ಲೂಕಿನ ಹೆಗ್ಗೇರಿ ಕೆರೆಯಲ್ಲಿ ದೋಣಿ ವಿಹಾರ, ಸಂಗೀತ ಕಾರಂಜಿ ಸೌಲಭ್ಯ ಕಲ್ಪಿಸುವುದು. ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರದ ಬಳಿ ವೈಜ್ಞಾನಿಕ ಪ್ರಾತ್ಯಕ್ಷಿಕೆ ಉಪಕರಣಗಳ ಉದ್ಯಾನ, ಖಗೋಳಶಾಸ್ತ್ರ ಉದ್ಯಾನ, ಜೀವ ವೈವಿಧ್ಯ ಉದ್ಯಾನ ನಿರ್ಮಾಣ. ರಟ್ಟೀಹಳ್ಳಿ ತಾಲ್ಲೂಕಿನ ಕಣವಿಸಿದ್ಧೀಗೇರಿಯ ಸಿದ್ಧೇಶ್ವರ ದೇವಸ್ಥಾನ ಹತ್ತಿರ ಪರ್ವತ ಪ್ರದೇಶದಲ್ಲಿ ಸಾಹಸ ಪ್ರವಾಸಿ ಸ್ಥಳ ನಿರ್ಮಾಣ. ಹಿರೇಕೆರೂರು ತಾಲ್ಲೂಕಿನ ಮದಗ–ಮಾಸೂರು ಕೆರೆಯಲ್ಲಿ ಬೋಟಿಂಗ್‌ ಸೌಲಭ್ಯ,ಕಾಗಿನೆಲೆ ಪರಿಸರ ಸ್ನೇಹಿ ಉದ್ಯಾನದಲ್ಲಿ ಮಕ್ಕಳ ಪುಟಾಣಿ ರೈಲು ನಿರ್ಮಾಣ. ಬಾಡ ಗ್ರಾಮದ ಕನಕದಾಸ ಅರಮನೆ ಆವರಣದಲ್ಲಿ ಸಂಗೀತ ಕಾರಂಜಿ ನಿರ್ಮಾಣ... ಈ ಎಲ್ಲ ಪ್ರಸ್ತಾವಗಳು ಕಡತಗಳಲ್ಲೇ ಕೊಳೆಯುತ್ತಿವೆ.

12 ಪ್ರವಾಸಿ ಮಿತ್ರರ ನೇಮಕ

ಹಾವೇರಿ ಜಿಲ್ಲೆಯ ಆಯ್ದ ಪ್ರವಾಸಿ ತಾಣಗಳಿಗೆ 12 ‘ಪ್ರವಾಸಿ ಮಿತ್ರ’ರನ್ನು ನೇಮಕ ಮಾಡಿದ್ದು, ಅವರು ಪ್ರವಾಸಿಗರ ಸುರಕ್ಷತೆ ಮತ್ತು ಮಾರ್ಗದರ್ಶನ ನೀಡಲು ನೆರವಾಗುತ್ತಾರೆ. ಶಿಶುವಿನಾಳ, ಕದರಮಂಡಲಗಿ, ದೇವರಗುಡ್ಡ ಸೇರಿದಂತೆ 8 ಸ್ಥಳಗಳಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡಲು ‘ಡಿಜಿಟಲ್‌ ಬೋರ್ಡ್‌’ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಆರ್‌.ವಿ.ಚಿನ್ನಿಕಟ್ಟಿ ತಿಳಿಸಿದರು.

ಹಿರೇಕೆರೂರು ಕೆರೆಯಲ್ಲಿ ₹2 ಕೋಟಿ ವೆಚ್ಚದಲ್ಲಿ ಸರ್ವಜ್ಞ ಮೂರ್ತಿ ಸ್ಥಾಪನೆ, ₹1.65 ಕೋಟಿ ಚೌಡದಾನಪುರದಲ್ಲಿ ಹಾಗೂ ₹3 ಕೋಟಿ ವೆಚ್ಚದಲ್ಲಿ ಅರಟಾಳದ ಜೈನ ಬಸದಿಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

**

ಪ್ರವಾಸಿ ತಾಣಗಳ ಬಳಿ ಯಾತ್ರಿ ನಿವಾಸ ನಿರ್ಮಾಣ ಮತ್ತು ಮೂಲಸೌಕರ್ಯಕ್ಕೆ ಕ್ರಮ ಕೈಗೊಂಡಿದ್ದೇವೆ. ಸ್ವಚ್ಛತೆ ಕಾಪಾಡಲು ಆದ್ಯತೆ ನೀಡುತ್ತೇವೆ
– ಆರ್‌.ವಿ. ಚಿನ್ನಿಕಟ್ಟಿ, ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

**

ಹೋಂಸ್ಟೇ ಮಾದರಿಯ ವಸತಿ ವ್ಯವಸ್ಥೆ ಮತ್ತು ಫುಡ್‌ ಪಾರ್ಕ್‌ ಸ್ಥಾಪನೆಯಾಗಬೇಕಿದೆ. ಪ್ರವಾಸಿ ತಾಣಗಳಿಗೆ ಕೂಡಲೇ ಮೂಲಸೌಕರ್ಯ ಕಲ್ಪಿಸಲಿ
– ನಾಮದೇವ ಕಾಗದಗಾರ, ಕಲಾವಿದ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT