ಗುರುವಾರ , ಸೆಪ್ಟೆಂಬರ್ 19, 2019
22 °C
ಮೊದಲು ಅರಿವು, ಆಮೇಲೆ ದಂಡಾಸ್ತ್ರ; ಜಿಲ್ಲೆಯಲ್ಲೂ ಜಾರಿಯಾದ ಹೊಸ ನಿಯಮ

ಉಲ್ಲಂಘನೆಗೆ ಇನ್ಮುಂದೆ ದುಬಾರಿ ದಂಡ!

Published:
Updated:
Prajavani

ಹಾವೇರಿ: ಜಿಲ್ಲೆಯ ವಾಹನ ಸವಾರರೇ ಎಚ್ಚರ... ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತೆರಬೇಕಾಗುತ್ತದೆ. ಪೊಲೀಸರು ಪ್ರತಿ ರಸ್ತೆಗಳಲ್ಲೂ ವಿಶೇಷ ಕಾರ್ಯಾಚರಣೆ ನಡೆಸಿ, ಪರಿಷ್ಕೃತ ಪಟ್ಟಿ ಅನ್ವಯ ದಂಡ ಸಂಗ್ರಹಿಸಲು ಸಜ್ಜಾಗುತ್ತಿದ್ದಾರೆ. 

‘ರಸ್ತೆ ಅಪಘಾತಗಳ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದ ‘ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ–2019’ ಇದೀಗ ಜಾರಿಗೆ ಬಂದಿದೆ. ದಂಡದ ಮೊತ್ತ ಹೆಚ್ಚಾಗಿರುವ ಬಗ್ಗೆ ಮೊದಲು ಜನರಲ್ಲಿ ಜಾಗೃತಿ ಮೂಡಿಸಿ, ನಂತರ ದಂಡ ಪ್ರಯೋಗಿಸುತ್ತೇವೆ. ಎಎಸ್‌ಐ ಹಾಗೂ ಅದಕ್ಕಿಂತ ಹೆಚ್ಚಿನ ದರ್ಜೆಯ ಅಧಿಕಾರಿಗಳಿಗೆ ದಂಡ ಪ್ರಯೋಗಿಸುವ ಅಧಿಕಾರ ನೀಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ.ಜಿ.ದೇವರಾಜು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸವಾರರು ವಾಹನಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಮ್ಮೊಟ್ಟಿಗೆ ಇಟ್ಟುಕೊಳ್ಳುವುದರ ಜತೆಗೆ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ‘ಮಳೆಯ ಕಾರಣಕ್ಕೆ ದಾಖಲೆ ತಂದಿಲ್ಲ’ ಎಂದೆಲ್ಲ ಸಬೂಬುಗಳನ್ನು ಹೇಳುವಂತಿಲ್ಲ. ಡಿಜಿಟಲ್‌ ರೂಪದಲ್ಲಿ (ಮೊಬೈಲ್‌ನಲ್ಲಿ) ದಾಖಲೆಗಳನ್ನು ತೋರಿಸಿದರೂ ಪರಿಗಣಿಸುತ್ತೇವೆ’ ಎಂದರು.

‘ಆಟೊ, ಟ್ಯಾಕ್ಸಿ, ಲಾರಿ ಚಾಲಕರ ಸಂಘಗಳ ಸಭೆ ನಡೆಸಿ ಪರಿಷ್ಕೃತ ದಂಡದ ಬಗ್ಗೆ ಮಾಹಿತಿ ನೀಡಲಾಗುವುದು. ಪ್ರತಿ ಕಾಲೇಜುಗಳಲ್ಲಿ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಶನಿವಾರದಿಂದಲೇ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಕೆಲವೊಂದು ಉಲ್ಲಂಘನೆಗಳಿಗೆ ಸ್ಥಳದಲ್ಲೇ ದಂಡ ಕಟ್ಟಲು ಅವಕಾಶವಿರುತ್ತದೆ. ಹಣ ಇಲ್ಲದಿದ್ದರೆ ನೋಟಿಸ್ ಪಡೆದು ನ್ಯಾಯಾಲಯದಲ್ಲಿ ಪಾವತಿಸಬೇಕಾಗುತ್ತದೆ’ ಎಂದೂ ಹೇಳಿದರು.

ಪೋಷಕರ ವಿರುದ್ಧ ಕ್ರಮ: ‘ಮಕ್ಕಳು ಬೈಕ್ ಚಾಲನೆ ಮಾಡಿ ಸಿಕ್ಕಿಬಿದ್ದರೆ, ಅವರ ಪೋಷಕರು ಹಾಗೂ ವಾಹನದ ಮಾಲೀಕರಿಗೆ ₹ 25 ಸಾವಿರ ದಂಡ ವಿಧಿಸಲಾಗುವುದು. ಅಲ್ಲದೇ, ವಾಹನದ ನೋಂದಣಿ ರದ್ದು ಮಾಡಿ ಮೂರು ವರ್ಷ ಜೈಲಿಗೆ ಕಳುಹಿಸುವುದಕ್ಕೂ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಎರಡನೇ ಸಲ ಉಲ್ಲಂಘಿಸಿ ಸಿಕ್ಕಿಬಿದ್ದರೆ ದಂಡ ಇನ್ನೂ ಗಂಭೀರವಾಗಿರುತ್ತದೆ’ ಎಂದು ಎಸ್ಪಿ ಎಚ್ಚರಿಕೆ ನೀಡಿದರು. 

ಪರಿಷ್ಕೃತ ದಂಡದ ವಿವರ (ಆಧಾರ; ಪೊಲೀಸ್ ಇಲಾಖೆ)

ನಿಯಮ ಉಲ್ಲಂಘನೆ ಮಾದರಿ;ಹೊಸ ದಂಡ

ಟಿಕೆಟ್ ರಹಿತ ಪ್ರಯಾಣ; ₹500

ಹೆಲ್ಮೆಟ್‌ ರಹಿತ ಚಾಲನೆ; ₹1,000 

ಲೈಸೆನ್ಸ್‌ ಇಲ್ಲದೆ ಚಾಲನೆ; ₹5,000

ಲೈಸೆನ್ಸ್ ಅಮಾನತಿನಲ್ಲಿದ್ದಾಗ ಚಾಲನೆ; ₹10 ಸಾವಿರ

ವಾಹನಗಳ ವಿನ್ಯಾಸ ಬದಲಿಸಿದರೆ; ₹1 ಲಕ್ಷ

ವೇಗದ ಚಾಲನೆ; ₹2,000

ಅಪಾಯಕಾರಿ ಚಾಲನೆ; ₹5,000

ವಾಹನಗಳ ನೋಂದಣಿ ಮಾಡಿಸದಿದ್ದರೆ; ₹5,000

ಸೀಟ್ ಬೆಲ್ಟ್ ಧರಿಸದಿದ್ದರೆ; ₹1,000

ಹೆಲ್ಮೆಟ್ ಇಲ್ಲದ ಬೈಕ್ ಸವಾರಿ; ₹1,000

ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ; ₹10 ಸಾವಿರ

ನಿಶ್ಯಬ್ದ ವಲಯದಲ್ಲಿ ಹಾರ್ನ್ ಮಾಡಿದರೆ; ₹1,000

ವಿಮೆ ಇಲ್ಲದೆ ವಾಹನ ಚಾಲನೆಗೆ; ₹2,000

ಮದ್ಯಪಾನ ಮಾಡಿ ವಾಹನ ಚಾಲನೆ; ₹10 ಸಾವಿರ

ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ್ದರೆ; ₹1,000

ಪೊಲೀಸರ ಜತೆ ವಾಗ್ವಾದ ಮಾಡಿದರೆ; ₹2,000

ಮಿತಿಗಿಂತ ಮೀರಿದ ಹೆಚ್ಚು ಸರಕು ಸಾಗಣೆ; ₹20 ಸಾವಿರ‌

Post Comments (+)