ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಒತ್ತುವರಿ ತೆರವಿಗೆ ಒತ್ತಾಯ

ಹಳೇ ಗುಡಿಬಂಡೆ ಗ್ರಾಮಸ್ಥರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ; ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 22 ಮಾರ್ಚ್ 2018, 9:00 IST
ಅಕ್ಷರ ಗಾತ್ರ

ಗುಡಿಬಂಡೆ: ಹಳೇ ಗುಡಿಬಂಡೆ ಗ್ರಾಮದ ಮುಖ್ಯ ರಸ್ತೆ ಒತ್ತುವರಿಯಾಗಿದ್ದು ತೆರವು ಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ರಸ್ತೆ ಒತ್ತುವರಿಯಿಂದಾಗಿ ಜನ ಮತ್ತು ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿದೆ. ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗೆ ಮನವಿ ಮಾಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತು ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ಗ್ರಾಮದ ಮುಖಂಡ ಎಚ್.ಪಿ. ರಾಮನಾಥ್, ಈ ಹಿಂದೆ ಉಲ್ಲೋಡು ಗ್ರಾಮ ಪಂಚಾಯಿತಿ ವತಿಯಿಂದ ಬಡವರಿಗೆ ನಿವೇಶನ ನೀಡಿದ್ದಾರೆ. ಆದರೆ ಫಲಾನುಭವಿಗಳು ನಿವೇಶನದ ಜೊತೆಗೆ ಗ್ರಾಮದ ಮುಖ್ಯರಸ್ತೆಯನ್ನೂ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ. ಈ ಹಿಂದೆ ರಸ್ತೆ ಪಕ್ಕದಲ್ಲಿ ಖಾಸಗಿ ವ್ಯಕ್ತಿಯ ಜಮೀನು ಇತ್ತು. ಅದರಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರು. ಈಗ ಅವರು ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು, ದಾರಿಯನ್ನು ಮುಚ್ಚಲಾಗಿದೆ ಎಂದು ಹೇಳಿದರು.

ಒತ್ತುವರಿಯಿಂದ ಮುಖ್ಯರಸ್ತೆಯು ಕಿರಿದಾಗಿದೆ. ರಸ್ತೆ ವಿಸ್ತರಣೆಗೆ ಅವಕಾಶ ಇಲ್ಲದಂತಾಗಿದೆ. ಅಧಿಕಾರಿಗಳೂ ಸಹ ಒತ್ತುವರಿ ತೆರವಿನ ಬಗ್ಗೆ ಚಕಾರ ಎತ್ತುತ್ತಿಲ್ಲ. ತಹಶೀಲ್ದಾರ್‌, ತಾಲ್ಲೂಕು ಪಂಚಾಯಿ ಕಾರ್ಯ ನಿರ್ವಹಣಾ ಅಧಿಕಾರಿ ನೀಡಿದ ಭರವಸೆಯೂ ಈಡೇರಿಲ್ಲ. ಸಮಸ್ಯೆಗೆ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮದ ಮುಖ್ಯ ರಸ್ತೆಯು ದಾಖಲೆಗಳ ಪ್ರಕಾರ 22 ಅಡಿ ಇರಬೇಕು. ಆದರೆ ಈಗ ಅದು ಕೇವಲ 5 ಅಡಿ ಇದೆ. ಉಲ್ಲೋಡು ಗ್ರಾಮ ಪಂಚಾಯಿತಿ ಅಧಿಕಾರಿಗಳು ರಾಜಕೀಯ ಹಿತಾಸಕ್ತಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಜನರ ಸಮಸ್ಯೆ ಕಾಣುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮದಲ್ಲಿ ರಸ್ತೆ ಒತ್ತುವರಿ ಮಾಡಿ ಚರಂಡಿ ಮೇಲೆ ಶೌಚಾಲಯ ನಿರ್ಮಿಸಲಾಗಿದೆ. ಅದರ ಬಗ್ಗೆಯೂ ಸಾಕಷ್ಟು ದೂರು ನೀಡಲಾಗಿದೆ. ಆದರೆ ಸಾರ್ವಜನಿಕ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಅಕ್ರಮ ಕಟ್ಟಡಕ್ಕೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಿದ್ದಾರೆ ಎಂದೂ ದೂರಿದರು.
**
ಹಳೇ ಗುಡಿಬಂಡೆ ಮುಖ್ಯ ರಸ್ತೆ ಒತ್ತುವರಿ ಬಗ್ಗೆ ಈಗಾಗಲೇ ಸ್ಥಳ ಪರಿಶೀಲನೆ ಮಾಡಲಾಗಿದೆ. ಮೇಲಧಿಕಾರಿಗಳ ಆದೇಶದಂತೆ ಕಾರ್ಯಾಚರಣೆ ಕೈಗೊಳ್ಳಲಾಗುವುದು
- ಎನ್.ಆರ್.ಜಯಲಕ್ಷ್ಮಿ, ಇಒ, ತಾಲ್ಲೂಕು ಪಂಚಾಯತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT