ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲದ ಜೊತೆ ಉದ್ಯಮಶೀಲತೆ ಮುಖ್ಯ

ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಎಲೆಕ್ಟ್ರಿಕಲ್ ಮೋಟಾರು ರಿವೈಂಡಿಂಗ್ ಮತ್ತು ದುರಸ್ತಿ ಸೇವೆಗಳ ತರಬೇತಿ
Last Updated 3 ಜನವರಿ 2019, 14:30 IST
ಅಕ್ಷರ ಗಾತ್ರ

ಹಾವೇರಿ: ವೃತ್ತಿ ಕೌಶಲದ ಜೊತೆಗೆ ಉದ್ಯಮಶೀಲತೆಯನ್ನು ಕರಗತ ಮಾಡಿಕೊಂಡರೆ, ಬದುಕಿನಲ್ಲಿ ಬೇಗನೇ ಯಶಸ್ಸು ಗಳಿಸಲು ಸಾಧ್ಯ ಎಂದು ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ರವೀಂದ್ರ ಜಿ.ಎಂ. ಹೇಳಿದರು.

ಇಲ್ಲಿಗೆ ಸಮೀಪದ ಕೆರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಎಲೆಕ್ಟ್ರಿಕಲ್ ಮೋಟಾರು ರಿವೈಂಡಿಂಗ್ ಮತ್ತು ದುರಸ್ತಿ ಸೇವೆಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆರ್ಥಿಕವಾಗಿ ಸ್ವಾವಲಂಬಿಗಳಾದರೆ, ಪರಾವಲಂಬನೆ ತಪ್ಪುತ್ತದೆ. ಆ ಮೂಲಕ ಉತ್ತಮ ಬದುಕು ನಡೆಸಲು ಸಾಧ್ಯ. ಅಂತಹ ಆರ್ಥಿಕ ಸುಸ್ಥಿರತೆಗಾಗಿ ತರಬೇತಿಯನ್ನು ನೀಡಲಾಗುತ್ತಿದೆ. ಕೌಶಲದೊಂದಿಗೆ ಉದ್ಯಮಶೀಲತೆಯನ್ನೂ ಮೈಗೂಡಿಸಿಕೊಂಡಾಗ ಯಶಸ್ಸು ಇನ್ನಷ್ಟು ಬೇಗ ಬರುತ್ತದೆ ಎಂದರು.

ಲೀಡ್ (ವಿಜಯಾ) ಬ್ಯಾಂಕ್ ಪ್ರಬಂಧಕ ಕದರಪ್ಪ ಮಾತನಾಡಿ, ಎಲ್ಲರೂ ಖಾತೆ ತೆರೆಯಲು ಬ್ಯಾಂಕ್‌ಗೆ ಹೋದರೆ, ನಿಮ್ಮ ಬಳಿಯೇ ಬ್ಯಾಂಕ್ ಬಂದಿದೆ. ನಿಮ್ಮ ಖಾತೆಯನ್ನು ತೆರೆಯುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುತ್ತೇವೆ. ಇದರ ಸದುಪಯೋಗ ಪಡೆದುಕೊಂಡು, ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಬಾಳಬೇಕು ಎಂದರು.

ಜೈಲು ಅಧೀಕ್ಷಕ ತಿಮ್ಮಣ್ಣ ಭಜಂತ್ರಿ ಮಾತನಾಡಿ, ‘ಅರಿಯದೇ ಮಾಡಿದ ತಪ್ಪಿನಿಂದ ಇಲ್ಲಿಗೆ ಬಂದಿರಬಹುದು. ಆದರೆ, ಪಶ್ಚಾತಾಪದ ಮೂಲಕ ಅರಿವನ್ನು ಪಡೆದು, ಪರಿವರ್ತಿತ ವ್ಯಕ್ತಿಗಳಾಗಿ. ತರಬೇತಿಗಳ ಸದುಪಯೋಗ ಪಡೆದುಕೊಂಡು, ಬಿಡುಗಡೆ ಬಳಿಕ ಸಮಾಜದಲ್ಲಿ ಗೌರವಯುತ ಬದುಕು ಸಾಗಿಸಿ’ ಎಂದರು.

ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಮಹದೇವ ಕೀರ್ತಿ, ತರಬೇತುದಾರರಾದ ಮಹಾಂತೇಶ ಮ್ಯಾಗೇರಿ, ಚನ್ನಪ್ಪ, ಸಂತೋಷ, ರಾಜೇಶ್ವರಿ ಸಾರಂಗಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT