‘ಕುಟುಂಬದ ಪ್ರೀತಿ, ಕೆಲಸ ಕೊಡಿ’

7
ಸಾಮಾಜಿಕ ಮುಖ್ಯವಾಹಿನಿಗೆ ಬರಲು ಲಿಂಗತ್ವ ಅಲ್ಪಸಂಖ್ಯಾತರಿಗೆ ಅಕ್ಷತಾ ಕೆ.ಸಿ. ಕರೆ

‘ಕುಟುಂಬದ ಪ್ರೀತಿ, ಕೆಲಸ ಕೊಡಿ’

Published:
Updated:
Deccan Herald

ಹಾವೇರಿ: ಜಿಲ್ಲಾಡಳಿತವು ಇದೇ ಮೊದಲ ಬಾರಿಗೆ ‌ಲಿಂಗತ್ವ ಅಲ್ಪಸಂಖ್ಯಾತರಿಗೆ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಈ ಪ್ರಶಸ್ತಿಗೆ ಭಾಜನರಾದವರು, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ. ಅವರು, ತಮ್ಮ ಮನದಾಳದ ಮಾತನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

*ನಿಮ್ಮ ಬಾಲ್ಯ ಹೇಗಿತ್ತು?
ನಾನು, ದಲಿತ ಅಪ್ಪ–ಲಿಂಗಾಯತ ಅಮ್ಮನ ಮಗನಾಗಿ ಹುಟ್ಟಿದವಳು. ಬಾಲ್ಯದಲ್ಲೇ ಅಪ್ಪ ತೀರಿಕೊಂಡು, ಶಿಕ್ಷಕರೊಬ್ಬರು ಓದಿಸಿದರು. ಬಾಲ್ಯದಲ್ಲೇ ರಂಗೋಲಿ ಹಾಕುವುದು, ಹೆಣ್ಣು ಮಕ್ಕಳಂತೆ ಆಡುವುದು, ಲಂಗ–ದಾವಣಿ ತೊಡುವ ಆಸೆ ಆಗುತ್ತಿತ್ತು.  ಎಲ್ಲರೂ ‘ಚಕ್ಕಾ’, ‘ಮಾಮಾ’ ಎಂಬಿತ್ಯಾದಿ ಅಸಹ್ಯ ಮಾಡುತ್ತಿದ್ದರು. ‘ಸಂಸ್ಕೃತಿ’ ಬೋಧಿಸುವವರೇ ಲೈಂಗಿಕವಾಗಿ ಬಳಸಲು ಯತ್ನಿಸಿದ್ದರು. ಪಿಯುವಿನಲ್ಲಿ ಇದ್ದಾಗ, ಹುಡುಗಿ ಹೆಸರಲ್ಲಿ ಕರೆದು, ಚಪ್ಪಾಳೆ ಹೊಡೆದು ಹೀಯಾಳಿಸುತ್ತಿದ್ದರು. ಈ ಬಗ್ಗೆ ಮನೆಯಲ್ಲಿ ನೋವು ಹೇಳಿಕೊಂಡರೆ, ‘ನೀನು ಸರಿಯಾಗಿದ್ದರೆ, ಅವರೂ ಸರಿಯಾಗಿರುತ್ತಾರೆ’ಎಂದು ಬೈಯುತ್ತಿದ್ದರು. ಎಷ್ಟೇ ಪ್ರಯತ್ನ ಪಟ್ಟರೂ, ಪ್ರಕೃತಿದತ್ತವಾದ ಹೆಣ್ಣಿನ ನಡವಳಿಕೆ ತಪ್ಪಿಸಲು ಸಾಧ್ಯವಾಗಲಿಲ್ಲ. ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದೆನು...

*ಬದುಕಿನಲ್ಲಿ ಬದಲಾವಣೆ ತಂದ ಘಟನೆ ಯಾವುದು?
ಪದವಿ ತರಗತಿಯಲ್ಲಿ ಪ್ರಾಧ್ಯಾಪಕರೊಬ್ಬರು ನನ್ನನ್ನು ನಿಲ್ಲಿಸಿ, ‘ನೀನು ಹೆಣ್ಣೋ ಗಂಡೋ’ ಎಂದು ಅಸಹ್ಯ ಮಾಡಿದ್ದರು. ಆಗ, ನನಗೆ ಮದುವೆ ಮಾಡಲು ಮನೆಯಲ್ಲಿ ಸಿದ್ಧತೆ ನಡೆಸಿದ್ದರು. ಅದರೆ, ನಾನು ಮಾನಸಿಕವಾಗಿ ಹೆಣ್ಣಾಗಿದ್ದು, ಇನ್ನೊಂದು ಹೆಣ್ಣನ್ನು ವರಿಸಲು ಹೇಗೆ ಸಾಧ್ಯ? ಆಕೆಯ ಜೀವನ ಏಕೆ ಹಾಳು ಮಾಡಬೇಕು? ಎಂಬ ಪ್ರಶ್ನೆ ಕಾಡಿತು. ಮನೆ ಬಿಡಬೇಕಾಯಿತು.

*ಲಿಂಗತ್ವ ಅಲ್ಪಸಂಖ್ಯಾತರನ್ನು ಸೇರಿದ ಬಳಿಕ ಏನಾಯಿತು?
ಓದಿ ಅಧಿಕಾರಿಯಾಗುವ ಕನಸಿನಲ್ಲಿದ್ದ ನನಗೆ, ಸಾಮಾಜಿಕ ಕಿರುಕುಳದಿಂದಾಗಿ ‘ಹೆಣ್ತತನ’ವೇ ಪ್ರಮುಖವಾಯಿತು. ಕಿವಿ–ಮೂಗು ಚುಚ್ಚಿಕೊಳ್ಳಬೇಕು, ಸೀರೆ ಉಟ್ಟುಕೊಳ್ಳುವ ಆಸೆಯನ್ನು ಈಡೇರಿಸಿಕೊಂಡೆನು. ನನ್ನ ಬಳಿ ದೇಹ ಬಿಟ್ಟು, ಬೇರೆ ಆಸ್ತಿಯೂ ಇರಲಿಲ್ಲ. ಯಾರೂ ಕೆಲಸ ನೀಡಲಿಲ್ಲ. ಭಿಕ್ಷಾಟನೆ, ಲೈಂಗಿಕ ಕಾರ್ಯಕರ್ತೆಯರ ಒಡನಾಟ ಅನಿವಾರ್ಯವಾಯಿತು. ಆದರೂ, ಸ್ವಾಭಿಮಾನ ಕಾಡುತ್ತಿತ್ತು. ತಿರಸ್ಕರಿಸಿದವರೇ ಪುರಸ್ಕರಿಸುವಂತಾಗಬೇಕು ಎಂದು ಹೋರಾಟಕ್ಕಿಳಿದೆನು.

*ಹೋರಾಟದ ಹಾದಿ ಹೇಗಿದೆ?
ನಾನು ಬದಲಾಗಿದ್ದೇನೆ. ಆದರೆ, ನನ್ನನ್ನು ನೋಡುವ ಸಮಾಜ ಬದಲಾಗಬೇಕಲ್ಲ! ಸಾರ್ವಜನಿಕ ಶೌಚಾಲಯಕ್ಕೆ ಹೋದರೂ, ಆಚೆ– ಈಚೆ (ಪುರುಷ– ಮಹಿಳೆ) ಎಂದು ಅಲೆದಾಡಿಸುತ್ತಾರೆ. 4 ತಿಂಗಳು ಬಾಡಿಗೆ ಮನೆ ನೀಡಲಿಲ್ಲ. ದುಡಿಯಲು ತಯಾರಿದ್ದರೂ, ಕೆಲಸ ನೀಡಲಿಲ್ಲ. ಕೌಟುಂಬಿಕ ಪ್ರೀತಿ ಸಿಗಲಿಲ್ಲ. ಇದು, ಬಯಸಿ ಬಂದ ಜೀವನವಲ್ಲ... ಬಂದದ್ದನ್ನು ಅನುಭವಿಸುತ್ತಿದ್ದೇನೆ. ಆದರೆ, ನನ್ನ ಶಿಕ್ಷಣ–ಅರ್ಹತೆ, ಸಾಮರ್ಥ್ಯವನ್ನು ಯಾರೂ ಕೇಳುವುದಿಲ್ಲ. ‘ನೀನು ಗಂಡಸೋ, ಹೆಂಗಸೋ’ಎಂದು ಪ್ರಶ್ನಿಸುತ್ತಾರೆ. ಅಸಹ್ಯಕರವಾಗಿ ವರ್ತಿಸುತ್ತಾರೆ. ಇನ್ನೊಂದೆಡೆ, ನಮ್ಮವರೂ ಹೆಚ್ಚಿಲ್ಲ. ಹೀಗಾಗಿ, ‘ವೋಟ್‌ ಬ್ಯಾಂಕ್’ ಕೂಡಾ ಇಲ್ಲ. ಸತತ ಶೋಷಣೆಗೆ ಒಳಗಾಗಿದ್ದೇವೆ.

*ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪಾಡು ಹೇಗಿದೆ ?
ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ಬದಲಾವಣೆ ಆಗುತ್ತಿದೆ. ಮುಖ್ಯವಾಹಿನಿಯಲ್ಲಿರುವ 250 ಸೇರಿದಂತೆ ಸುಮಾರು 700 ಜನ ಇದ್ದೇವೆ. ಅಂದು, ಅಪರಾಧಿಗಳಂತೆ ಕಂಡವರು, ಇಂದು ‘ಮೇಡಂ’ ಎಂದು ಗೌರವಿಸುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿ, ಮಹಿಳಾ, ಪ್ರಗತಿಪರ ಸಂಘಟನೆಗಳು ಬೆಂಬಲವಾಗಿ ನಿಂತಿವೆ. ಜಿಲ್ಲಾಡಳಿತವೂ ನಮ್ಮನ್ನು ಗುರುತಿಸಿದ ಖುಷಿ ಇದೆ.

*ಲೈಂಗಿಕ ಕಾರ್ಯಕರ್ತೆಯರ ಪಾಡೇನು?
ವೇಶ್ಯಾವೃತ್ತಿಗೆ ಯಾರು ಇಷ್ಟಪಟ್ಟು ಬರುವುದಿಲ್ಲ. ಅದು, ಸರಳವೂ ಅಲ್ಲ. ಅಲ್ಲಿ ಶೋಷಣೆಯೇ ಹೆಚ್ಚು. ಹಲ್ಲೆ, ಮೋಸ, ವಂಚನೆ, ಎಚ್ಐವಿ ಸೇರಿದಂತೆ ಹಲವು ಅಪಾಯಗಳಿವೆ. ಆದರೆ, ಸಚಿವೆ ಜಯಮಾಲಾ ನೀಡಿದ ‘ಲೈಂಗಿಕ ಕಾರ್ಯಕರ್ತೆಯರ ಅಧ್ಯಯನ ಸಮಿತಿ’ ವರದಿ ಏನಾಯಿತು? ಬಜೆಟ್‌ನಲ್ಲಿ ಏನು ಕಾರ್ಯಕ್ರಮ ನೀಡಿದ್ದಾರೆ? ಸ್ವಾಭಿಮಾನಿ ಬದುಕಿಗೆ ಅವಕಾಶ ಎಲ್ಲಿದೆ?

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !