ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು | ಹದಗೆಟ್ಟ ರಸ್ತೆ; ಪ್ರಯಾಣಿಕರು ಹೈರಾಣ

ಕಿತ್ತು ಹೋದ ಡಾಂಬರು, ಜಲ್ಲಿ ಎದ್ದ ದಾರಿಯಲ್ಲಿ ಸಂಚಾರಕ್ಕೆ ಸಂಚಕಾರ
Last Updated 3 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಲಿಂಗದಹಳ್ಳಿ ಮತ್ತು ಕುಪ್ಪೇಲೂರು ಮಾರ್ಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಡಾಂಬರು ಕಿತ್ತು ಅನೇಕ ವರ್ಷಗಳು ಗತಿಸಿವೆ. ರಸ್ತೆ ತುಂಬ ಕಲ್ಲುಗಳು ಎದ್ದಿದ್ದು ನಡೆದುಕೊಂಡು ಹೋಗುವುದು ಕೂಡ ದುಸ್ತರವಾಗಿದೆ. ಬೈಕ್‌ ಸವಾರರಂತು ಅನೇಕ ಬಾರಿ ಬಿದ್ದು, ಕೈ–ಕಾಲು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿರುವ ಉದಾಹರಣೆಗಳಿವೆ.

ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ರೈತರು ಜಮೀನುಗಳಿಗೆ ಹೋಗಲು ತೀವ್ರ ತೊಂದರೆಯಾಗಿದೆ. ಈ ಗ್ರಾಮದ ಸುತ್ತಲಿನ ಹಳ್ಳಿಗಳಿಗೆ ಹಾಗೂ ತಾಲ್ಲೂಕು ಕೇಂದ್ರಕ್ಕೆ ಸಂಪರ್ಕಿಸಲು ಉತ್ತಮ ರಸ್ತೆ ಇಲ್ಲ. ರಸ್ತೆಯ ತುಂಬಾ ಜಲ್ಲಿ ಕಲ್ಲುಗಳು ಎದ್ದಿವೆ. ತಗ್ಗು–ಗುಂಡಿಗಳು ಬಿದ್ದಿವೆ. ಶಾಲಾ ಕಾಲೇಜು ಮಕ್ಕಳು, ಸರ್ಕಾರಿ ನೌಕರರು, ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಸಂಕಷ್ಟ ಎದುರಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.

‘ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ ರಸ್ತೆ ಹಾಳಾಗಿದೆ. ಕೆಲವು ಮಳೆಯ ನೀರಿನಿಂದ ಮಣ್ಣು ಕೊಚ್ಚಿಕೊಂಡು ಹೋಗಿದ್ದು ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ. ಇದೇ ರಸ್ತೆಯಲ್ಲಿ ಹೊಳೆ ಆನ್ವೇರಿ, ಕೋಟಿಹಾಳ, ನಿಟಪಳ್ಳಿ, ನಾಗೇನಹಳ್ಳಿ, ಕೃಷ್ಣಾಪುರ, ಮಾಕನೂರು, ಮುದೇನೂರ, ಇಟಗಿ, ಮುಷ್ಟೂರ, ಮಣಕೂರ, ಮಾಳನಾಯಕನಹಳ್ಳಿ ಮುಂತಾದ ಗ್ರಾಮಗಳಿಗೆ ಹೋಗುವ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಹೊಳೆ ಆನ್ವೇರಿಯ ಹಾಲಪ್ಪ ಬುಳ್ಳಾಪುರ, ಹೊನ್ನಪ್ಪ ಕೆಳಗಿನಮನಿ ಹಾಗೂ ಪ್ರಶಾಂತ ಎಂ.

ರಸ್ತೆ ಹದಗೆಟ್ಟಿದ್ದರಿಂದ ಮೂರು ನಾಲ್ಕು ಕಿ.ಮೀ. ದೂರ ಸುತ್ತುವರಿದು ಬರಬೇಕು. ಇದರಿಂದ ಸಮಯದ ಜೊತೆಗೆ ಹಣ ವ್ಯಯವಾಗುತ್ತದೆ ಎಂದು ಗ್ರಾಮಸ್ಥರು ದೂರುತ್ತಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ಹಳ್ಳಿ ಜನರ ಕೂಗು ಕೇಳುತ್ತಿಲ್ಲ. ರಸ್ತೆ ಹದಗೆಟ್ಟ ಬಗ್ಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ಅವರಿಗೆ ಅನೇಕ ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಮಾರ್ಚ 31ರೊಳಗೆ ಈ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಗಡುವು ನೀಡಿದ್ದಾರೆ.

ಈ ರೀತಿ ನಿರ್ಲಕ್ಷತನ ತೋರಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಸುತ್ತಮುತ್ತಲಿನ ಗ್ರಾಮದ ಜನರು ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಹಾಗೂ ಯಲ್ಲಪ್ಪರಡ್ಡಿ ಚಳಗೇರಿ, ಮಾಲತೇಶ ಪೂಜಾರ, ವಿಜಯಕುಮಾರ ಕೆಳಗಿಮನಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT