ಬತ್ತಿದ ತುಂಗಭದ್ರಾ: ನಗರಕ್ಕೆ ನೀರಿಲ್ಲ

ಗುರುವಾರ , ಏಪ್ರಿಲ್ 25, 2019
33 °C
ವಾರದಿಂದ ಬಾರದ ನೀರು, ಇನ್ನೂ ಐದು ದಿನ ಕಷ್ಟಕಷ್ಟ, ನೀರಿನ ಕರ ₹4 ಕೋಟಿ ಬಾಕಿ

ಬತ್ತಿದ ತುಂಗಭದ್ರಾ: ನಗರಕ್ಕೆ ನೀರಿಲ್ಲ

Published:
Updated:
Prajavani

ಹಾವೇರಿ: ಬೇಸಿಗೆಯ ತಾಪಮಾನ ಏರುವ ಮೊದಲೇ ಜಿಲ್ಲೆಯಲ್ಲಿ ನೀರಿನ ಬವಣೆ ಹೆಚ್ಚಿದೆ. ತುಂಗಭದ್ರಾ ನದಿ ಬತ್ತಿದ್ದು, ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ ತಾಲ್ಲೂಕುಗಳಲ್ಲಿ ನೀರು ಪೂರೈಕೆ ವ್ಯತ್ಯಯಗೊಂಡಿದೆ. ’ಬರ’ದ ಜಿಲ್ಲೆಯ ಬವಣೆ ತೀವ್ರಗೊಂಡಿದೆ.

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ನಿಂತು ಕೆಲವು ದಿನಗಳೇ ಕಳೆದಿವೆ. ಜಿಲ್ಲಾ ಕೇಂದ್ರವಾದ ಹಾವೇರಿ ಸೇರಿದಂತೆ ಹಲವಡೆ ವಾರದಿಂದ ನೀರು ಸರಬರಾಜು ಆಗುತ್ತಿಲ್ಲ. ಜನತೆ ನೀರಿಲ್ಲದೇ ಪರಿತಪಿಸುತ್ತಿದ್ದಾರೆ.

‘ನದಿಯಲ್ಲಿ ನೀರು ಬತ್ತಿ ಹೋದ ಕಾರಣ ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹಿರೇಕೆರೂರ, ಗುತ್ತಲ ಪಟ್ಟಣಗಳ ನೀರು ಸರಬರಾಜು ವ್ಯತ್ಯಯಗೊಂಡಿದ್ದು, 0.207 ಟಿಎಂಸಿ ನೀರಿಗೆ ಬೇಡಿಕೆ ಸಲ್ಲಿಸಿದ್ದೇವೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಾಸಣ್ಣ ತಿಳಿಸಿದರು.

ನದಿಯನ್ನು ಅವಲಂಬಿಸಿದ 8 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ನೀರಿಲ್ಲದ ಪರಿಣಾಮ ಜಿಲ್ಲೆಯ 116 ಹಳ್ಳಿಗಳಲ್ಲಿ ಸಮಸ್ಯೆ ಉಂಟಾಗಿದೆ. ವರದಾ ನದಿಯನ್ನು ಅವಲಂಬಿಸಿದ ಹುರುಳಿಕೊಪ್ಪ ಮತ್ತು ಕೂಡಲದಲ್ಲಿ ನೀರು ಬತ್ತಿದೆ.

‘8 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗಾಗಿ 0.062 ಟಿಎಂಸಿ ನೀರು ಬಿಡುವಂತೆ ಮನವಿ ಸಲ್ಲಿಸಲಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ವಿನಾಯಕ ಹುಲ್ಲೂರ ತಿಳಿಸಿದರು.

‘ಭದ್ರಾ ಜಲಾಶಯದಿಂದ 0.269 ಟಿ.ಎಂ.ಸಿ. ನೀರು ಹರಿಸಲು ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾಡಳಿತ ಮನವಿ ಸಲ್ಲಿಸಿತ್ತು. ಈ ನೀರು, ನಾಲ್ಕೈದು ದಿನಗಳಲ್ಲಿ ಜಾಕ್‌ವೆಲ್‌ಗೆ ಬಂದು ತಲುಪಬಹುದು’ ಎಂದು ಪೌರಾಯುಕ್ತ ಬಸವರಾಜ ಜಿಡ್ಡಿ ತಿಳಿಸಿದರು.

‘ಭದ್ರಾ ಜಲಾಶಯದಿಂದ ಕೆಂಚಾರಗಟ್ಟಿಯ ಜಾಕ್‌ವಾಲ್‌ ತನಕ ಸುಮಾರು 217 ಕಿ.ಮೀ. ಇದೆ. ಪ್ರತಿನಿತ್ಯ 2 ಸಾವಿರ ಕ್ಯೂಸೆಕ್‌ ನೀರು ಬಿಟ್ಟರೆ, ಇಲ್ಲಿಗೆ ತಲುಪಲು ಐದರಿಂದ ಆರು ದಿನ ಬೇಕಾಗಬಹುದು’ ಎಂದು ನಗರಸಭೆ ಸದಸ್ಯ ಗಣೇಶ ಬಿಷ್ಟಣ್ಣನವರ ತಿಳಿಸಿದರು. 

‘ಆದರೆ, ನದಿ ತೀರದಲ್ಲಿ ಸುಮಾರು 62 ಸಾವಿರ ಅನಧಿಕೃತ ಪಂಪ್‌ಸೆಟ್‌ಗಳಿವೆ. ಅವುಗಳ ಸಂಪರ್ಕ ಕಡಿತಗೊಳಿಸುವ ಕೆಲಸವನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆ ಹಾಗೂ ಹೆಸ್ಕಾಂ ಮಾಡಬೇಕು. ಇಲ್ಲದಿದ್ದರೆ, ನೀರು ಮುಂದೆ ಹರಿದು ಬರುವ ಸಾಧ್ಯತೆ ತೀರಾ ವಿರಳವಾಗಲಿದೆ. ಜಿಲ್ಲೆಯಲ್ಲಿ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !