ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಧಿಕಾರಕ್ಕಾಗಿ ‘ಉತ್ತಮ ಪ್ರಜಾಕೀಯ’

ತಮ್ಮ ಪಕ್ಷದ ಅಭ್ಯರ್ಥಿ ಈಶ್ವರ ಪಾಟೀಲ ಕುರಿತು ಪ್ರಚಾರ ಮಾಡಿದ ಚಿತ್ರನಟ ಉಪೇಂದ್ರ
Last Updated 10 ಏಪ್ರಿಲ್ 2019, 16:16 IST
ಅಕ್ಷರ ಗಾತ್ರ

ಹಾವೇರಿ:ಹಣ, ಪ್ರಭಾವ, ತೋಳ್ಬಲದ ರಾಜಕೀಯಕ್ಕೆ ಪರ್ಯಾಯವಾಗಿ ಜನ ಬಲದ ಪ್ರಜಾತಂತ್ರವನ್ನು ಜಾರಿಗೆ ತರುವುದೇ ‘ ಉತ್ತಮ ಪ್ರಜಾಕೀಯ’. ಇದು ಜನ ಸಾಮಾನ್ಯರ ಪರವಾಗಿ ಕೆಲಸ ಮಾಡುವವರ ಪಕ್ಷ ಎಂದು ಸಂಸ್ಥಾಪಕ, ಚಿತ್ರನಟ ಉಪೇಂದ್ರ ಹೇಳಿದರು.

ಬಂಡವಾಳಶಾಹಿಗಳ ಬದಲಾಗಿ, ಜನರ ಕೈಗೆ ಅಧಿಕಾರ ನೀಡುವುದು ನಮ್ಮ ಉದ್ದೇಶ. ಈ ಬಾರಿ ನಮ್ಮ ಪಕ್ಷದಿಂದ 27 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜಕೀಯ ಎಂದರೆ ವ್ಯಾಪಾರವಲ್ಲ. ಆದರೆ, ಸದ್ಯದ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಈ ವ್ಯವಸ್ಥೆಯನ್ನು ಬದಲಾಯಿಸಿ, ಸಂವಿಧಾನದ ಆಶಯದಂತೆ ಜನರ ಕೈಗೇ ಅಧಿಕಾರ ನೀಡಲು ಪಕ್ಷ ಸ್ಥಾಪಿಸಲಾಗಿದೆ ಎಂದ ಅವರು, ನಮ್ಮ ಅಭ್ಯರ್ಥಿ ದೊಡ್ಡ ದೊಡ್ಡ ರ್‍ಯಾಲಿ, ಸಮಾವೇಶಗಳನ್ನು ಮಾಡುವುದಿಲ್ಲ. ಅದಕ್ಕೆ ಬಂಡವಾಳ ಎಲ್ಲಿಂದ ತರಬೇಕು? ಹಾಗೆ ಮಾಡುವವರಿಗೆ ಹಣ ಎಲ್ಲಿಂದ ಬರುತ್ತದೆ? ಆ ಹಣದ ಮೂಲ ಯಾವುದು? ಎಂದು ನೀವೇ ಆಲೋಚಿಸಿ, ಮತ ಚಲಾಯಿಸಿ ಎಂದರು.

‘ನಾವು ಸೇವಕರೂ ಅಲ್ಲ, ನಾಯಕರೂ ಆಲ್ಲ. ನಿಮ್ಮಿಂದ ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕರು. ಚುನಾವಣೆಯಲ್ಲಿ ಅಭ್ಯರ್ಥಿಗಿಂತ ಮತದಾರ ಗೆಲ್ಲಬೇಕು. ಸುಳ್ಳು ಭರವಸೆಗಳನ್ನು ನಂಬಿ ಮೋಸ ಹೋಗದೆ ಜನರು ಹೇಳಿದಂತೆ ನಡೆದುಕೊಳ್ಳುವ ವ್ಯಕ್ತಿಯನ್ನು ಬೆಂಬಲಿಸಬೇಕು. ವ್ಯಕ್ತಿಗಿಂತ ವಿಚಾರಗಳು ಮುಖ್ಯವಾಗಬೇಕು ಎಂದರು.

ನಾವು ಯಾರನ್ನೂ ದೂರುವುದಿಲ್ಲ. ಹಣ ಸುರಿದು ಚುನಾವಣೆಯೂ ಮಾಡುವುದಿಲ್ಲ. ಮಾಧ್ಯಮಗಳ ಮೂಲಕ ಜನರನ್ನು ತಲುಪಿ, ರಾಜಕೀಯದಲ್ಲಿ ಬದಲಾವಣೆ ತರಲು ಬಯಸಿದ್ದೇವೆ. ಹೀಗಾಗಿ, ನಿಮ್ಮ ಬೇಡಿಕೆಯೇ ನಮ್ಮ ಪ್ರಣಾಳಿಕೆ. ಪ್ರಣಾಳಿಕೆಯಲ್ಲಿ ನೀಡುವ ವಿಚಾರಗಳನ್ನು ಕಾಲಮಿತಿಯೊಳಗೆ ನಿಗದಿ ಮಾಡುತ್ತೇವೆ ಎಂದರು.

ಅಭ್ಯರ್ಥಿಗಳ ಆಯ್ಕೆಗೆ ಜಾತಿ, ಹಣ ಇತ್ಯಾದಿಗಳನ್ನು ಪರಿಗಣಿಸಿಲ್ಲ. ಅರ್ಹತೆ ಹೊಂದಿದ ಸಾಮಾನ್ಯ ವ್ಯಕ್ತಿಯನ್ನು ಕಣಕ್ಕೆ ಇಳಿಸಿದ್ದೇವೆ. 5 ವರ್ಷ ಪ್ರಜೆಗಳ ಕೈಯಲ್ಲಿ ಅಧಿಕಾರ ಕೊಡುತ್ತೇವೆ. ಗೆದ್ದ ಅಭ್ಯರ್ಥಿ ಸರ್ಕಾರದ ಸಂಬಳ ಪಡೆದುಕೊಂಡು ಜನರ ಪರವಾಗಿ ದುಡಿಯುತ್ತಾರೆ. ಇದನ್ನು ಒಪ್ಪಿಕೊಂಡವರನ್ನೇ ಕಣಕ್ಕೆ ಇಳಿಸಲಾಗಿದೆ ಎಂದರು.

ಒಂದೇ ಬಾರಿಗೆ ರಾಜಕೀಯ ವ್ಯವಸ್ಥೆ ಸುಧಾರಿಸುತ್ತೇವೆ ಎಂಬ ಭ್ರಮೆಯಿಲ್ಲ. ಆದರೆ, ಬಹುತೇಕರು ಈಗಿನ ರಾಜಕೀಯ ವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ. ಹೀಗಾಗಿ, ನಮ್ಮ ಅಭ್ಯರ್ಥಿಯನ್ನು ಜನರೇ ಗೆಲ್ಲಿಸಿಕೊಂಡು ಬರಬೇಕು. ಕೆಲವು ವರ್ಷಗಳಲ್ಲಿ ಆ ವ್ಯವಸ್ಥೆ ಬರುವ ಭರವಸೆಯೂ ಇದೆ ಎಂದರು.

ಕ್ಷೇತ್ರದ ಅಭ್ಯರ್ಥಿ ಈಶ್ವರ ಪಾಟೀಲ ಮಾತನಾಡಿ, ನಾಮಪತ್ರ ಸಲ್ಲಿಕೆಗೆ ಠೇವಣಿ ಹಾಗೂ ಕರಪತ್ರ ಮುದ್ರಿಸುವ ಖರ್ಚು ಮಾತ್ರ ಮಾಡುತ್ತಿದ್ದೇನೆ. ಕ್ಷೇತ್ರದ ಮತದಾರರು ಪ್ರಜಾಕೀಯ ಪಕ್ಷವನ್ನು ಬೆಂಬಲಿಸಿ, ಪ್ರಜಾಪ್ರಭುತ್ವದ ಆಶಯದಂತೆ ನಿಮ್ಮ ಕೈಯಲ್ಲೇ ಅಧಿಕಾರ ಇಟ್ಟುಕೊಳ್ಳಬೇಕು. ಆಯ್ಕೆ ಮಾಡಿದರೆ, ನಿಮ್ಮ ಇಚ್ಛೆಯಂತೆ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT