ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ ಮಿತಿಯೊಳಗೆ ಅನುದಾನ ಬಳಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್

Last Updated 21 ನವೆಂಬರ್ 2021, 14:21 IST
ಅಕ್ಷರ ಗಾತ್ರ

ಹಾವೇರಿ: ‘ಇಲಾಖಾವಾರು ಬಿಡುಗಡೆಗೊಂಡ ಅನುದಾನವನ್ನು ಕಾಲಮಿತಿಯೊಳಗಾಗಿ ಬಳಸಿ ನಿಗದಿತಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಫಲಾನುಭವಿ ಆಧಾರಿತ ಯೋಜನೆಗಳ ಗುರಿ ಸಾಧಿಸಬೇಕು. ಬಿಡುಗಡೆಯಾದ ಯಾವುದೇ ಅನುದಾನ ವಾಪಸ್‌ ಹೋಗಬಾರದು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಾನುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಎಲ್ಲ ಇಲಾಖೆಗಳು ಚುರುಕಾಗಿ ಕೆಲಸ ಮಾಡಬೇಕು. ನಿಗದಿತ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದರು.

ಅಶಕ್ತರಿಗೆ ಸವಲತ್ತು ತಲುಪಿಸಿ:

ಅಂಗವಿಕಲರ ಇಲಾಖೆ, ಆಯುಷ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಹಾಗೂ ವಯಸ್ಕರ ಶಿಕ್ಷಣ ಇಲಾಖೆಗಳಿಗೆ ಅನುದಾನ ಕಡಿಮೆ ಎನ್ನುವ ಕಾರಣಕ್ಕೆ ಕಡೆಗಣಿಸುವಂತಿಲ್ಲ. ಈ ಇಲಾಖೆಗಳು ಸಮಾಜದ ಅಶಕ್ತ ಸಮುದಾಯ ಬದುಕನ್ನು ಬದಲಾಯಿಸಲು ಮಹತ್ವದ ಇಲಾಖೆಗಳಾಗಿವೆ. ಈ ಇಲಾಖಾ ಅಧಿಕಾರಿಗಳು ಪರಿಣಾಮಕಾರಿಯಾಗಿ ಜನೋಪಯೋಗಿ ಕೆಲಸ ಮಾಡಬೇಕು ಎಂದರು. ಅಂಗವಿಕಲರಿಗಾಗಿ ಕಂಪ್ಯೂಟರ್ ಕೇಂದ್ರ ಆರಂಭಿಸಿ ತರಬೇತಿ ನೀಡುವಂತೆ ಅಂಗವಿಕಲ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿ ನಿಲಯಗಳಿಗೆ ವಿದ್ಯಾರ್ಥಿಗಳ ಪ್ರವೇಶ ದಟ್ಟಣೆ ಹೆಚ್ಚಾಗಿರುವುದರಿಂದ ನಗರ ಕೇಂದ್ರೀತ ಪ್ರದೇಶಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸುವ ಕುರಿತಂತೆ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.

ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಈಗಾಗಲೇ 75 ಗ್ರಾಮಗಳಲ್ಲಿ ಮನೆ– ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದೆ. ಈ ಕುರಿತಂತೆ ಗ್ರಾಮಗಳಿಗೆ ತೆರಳಿ ಯೋಜನೆ ಪರಿಶೀಲಿಸುವಂತೆ ಜಲಜೀವನ್ ಮಿಷನ್ ಎಂಜಿನಿಯರ್‌ಗೆ ಸೂಚನೆ ನೀಡಿದರು. ಎಲ್ಲ ಪಶು ಆಸ್ಪತ್ರೆಯಲ್ಲಿ ತುರ್ತು ಔಷಧಿಗಳು ಲಭ್ಯವಿರುವಂತೆ ಕ್ರಮಕೈಗೊಳ್ಳುವಂತೆ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ತ್ವರಿತ ವಿಲೇವಾರಿ ಮಾಡಿ:

ಉಪ ವಿಭಾಗಾಧಿಕಾರಿಗಳ ಕೋರ್ಟ್‍ನಲ್ಲಿ ವಿಚಾರಣೆಯಲ್ಲಿರುವ ಕಂದಾಯ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು. ಮಾನವೀಯ ಸ್ಪರ್ಶದೊಂದಿಗೆ ಈ ಪ್ರಕರಣಗಳನ್ನು ಪರಿಗಣಿಸಬೇಕು. ಯಾವುದೇ ವಿಳಂಬವಿಲ್ಲದಂತೆ ವಿಲೇವಾರಿಗೆ ಆದ್ಯತೆ ನೀಡಬೇಕು. ಇದೇ ಮಾದರಿಯಲ್ಲಿ ಸಕಾಲ ಯೋಜನೆಯ ಪ್ರಕರಣಗಳನ್ನು ವಿಲೆಗೊಳಿಸಲು ಉಪವಿಭಾಗಾಧಿಕಾರಿಗಳಿಗೆ ಹಾಗೂ ವಿವಿಧ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT