ಬುಧವಾರ, ಸೆಪ್ಟೆಂಬರ್ 29, 2021
20 °C
ಸೆ.17ರಂದು ಕೋವಿಡ್ ಲಸಿಕೆ ಮಹಾಮೇಳ

70 ಸಾವಿರ ಜನರಿಗೆ ಲಸಿಕೆ ಗುರಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸೆ.17ರಂದು ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾ ಮಹಾಮೇಳ ಹಮ್ಮಿಕೊಳ್ಳಲಾಗಿದೆ. ಒಂದೇ ದಿನದಲ್ಲಿ ಜಿಲ್ಲೆಯ 18 ವರ್ಷ ಮೇಲ್ಪಟ್ಟ 70 ಸಾವಿರ ಜನರಿಗೆ ಉಚಿತ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆ ಪಡೆಯದ ಎಲ್ಲರೂ ಕೋವಿಡ್ ಲಸಿಕೆ ಪಡೆಯಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಮನವಿ ಮಾಡಿಕೊಂಡರು. 

ಜಿಲ್ಲೆಯಾದ್ಯಂತ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ 400 ಲಸಿಕಾ ಕೇಂದ್ರಗಳನ್ನು ತೆರೆದು ಬೆಳಿಗ್ಗೆ 8ರಿಂದ ಸಂಜೆ 7 ಗಂಟೆವರೆಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುವುದು. ಲಸಿಕೆ ಪಡೆಯುವ ಮುನ್ನ ಸಾರ್ವಜನಿಕರು ಉಪಹಾರ ಸೇವಿಸಿ ಲಸಿಕಾ ಕೇಂದ್ರಕ್ಕೆ ಆಗಮಿಸುವಂತೆ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ರಾಜ್ಯದಾದ್ಯಂತ ಸೆ.17ರಂದು ಬೃಹತ್ ಲಸಿಕಾ ಮಹಾಮೇಳವನ್ನು ಹಮ್ಮಿಕೊಳ್ಳಲಾಗಿದೆ. ಒಂದೇ ದಿನ ರಾಜ್ಯದ 30 ಲಕ್ಷ ಜನರಿಗೆ ಉಚಿತ ಲಸಿಕೆ ಹಾಕುವ ಬೃಹತ್ ಗುರಿ ಹಾಕಿಕೊಳ್ಳಲಾಗಿದೆ. ಎಲ್ಲ ಜಿಲ್ಲಾಡಳಿತಗಳು ಸಿದ್ಧತೆ ನಡೆಸಿವೆ ಎಂದರು.

ಜಿಲ್ಲೆಯಲ್ಲಿ 71 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ತಲಾ ಒಂದು ಸಾವಿರ ಡೋಸ್‍ನಂತೆ ಲಸಿಕೆ ಹಾಕಲು ಈಗಾಗಲೇ ಎಲ್ಲ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲ ತಾಲ್ಲೂಕುಗಳಲ್ಲಿ 350 ರಿಂದ 400 ಸೆಷನ್‍ಗಳನ್ನು ಏರ್ಪಡಿಸಿ 70 ಸಾವಿರ ಡೋಸ್ ಲಸಿಕೆ ನೀಡುವ ಗುರಿಯನ್ನು ಸಾಧಿಸುವಂತೆ ಸೂಚಿಸಲಾಗಿದೆ. ಈ ಕುರಿತಂತೆ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು, ಆಶಾ, ಅಂಗನವಾಡಿ, ನರ್ಸಿಂಗ್, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲರ ಸಹಕಾರ ಪಡೆಯಲಾಗುವುದು. ಎಲ್ಲರೂ ಭಾಗವಹಿಸಿ ಲಸಿಕಾ ಮೆಗಾ ಮೇಳವನ್ನು ಯಶಸ್ವಿಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ಸೆ.14ರವರೆಗೆ ಜಿಲ್ಲೆಯಲ್ಲಿ 8,54,830 ಕೋವಿಶೀಲ್ಡ್ ಡೋಸ್ ಹಾಗೂ 1.5 ಲಕ್ಷ ಕೋವ್ಯಾಕ್ಸಿನ್‌ ಡೋಸ್ ಸ್ವೀಕರಿಸಲಾಗಿದ್ದು, ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 12,19,886 ಮಂದಿಗೆ ಲಸಿಕೆ ನೀಡಬೇಕಾಗಿದೆ. ಈ ಪೈಕಿ 8,43,739 ಮೊದಲ ಡೋಸ್, 1,74,850 ಜನ ಎರಡನೇ ಡೋಸ್ ಒಳಗೊಂಡಂತೆ 10,18,586 ಜನ ಕೋವಿಡ್ ಲಸಿಕೆ ಪಡೆದಿದ್ದಾರೆ. ಈವರೆಗೆ ಒಂದೇ ದಿನದಲ್ಲಿ 44,500 ಜನರಿಗೆ ಲಸಿಕೆ ನೀಡಿ ದಾಖಲೆ ಮಾಡಲಾಗಿದೆ.

ಎರಡನೇ ಡೋಸ್ ಪಡೆಯದೇ ಉಳಿದಿರುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಲಸಿಕಾ ಮಹಾಮೇಳದಲ್ಲಿ ಈವರೆಗೆ ಆದ್ಯತೆ ನೀಡಲಾಗುವುದು. ಎರಡನೇ ಡೋಸ್ ಪಡೆಯದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು