ಮಂಗಳವಾರ, ಸೆಪ್ಟೆಂಬರ್ 21, 2021
28 °C
ಜನ ಜೀವನ ಅಸ್ತವ್ಯಸ್ತ

ಮಳೆ ನಿಂತರೂ ತಪ್ಪದ ನೆರೆ: ಜಾನುವಾರುಗಳಿಗೆ ಮೇವಿನ ಕೊರತೆ

ಗಣೇಶಗೌಡ ಎಂ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಸವಣೂರ: ತಾಲ್ಲೂಕಿನಲ್ಲಿ ಮಳೆ ಕಡಿಮೆಯಾದರೂ, ನೆರೆ ಹಾವಳಿ ಕಡಿಮೆಯಾಗದೇ ಇರುವುದರಿಂದ ತಾಲ್ಲೂಕಿನ ನದಿ ದಂಡೆಯ ಗ್ರಾಮಗಳ ಜನ ಸಂಕಷ್ಟ ಎದುರಿಸುವಂತಾಗಿದೆ. 

ತಾಲ್ಲೂಕಿನಲ್ಲಿ ವರದಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದಂತೆ ಡಂಬರಮತ್ತೂರ, ಹಿರೇಮುಗದೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನದಿನೀರಲಗಿ ಗ್ರಾಮದ ಹಲವು ಮನೆಗಳು ಜಲಾವೃತವಾಗಿವೆ. ಕುಣಿಮೆಳ್ಳಿಹಳ್ಳಿ, ತೆವರಮೆಳ್ಳಿಹಳ್ಳಿ, ಅರಳಿಹಳ್ಳಿ, ಕಳಸೂರು, ಕಲಕೋಟಿ ಗ್ರಾಮಗಳು ಸೇರಿದಂತೆ ನದಿ ದಡದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ಸಾವಿರಾರು ಎಕರೆ ಬೆಳೆ ಜಲಾವೃತವಾಗಿದೆ.

ಹಿರೇಮರಳಿಹಳ್ಳಿ-ಡಂಬರಮತ್ತೂರ, ಕಳಸೂರು, ಕರ್ಜಗಿ, ದೇವಗೇರಿ ಮಾರ್ಗವಾಗಿ ಹಾವೇರಿ ಸಂಪರ್ಕಿಸುವ ರಸ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡ ಕಾರಣ ಜನ ಪರದಾಡುವಂತಾಗಿತ್ತು. ಮೂರು ದಿನಗಳಿಂದ ನೆರಹಾವಳಿ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ರಸ್ತೆಗಳಲ್ಲಿನ ನೀರು ಖಾಲಿಯಾಗಿ ಸಂಚಾರ ಆರಂಭಗೊಂಡಿದೆ. 

ಹಿರೇಮುಗದೂರ ಗ್ರಾ.ಪಂ ವ್ಯಾಪ್ತಿಯಲ್ಲಿ ಡಂಬರಮತ್ತೂರ ಗ್ರಾಮದಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು, ನಾಲ್ಕು ಕುಟುಂಬಗಳ 14 ಜನರು ವಾಸವಾಗಿದ್ದಾರೆ. ಈ ಕುಟುಂಬಗಳು ಮೂಲತಃ ಬೆಳಗಾವಿ ಜಿಲ್ಲೆಯ ಕುರಿಗಾಹಿಗಳಾಗಿದ್ದು, ಇವರು 10 ವರ್ಷಗಳ ಹಿಂದೆ ಜಮೀನು ಖರೀದಿಸಿ, ಅದೇ ಸ್ಥಳದಲ್ಲಿ ನೆಲೆಸಿದ್ದರು. ನೆರೆ ಹಾವಳಿ ತೀವ್ರವಾಗುತ್ತಿದ್ದಂತೆ ಕುಟುಂಬದ ಸದಸ್ಯರನ್ನು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಜೀವನೋಪಾಯಕ್ಕೆ ಅನುಕೂಲವನ್ನು ಕಲ್ಪಿಸಿದೆ.

ಮೇವಿನ ಬಣವೆ ನೀರಿನಲ್ಲಿ ತೇಲಿಹೋಗಿ ಜಾನುವಾರುಗಳನ್ನು ಸಂಕಷ್ಟಕ್ಕೆ ಸಿಲುಕಿಸಿರುವುದು ಒಂದೆಡೆಯಾದರೆ, ಡಂಬರಮತ್ತೂರ ಗ್ರಾ.ಪಂ ವ್ಯಾಪ್ತಿಯಲ್ಲಿ 70, ಹಿರೇಮುಗದೂರ ಗ್ರಾ.ಪಂ ವ್ಯಾಪ್ತಿಯಲ್ಲಿ 50 ಮನೆಗಳು ಬಿದ್ದು, ನೂರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡು ಹತ್ತಿ, ಶೇಂಗಾ, ಗೋವಿನಜೋಳ, ಹೆಸರು, ಅಲಸಂದಿ, ಕಬ್ಬು ಸೇರಿದಂತೆ ಹಲವಾರು ಬೆಳೆಗಳು ಹಾನಿಯಾಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ನೆರೆ ಹಾವಳಿಯಿಂದ ನದಿನೀರಲಗಿ, ಅರಳಿಹಳ್ಳಿ, ಚಿಕ್ಕಮರಳಿಹಳ್ಳಿ ಗ್ರಾಮಗಳು ನಡುಗಡ್ಡೆಯಂತಾಗಿತ್ತು. ಮಳೆ ಹೆಚ್ಚಾದರೆ ಕಾಳಜಿ ಕೇಂದ್ರವನ್ನು ತೆರೆಯಲು ಸಕಲ ವ್ಯವಸ್ಥೆಯನ್ನು ಗ್ರಾಮ ಪಂಚಾಯ್ತಿಯಿಂದ ಮಾಡಿಕೊಳ್ಳಲಾಗಿತ್ತು. ನೆರೆ ಪ್ರಮಾಣ ಕಡಿಮೆಯಾಗಿರುವುದರಿಂದ ಕಾಳಜಿ ಕೇಂದ್ರವನ್ನು ತೆರೆದಿಲ್ಲ ಎಂದು ಪಿಡಿಒ ಶಿವಾನಂದ ಹಡಪದ ಮಾಹಿತಿ ನೀಡಿದ್ದಾರೆ.

ಕಾಳಜಿ ಕೇಂದ್ರಕ್ಕೆ ನ್ಯಾಯಾಧೀಶರ ಭೇಟಿ:

ಡಂಬರಮತ್ತೂರ ಗ್ರಾ.ಪಂ.ನಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ ಸವಣೂರ ಜೆ.ಎಂ.ಎಫ್‌.ಸಿ ನ್ಯಾಯಾಲಯದ ನ್ಯಾಯಾಧೀಶ ಮಾರುತಿ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಗ್ರಾ.ಪಂ ಅಧಿಕಾರಿಗಳಿಗೆ ಹಾಗೂ ಆಡಳಿತ ಮಂಡಳಿಗೆ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು