ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಕೊರತೆ; ರಕ್ತ ಸಂಗ್ರಹಣೆಗೆ ತೊಡಕು

ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ‘ಟೆಕ್ನಿಕಲ್ ಸೂಪರ್‌ವೈಸರ್‌’ ಹುದ್ದೆ ಖಾಲಿ: ನೇಮಕಕ್ಕೆ ಅಧಿಕಾರಿಗಳ ಮೀನಮೇಷ
Last Updated 13 ಜೂನ್ 2022, 12:47 IST
ಅಕ್ಷರ ಗಾತ್ರ

ಹಾವೇರಿ:ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಗ್ರಹವಾದ ರಕ್ತವನ್ನು ಸಾಗಣೆ ಮಾಡಲು ಅಗತ್ಯವಾದ ‘ರಕ್ತ ಸಂಗ್ರಹಣೆ ಮತ್ತು ವಿತರಣೆ ವಾಹನ’ (ಬಿ.ಸಿ.ಟಿ.ವಿ) ಇಲ್ಲದ ಕಾರಣ, ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ

ಈ ವಾಹನ ಜಿಲ್ಲೆಗೆ ಮಂಜೂರಾದರೆ, ವಾಹನದೊಂದಿಗೆ ವೈದ್ಯ, ಸ್ಟಾಫ್‌ ನರ್ಸ್‌, ತಾಂತ್ರಿಕ ಅಧಿಕಾರಿ, ಅಟೆಂಡರ್‌ ಮತ್ತು ಚಾಲಕರ ತಂಡದ ಸೌಲಭ್ಯವೂ ದೊರೆತು, ರಕ್ತದಾನ ಶಿಬಿರ ನಡೆಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಜಿಲ್ಲಾ ರಕ್ತನಿಧಿ ಕೇಂದ್ರದ ಸಿಬ್ಬಂದಿ.

ಹಾವೇರಿ ಜಿಲ್ಲಾಸ್ಪತ್ರೆಯ ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ‘ಟೆಕ್ನಿಕಲ್ ಸೂಪರ್‌ವೈಸರ್‌’ ಹುದ್ದೆ ಎರಡೂವರೆ ವರ್ಷದಿಂದ ಖಾಲಿ ಇದೆ. ರಕ್ತನಿಧಿ ಕೇಂದ್ರವನ್ನು ನಡೆಸಲು ಈ ಹುದ್ದೆ ಅಗತ್ಯವಾಗಿದ್ದರೂ, ನೇಮಕಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.

ರಾಜ್ಯಮಟ್ಟದ ಪ್ರಶಸ್ತಿ:

ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ,ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರವು ಅತಿ ಹೆಚ್ಚು ಸ್ವಯಂಪ್ರೇರಿತ ರಕ್ತ ಸಂಗ್ರಹಣೆ ಮಾಡಿದ್ದಕ್ಕಾಗಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ‘ರಾಜ್ಯ ಮಟ್ಟದ ಪ್ರಶಸ್ತಿ’ ಲಭಿಸಿದೆ.ಹಾವೇರಿಯ ರಕ್ತನಿಧಿ ಕೇಂದ್ರವು 2006ರಿಂದ ಸೇವೆ ಸಲ್ಲಿಸುತ್ತಿದ್ದು, ವೋಲ್‌ ಬ್ಲಡ್‌ ಬ್ಯಾಂಕ್‌ನಿಂದ ‘ರಕ್ತ ವಿದಳನಾ ಘಟಕ’ವಾಗಿ ಉನ್ನತೀಕರಣಗೊಂಡಿದೆ. ಅಂದರೆ ರಕ್ತದ ಅಂಗಾಂಶಗಳಾದ ಪ್ಲಾಸ್ಮಾ, ಪ್ಯಾಕ್ಡ್‌ ರೆಡ್‌ ಸೆಲ್ಸ್‌, ಪ್ಲೆಟ್‌ಲೆಟ್ಸ್‌ಗಳಾಗಿ ಬೇರ್ಪಡಿಸಿ ನಿಖರವಾದ ಕಾಯಿಲೆಗಳ ರೋಗಿಗಳಿಗೆ ನಿಗದಿತವಾದ ರಕ್ತದ ಅಂಗಾಂಶ ನೀಡುತ್ತಿದೆ.

ರಕ್ತ ಸೈನಿಕರ ತವರೂರು

ಅಕ್ಕಿಆಲೂರ: ರಾಜ್ಯದ ವಿವಿಧ ರಕ್ತನಿಧಿಗಳೊಂದಿಗೆ ಸೇರಿ ಹಲವು ಜನರ ಅಮೂಲ್ಯ ಜೀವ ಉಳಿಸುವ ಕಾಯಕದಲ್ಲಿ ಅಕ್ಕಿಆಲೂರಿನ ಯುವಕರು ತೊಡಗಿಸಿಕೊಳ್ಳುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಹೀಗಾಗಿಅಕ್ಕಿಆಲೂರ ‘ರಕ್ತ ಸೈನಿಕರ ತವರೂರು’ ಎಂಬ ಮನ್ನಣೆಗೆ ಪಾತ್ರವಾಗಿದೆ.

ವೃತ್ತಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ ಆಗಿರುವ ಇಲ್ಲಿನ ಕರಬಸಪ್ಪ ಗೊಂದಿ ಸಮಾನ ಮನಸ್ಕರ ಜೊತೆ ಸೇರಿ ಸ್ನೇಹಮೈತ್ರಿ ಬ್ಲಡ್ ಆರ್ಮಿ ಹುಟ್ಟು ಹಾಕಿದ್ದು, 2015ರಿಂದ ಇಲ್ಲಿಯವರೆಗೂ ನೂರಾರು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸುಮಾರು 2000 ಯುನಿಟ್‍ಗಳಷ್ಟು ರಕ್ತ ಸಂಗ್ರಹಿಸಿ, ಅಗತ್ಯತೆ ಇದ್ದವರಿಗೆ ನೆರವಾಗಿರುವುದು ವಿಶೇಷ.

‘ರಕ್ತ ಶೇಖರಣೆ ಹೆಚ್ಚಲಿ’

ಶಿಗ್ಗಾವಿ: ಜಿಲ್ಲಾ ಆಸ್ಪತ್ರೆಯಿಂದ ಬೇಡಿಕೆಗೆ ತಕ್ಕಷ್ಟು ರಕ್ತ ಪೂರೈಕೆ ಮಾಡಲಾಗುತ್ತಿದ್ದು, ಅದರಿಂದ ಇಲ್ಲಿನ ರೋಗಿಗಳಿಗೆ ರಕ್ತ ವಿತರಣೆ ಮಾಡಲು ಸರಳವಾಗಿದೆ.ಗರ್ಭಿಣಿಯರಿಗೆ, ಬಿಪಿಎಲ್ ಪಡಿತರ ಕಾರ್ಡ್ ಹೊಂದಿದವರಿಗೆ ಮತ್ತು ಥಲಸೇಮಿಯಾ ರೋಗಿಗಳಿಗೆ ಉಚಿತವಾಗಿ ರಕ್ತ ನೀಡಲಾಗುತ್ತಿದೆ ಎಂದು ತಾಲ್ಲೂಕು ವೈದಾಧಿಕಾರಿ ಡಾ.ಹನುಮಂತಪ್ಪ ಹೇಳಿದರು.

‘ರೋಗಿಗೆ ಹೊಂದಾಣಿಕೆಯಾಗುವ ರಕ್ತ ಸಿಗದಿದ್ದಾಗ, ಹುಬ್ಬಳ್ಳಿ ಮತ್ತು ಹಾವೇರಿಗೆ ಹೋಗಿ ರಕ್ತ ತಂದು ಹಾಕಿಸಲಾಗಿದೆ. ಶಿಗ್ಗಾವಿ ಆಸ್ಪತ್ರೆಯಲ್ಲಿ ಇನ್ನಷ್ಟು ರಕ್ತ ಸಂಗ್ರಹಣೆ ಹೆಚ್ಚಾಗಬೇಕು’ ಎಂದು ಶಿಗ್ಗಾವಿ ನಿವಾಸಿ ಶಂಕರಪ್ಪ ಗುಡಿದಣ್ಣವರ ಹೇಳುತ್ತಾರೆ.

ಸಾವಿರ ಯೂನಿಟ್‌ ರಕ್ತ ಸಂಗ್ರಹ

ಬ್ಯಾಡಗಿ: ಇಲ್ಲಿಯ ಎಸ್‌ಜೆಜೆಎಂ ಕಲೆ, ಕ್ರೀಡೆ ಸಾಂಸ್ಕೃತಿಕ ಸೇವಾ ಸಂಸ್ಥೆ ಮತ್ತು ಭ್ರಷ್ಟಾಚಾರ ವಿರೋಧಿ ಜನ ಆಂದೋಲನ ನ್ಯಾಸ ಎರಡು ವರ್ಷಗಳಿಂದ ಜಿಲ್ಲಾ ರಕ್ತನಿಧಿ ಸಹಯೋಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಒಂದು ಸಾವಿರ ಯೂನಿಟ್‌ ರಕ್ತ ಸಂಗ್ರಹಿಸಿದೆ.

ಕೋವಿಡ್‌ ಕಾರಣದಿಂದ ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಉಂಟಾದಾಗ, ನಮ್ಮ ಸಂಸ್ಥೆ ಯುವಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿ ರಕ್ತದಾನಕ್ಕೆ ಪ್ರೇರೇಪಿಸಿ ರಕ್ತಸಂಗ್ರಹ ಮಾಡಲಾಯಿತು ಎಂದು ಸಂಸ್ಥೆಗಳ ಮುಖ್ಯಸ್ಥ ಮಾಜಿ ಸೈನಿಕ ಎಂ.ಡಿ.ಚಿಕ್ಕಣ್ಣನವರ ಹೇಳಿದರು.

‘ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ಮಾತ್ರ ರಕ್ತ ಸಂಗ್ರಹ ಕಾರ್ಯ ನಡೆಯುತ್ತದೆ. ತಾಲ್ಲೂಕು ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ರಕ್ತದ ಅವಶ್ಯವಿದ್ದರೆ ಮಾತ್ರ ಜಿಲ್ಲಾ ರಕ್ತನಿಧಿ ಕೇಂದ್ರದಿಂದ ತರಲಾಗುತ್ತದೆ’ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಟ್ಟರಾಜು ಹೇಳಿದರು.

ಶಿಬಿರಗಳ ಇಳಿಕೆ: ರಕ್ತಕ್ಕೆ ಕೊರತೆ

ಸವಣೂರು: ಗರ್ಭಿಣಿಯರು, ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಸೇರಿದಂತೆ ವಿವಿಧ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯ ಕಂಡುಬರುತ್ತದೆ. ಮಾಹಿತಿ ಕೊರತೆಯಿಂದ ರಕ್ತದಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ಸವಣೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರವಿದ್ದು, ವರ್ಷಕ್ಕೆ 1 ಸಾವಿರ ಯುನಿಟ್‌ ರಕ್ತಕ್ಕೆ ಬೇಡಿಕೆಯಿದೆ. ಜಾಗೃತಿ ಕೊರತೆಯಿಂದ ರಕ್ತದಾನ ಶಿಬಿರಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿವೆ. ರೆಡ್‌ಕ್ರಾಸ್‌ ಸಂಸ್ಥೆಯ ಮೂಲಕಅಲ್ಪ ಪ್ರಮಾಣದಲ್ಲಾದರೂ ನೆರವು ನೀಡಿದರೆ ರಕ್ತದಾನ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲವಾಗುತ್ತದೆ. ಜತೆಗೆ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 3ರಿಂದ 4 ಉಚಿತ ಶಿಬಿರಗಳನ್ನು ಆಯೋಜಿಸಿದರೆ ಅನುಕೂಲವಾಗುತ್ತದೆ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ರಕ್ತ ಶೇಖರಣಾ ಘಟಕದ ಲ್ಯಾಬ್ ಟೆಕ್ನಿಷಿಯನ್ ಮಾಲತೇಶ ಹೊಳೆಮ್ಮನವರ ಮಾಹಿತಿ ನೀಡಿದರು.

***

ಹಾವೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ರಕ್ತ ಸಂಗ್ರಹದ ವಿವರ (ಯುನಿಟ್‌ಗಳಲ್ಲಿ)

ವರ್ಷ;ಸಂಗ್ರಹ;ವಿತರಣೆ

2017;2939;2886

2018;2691;2574

2019;3489;3321

2020;3402;3297

2021;4644;4378

2022*;2720;2487

*ಮೇ ಅಂತ್ಯದವರೆಗೆ

***

ವರ್ಷಕ್ಕೆ 11 ಸಾವಿರ ಯುನಿಟ್‌ ಕೊರತೆ

ಜಿಲ್ಲೆಯಲ್ಲಿ 17 ಲಕ್ಷ ಜನಸಂಖ್ಯೆಯಿದ್ದು, ಕೆ.ಎಸ್‌.ಎ.ಪಿ.ಎಸ್‌. ಮಾರ್ಗಸೂಚಿ ಪ್ರಕಾರ ಜನಸಂಖ್ಯೆಯ ಶೇ 1ರಷ್ಟು ಅಂದರೆ, 17 ಸಾವಿರ ಯುನಿಟ್‌ ರಕ್ತ ಸಂಗ್ರಹ ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿರಬೇಕು. ಆದರೆ, ಎರಡು ಖಾಸಗಿ ರಕ್ತನಿಧಿ ಕೇಂದ್ರಗಳೂ ಸೇರಿದಂತೆ ಜಿಲ್ಲೆಯಲ್ಲಿ ವರ್ಷಕ್ಕೆ ಸಂಗ್ರಹವಾಗುವುದು ಬರೀ 6 ಸಾವಿರ ಯುನಿಟ್‌ ರಕ್ತ ಮಾತ್ರ. ಹೀಗಾಗಿ 11 ಸಾವಿರ ಯುನಿಟ್‌ ರಕ್ತದ ಕೊರತೆ ಪ್ರತಿ ವರ್ಷ ಕಾಡುತ್ತಿದೆ. ರಕ್ತದಾನದ ಬಗ್ಗೆ ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎನ್ನುತ್ತಾರೆ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ. (ರಕ್ತದಾನ ಮಾಡುವವರು ಮೊ: 99167 61735 ಸಂಪರ್ಕಿಸಿ.)

ಶೇ 50ರಷ್ಟೂ ರಕ್ತ ಸಂಗ್ರಹವಾಗುತ್ತಿಲ್ಲ!

ರಾಣೆಬೆನ್ನೂರು: ತಾಲ್ಲೂಕು ಕೇಂದ್ರಗಳಲ್ಲಿ ಶಿಬಿರ ನಡೆಸಿದಾಗ 100 ಯುನಿಟ್‌ ಸಂಗ್ರಹವಾದರೆ ತಾಲ್ಲೂಕು ಕೇಂದ್ರದ ಆಸ್ಪತೆಗೆ ಶೇ 40ರಷ್ಟು ಒದಗಿಸುತ್ತಾರೆ. ಶೇ 60ರಷ್ಟನ್ನು ಜಿಲ್ಲಾ ಕೇಂದ್ರಕ್ಕೆ ಒಯ್ಯುತ್ತಾರೆ. 100 ಯುನಿಟ್‌ ತಾಲ್ಲೂಕು ಕೇಂದ್ರದಲ್ಲಿ ಬಳಕೆಯಾಗಲ್ಲ. 45 ದಿನದೊಳಗೆ ಬಳಕೆ ಮಾಡಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪರಮೇಶ್ವರಪ್ಪ ತಿಳಿಸಿದರು.

ತಾಲ್ಲೂಕಿಗೆ ವರ್ಷಕ್ಕೆ 3500 ರಿಂದ 4000 ಯುನಿಟ್‌ ರಕ್ತ ಒಂದು ವರ್ಷಕ್ಕೆ ಬೇಕಾಗುತ್ತದೆ. ಶೇ 50ರಷ್ಟು ಯುನಿಟ್‌ ಕೂಡ ರಕ್ತ ಸಂಗ್ರಹವಾಗುತ್ತಿಲ್ಲ.ಇಂದಿರಾ ಲ್ಯಾಬ್‌ ಟೆಕ್ನಿಶಿಯನ್‌ ಸಿದ್ಧೇಶ್ವರ ನಗರದ ಮಂಜುನಾಥ ವಡವಿ ಅವರು 36 ಬಾರಿ, ನವೀನ ಹನಗೋಡಿಮಠ ಹಾಗೂ ಕಿಶನ್‌ ಚವ್ಹಾಣ ಅವರು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಿದ್ದಾರೆ. ಓಂ ಶಿಕ್ಷಣ ಸಂಸ್ಥೆಯ ರುಕ್ಮಿಣಿ ಸಾವುಕಾರ 62 ವರ್ಷದ ಮಹಿಳೆ ರಕ್ತದಾನ ಮಾಡಿದ್ದಾರೆ.

‘ನಾನು 28 ಬಾರಿ ರಕ್ತದಾನ ಮಾಡಿದ್ದೇನೆ. ರಕ್ತದಾನ ಶಿಬಿರಗಳಿಗೆ ಸರ್ಕಾರ ಮತ್ತಷ್ಟು ಪ್ರೋತ್ಸಾಹ ನೀಡಬೇಕು. ರಕ್ತದಾನ ಆಯೋಜನೆ ಮಾಡುವವವರಿಗೆ ಸರ್ಕಾರ ನೆರವು ನೀಡಬೇಕು’ ಎಂದು ಅಮೃತಂ ಆಸ್ಪತ್ರೆಯ ಡಾ.ನಾರಾಯಣ ಪವಾರ ತಿಳಿಸಿದರು.

ರಟ್ಟೀಹಳ್ಳಿಯಲ್ಲಿ ರಕ್ತನಿಧಿ ಕೇಂದ್ರವಿಲ್ಲ!

ರಟ್ಟೀಹಳ್ಳಿ: ತಾಲ್ಲೂಕು ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತನಿಧಿ ಕೇಂದ್ರ ಇರುವುದಿಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆಯಿದ್ದಲ್ಲಿ ಅಂತಹ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಶಿಪಾರಸು ಮಾಡಲಾಗುತ್ತಿದೆ.

ರಟ್ಟೀಹಳ್ಳಿ ತಾಲ್ಲೂಕು ಕೇಂದ್ರವಾಗಿದ್ದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನುರಿತ ಸಿಬ್ಬಂದಿ ನಿಯೋಜಿಸಿ ರಕ್ತನಿಧಿ ಕೇಂದ್ರ ಸ್ಥಾಪಿಸಿದಲ್ಲಿ ಅಪಘಾತಕ್ಕೆ ಒಳಗಾದ ರೋಗಿಗಳಿಗೆ ಮತ್ತು ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯವಿದ್ದಲ್ಲಿ ಬಳಸಿಕೊಳ್ಳಬಹುದಾಗಿದೆ. ಇಲ್ಲಿನ ಅನೇಕ ಸಂಘ- ಸಂಸ್ಥೆಯವರು ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಸುತ್ತಾ ಬಂದಿರುತ್ತಾರೆ. ಹೀಗಾಗಿ ರಕ್ತದ ಕೊರತೆ ಆಗಲಾರದು ಎನ್ನುತ್ತಾರೆ ಇಲ್ಲಿನ ಖಾಸಗಿ ವೈದ್ಯ ಡಾ. ಗುರುರಾಜ ಗೂಳಪ್ಪನವರ.

**

ರಕ್ತದಾನದ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಅಮೂಲ್ಯ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿರುವ ಸಂತೃಪ್ತಿ ನಮಗಿದೆ
– ಕರಬಸಪ್ಪ ಗೊಂದಿ, ಸ್ನೇಹಮೈತ್ರಿ ಬ್ಲಡ್ ಆರ್ಮಿ, ಅಕ್ಕಿಆಲೂರ

**

ರಾಣೆಬೆನ್ನೂರು ನಗರದ ಕಾಕಿ ಜನಸೇವಾ ಸಂಸ್ಥೆ ಹಾಗೂ ಜೇಸಿ ಸಂಸ್ಥೆಯಿಂದ ಪ್ರತಿ ವರ್ಷ ಎರಡು ಬಾರಿ ರಕ್ತದಾನ ಶಿಬಿರ ಏರ್ಪಡಿಸುತ್ತೇವೆ
– ವೆಂಕಟೇಶ ಕಾಕಿ, ಜೇಸಿ ಸಂಸ್ಥೆಯ ಅಧ್ಯಕ್ಷ, ರಾಣೆಬೆನ್ನೂರು

****

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ, ಸುರೇಖಾ ಪೂಜಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT