ಹಾವೇರಿ: ನಗರದಲ್ಲಿ ಶನಿವಾರ ನಡೆದ ಡಾ.ಮಹದೇವ ಬಣಕಾರ ಸಾಂಸ್ಕೃತಿಕ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಜಿಲ್ಲಾಧಿಕಾರಿಗೆ ಸೂಚಿಸಿದರು.
ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿ ಬೆಳಿಗ್ಗೆ 10ಕ್ಕೆ ಸಚಿವ ಶಿವಾನಂದ ಪಾಟೀಲ ಅವರು ಭವನದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮ ಮುಗಿಸಿಕೊಂಡು ಪ್ರಗತಿ ಪರಿಶೀಲನಾ ಸಭೆಗೆ ಕಾರಿನಲ್ಲಿ ಹೊರಟರು. ಆಗ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಎದುರಾದರು. ಪುನಃ ಅವರೊಂದಿಗೆ ತೆರಳಿ, ಎರಡನೇ ಬಾರಿ ಶಂಕುಸ್ಥಾಪನೆ ನೆರವೇರಿಸಿದರು.
‘ಬಸವರಾಜ ಹೊರಟ್ಟಿ ಕಾರ್ಯಕ್ರಮಕ್ಕೆ ಬರುವುದು ಅಧಿಕಾರಿಗಳಿಗೆ ತಿಳಿದಿರಲಿಲ್ಲವೇ? ಅವರ ಪ್ರವಾಸದ ವಿವರ ಬಿಡುಗಡೆಯಾಗಿದ್ದರೂ, ಏಕೆ ಅವರನ್ನು ಅಧಿಕಾರಿಗಳು ಬರಮಾಡಿಕೊಳ್ಳಲಿಲ್ಲ’ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
‘ಆಹ್ವಾನ ಪತ್ರಿಕೆ ಬಗ್ಗೆ ನಮಗೆ ಮಾಹಿತಿಯಿಲ್ಲ. ಹೊರಟ್ಟಿ ಅವರು ಬರುವ ಬಗ್ಗೆಯೂ ನಮಗೆ ತಿಳಿದಿರಲಿಲ್ಲ’ ಎಂದು ಅಧಿಕಾರಿಗಳು ಉತ್ತರಿಸಿದರು. ಇದರಿಂದ ಕುಪಿತಗೊಂಡ ಸಚಿವರು, ‘ಶಿಷ್ಟಾಚಾರ ಉಲ್ಲಂಘನೆಯಾದ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.