ಸೋಮವಾರ, ಮಾರ್ಚ್ 27, 2023
31 °C
ರಾಷ್ಟ್ರೀಯ ಮತದಾರರ ದಿನಾಚರಣೆ: ನ್ಯಾಯಾಧೀಶರಾದ ಕಿರಣ ಕಿಣಿ ಅಭಿಮತ

ಪ್ರಜಾಪ‍್ರಭುತ್ವದ ಸುಭದ್ರತೆಗೆ ಮತದಾನ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ದಾನಗಳಲ್ಲಿ ಮತದಾನ ಶ್ರೇಷ್ಠ ದಾನವಾಗಿದೆ, ಸಾಂವಿಧಾನಿಕ ಹಕ್ಕು ಮತ್ತು ಕರ್ತವ್ಯವಾಗಿದೆ. ಪ್ರಜಾಪ್ರಭುತ್ವದ ಸುಭದ್ರತೆಗೆ 18 ವರ್ಷ ತುಂಬಿದ ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನ ಪ್ರಕ್ರಿಯಲ್ಲಿ ಭಾಗವಹಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಕಿರಣ್ ಕಿಣಿ ಹೇಳಿದರು.

ನಗರದ ಗುರುಭವನದಲ್ಲಿ ಬುಧವಾರ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು. ಸಂವಿಧಾನದತ್ತವಾಗಿ ದೊರೆತಿರುವ ಮತದಾನದ ಹಕ್ಕನ್ನು ಅರಿತುಕೊಂಡು ಸ್ವಂತ ವಿವೇಚನೆಯಿಂದ ಮತದಾನ ಮಾಡಬೇಕು ಎಂದರು. 

1950ರಲ್ಲಿ ಚುನಾವಣಾ ಆಯೋಗ ಸ್ಥಾಪಿಸಲಾಯಿತು. 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇ 58ರಷ್ಟು ಮತದಾನವಾದ ಹಿನ್ನೆಲೆಯಲ್ಲಿ ಯುವ ಮತದಾರರ ನೋಂದಣಿ ಹಾಗೂ ಮತದಾನಕ್ಕೆ ಪ್ರೋತ್ಸಾಹಿಸಲು ಮತ್ತು ಜಾಗೃತಿ ಮೂಡಿಸಲು 2011ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಸರ್ಕಾರ ಆಯ್ಕೆ ಮಾಡುವ ಹಾಗೂ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿದೆ. ಶ್ರೇಷ್ಠ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶಗಳ ಮಾಹಿತಿ ನೀಡಿದರು.

ವಿಜೇತರಿಗೆ ಪ್ರಮಾಣಪತ್ರ:

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರಬಂಧ, ಭಿತ್ತಿಪತ್ರ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು. 

ಮತದಾರರ ನೋಂದಣಿ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದಲ್ಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಎಲ್ಲ ತಾಲ್ಲೂಕು ಬಿ.ಎಲ್.ಒ ಅವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಎಸ್.ಜಗದೀಶ್ವರ, ತಹಶೀಲ್ದಾರ್‌ ಗಿರೀಶ ಸ್ವಾದಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಮೃತಗೌಡ ಪಾಟೀಲ, ನಾಗರಾಜ ಇಚ್ಚಂಗಿ ಇದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ ಉಪ್ಪಾರ ವಂದಿಸಿದರು.

ನೋಂದಣಿಯಲ್ಲಿ ಉತ್ತಮ ಪ್ರಗತಿ

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ರಾಜ್ಯದಲ್ಲೇ 18 ರಿಂದ 19 ವರ್ಷದ ಯುವ ಮತದಾರರ ನೋಂದಣಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಅಧಿಕವಾಗಿದೆ. ಅದೇ ರೀತಿ ಮಹಿಳಾ ಮತದಾರರ ನೋಂದಣಿ ಸಹ ಅಧಿಕವಾಗಿದೆ. ಕಳೆದ ಜನವರಿ-2022ರ ತಿಂಗಳಲ್ಲಿ 1000 ಪುರುಷರಿಗೆ 947 ಮಹಿಳಾ ಮತದಾರರಿದ್ದರು. ಪ್ರಸ್ತುತ ಜನವರಿ-23ರ ತಿಂಗಳಲ್ಲಿ 1000 ಪುರುಷರಿಗೆ 961ರಷ್ಟು ಮಹಿಳಾ ಮತದಾರರ ನೋಂದಣಿ ಮಾಡಿಸಲಾಗಿದೆ. ಬಿ.ಎಲ್.ಒ.ಗಳು ಪ್ರತಿ ಮನೆ ಮನೆಗೆ ತೆರಳಿ ಮತದಾರರ ನೋಂದಣಿ ಮಾಡಿಸಿದ್ದರಿಂದ ಈ ಸಾಧನೆಯಾಗಿದೆ. ಈ ಶ್ರೇಯಸ್ಸು ಬಿಎಲ್‍ಒಗಳಿಗೆ ಸಲ್ಲುತ್ತದೆ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು