ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ | ನೀರಿಗಾಗಿ ಗ್ರಾಮಸ್ಥರ ಅಳಲು

ಬ್ಯಾಡಗಿ ತಾಲ್ಲೂಕಿನ ಕಲ್ಲೆದೇವರು, ಬಿಸಲಹಳ್ಳಿ, ಬೆಳಕೇರಿಯಲ್ಲಿ ಶುದ್ಧ ನೀರಿನ ಘಟಕ ಬಂದ್‌
Last Updated 17 ಏಪ್ರಿಲ್ 2020, 3:10 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನಲ್ಲಿ ಕಲ್ಲೆದೇವರು, ಅಳಲಗೇರಿ, ಬಿಸಲಹಳ್ಳಿ ಬೆಳಕೇರಿ, ಆಣೂರು ಭಾಗಗಳಲ್ಲಿನ ಜನರಿಗೆ ಕೊಳವೆಬಾವಿಗಳಿಂದಲೇ ನೀರು ಪೂರೈಕೆಯಾಗುತ್ತಿದೆ. ಆದರೆ ಕೊಳವೆಯಲ್ಲಿ ಹೆಚ್ಚಿನ ಪ್ಲೋರೈಡ್ ಅಂಶ ಕಂಡು ಬಂದಿದ್ದರಿಂದ ಅಲ್ಲಿಯ ಜನರು ಶುದ್ಧ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ.

ಅಳಲಗೇರಿ ಗ್ರಾಮದಲ್ಲಿ ಒಂದು ವರ್ಷದಿಂದ ಶುದ್ಧ ನೀರಿನ ಘಟಕ ಬಂದ್‌ ಆಗಿದ್ದು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗಕ್ಕೆ ಮನವಿ ಮಾಡಿಕೊಳ್ಳಲಾಗಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬೇಸತ್ತ ಜನತೆ ಪಕ್ಕದ ಮೋಟೆಬೆನ್ನೂರ, ಗುಂಡೇನಹಳ್ಳಿ, ಕದಮನಹಳ್ಳಿ ಗ್ರಾಮಗಳಿಗೆ ತೆರಳಿ ಶುದ್ಧ ಕುಡಿಯುವ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಳವೆಬಾವಿಯಲ್ಲಿ ಗಡಸು ನೀರು:‘ಗ್ರಾಮದ ಕೊಳವೆ ಭಾವಿಗಳಲ್ಲಿ ಗಡಸು ನೀರಿದೆ. ಹೀಗಾಗಿ ಅವುಗಳನ್ನು ಕುಡಿಯಲು ಬಳಸುತ್ತಿಲ್ಲ. ಇಲ್ಲಿಯ ಶುದ್ಧ ನೀರಿನ ಘಟಕದ ದುರಸ್ತಿ ಬಳಿಕ ಕೊಳವೆಬಾವಿಯ ಜೋಡಣೆ ಬದಲಾಗಿ ನದಿ ನೀರಿನ ಕೊಳವೆಯನ್ನು ಜೋಡಣೆ ಮಾಡುವುದು ಅಗತ್ಯವಾಗಿದೆ’ ಎಂದು ಅಲ್ಲಿಯ ನಿವಾಸಿ ಸೋಮಗೌಡ ತಂಗೋಡರ ಹೇಳಿದರು.

‘ಕಲ್ಲೆದೇವರು ಗ್ರಾಮದಲ್ಲಿ ಮೂರು ಶುದ್ಧ ನೀರಿನ ಘಟಕಗಳ ಪೈಕಿ ಒಂದು ಎರಡು ತಿಂಗಳಿಂದ ಹಾಳಾಗಿದೆ. ಬೇಸಿಗೆ ಬಿರು ಬಿಸಿಲು ಆರಂಭವಾಗಿದ್ದು, ಶುದ್ಧ ನೀರಿನ ಘಟಕ ಆರಂಭವಾದರೆ ನೀರಿನ ಬವಣೆ ತಪ್ಪಲಿದೆ’ ಎಂದು ಅಲ್ಲಿಯ ನಿವಾಸಿ ಕರಬಸಪ್ಪ ಹೇಳಿದರು.

ಪದೇ ಪದೇ ಹಾಳಾಗುವ ಘಟಕ: ತಾಲ್ಲೂಕಿನಲ್ಲಿ ಒಟ್ಟು 87 ಶುದ್ಧ ನೀರಿನ ಘಟಕಗಳಿದ್ದು ಐದಕ್ಕಿಂತ ಹೆಚ್ಚು ಘಟಕಗಳು ಆಗೊಮ್ಮೆ ಈಗೊಮ್ಮೆ ರಿಪೇರಿಗೆ ಬರುತ್ತಿವೆ. 6 ತಿಂಗಳಿಂದ ತಾಲ್ಲೂಕಿನಲ್ಲಿ 14ಕ್ಕೂ ಶುದ್ಧ ನೀರಿನ ಘಟಕಗಳು ಹಾಳಾಗಿದ್ದವು. ಇದರಿಂದ ಸಾಕಷ್ಟು ಜನರು ಆರೋಗ್ಯ ಸಮಸ್ಯೆಯನ್ನು ಎದುರಿಸುವಂತಾಗಿತ್ತು.

ಘಟಕಗಳ ದುರಸ್ತಿಗೆ ಜಿಲ್ಲಾ ಮಟ್ಟದಲ್ಲಿ ಗುತ್ತಿಗೆದಾರರನ್ನು ನೇಮಕ ಮಾಡಲಾಗಿದ್ದು, ಸ್ಥಗಿತಗೊಂಡಿರುವ ನೀರಿನ ಘಟಕಗಳ ದುರಸ್ತಿ ಮಾಡಲಾಗಿದೆ. ಕಳೆದ ವಾರ ಹೆಡಿಗ್ಗೊಂಡ, ಹಿರೇಹಳ್ಳಿ ಮತ್ತು ಚಿಕ್ಕಣಜಿಯ 3 ಘಟಕಗಳ ದುರಸ್ತಿ ಕೈಗೊಳ್ಳಲಾಗಿದೆ. ಅಳಲಗೇರಿ, ಶಂಕ್ರಿಪುರ, ಬಿಸಲಹಳ್ಳಿ, ಬೆಳಕೇರಿ, ಹಾಗೂ ಮೋಟೆಬೆನ್ನೂರ ಗ್ರಾಮಗಳ ನೀರಿನ ಘಟಕಗಳ ದುರಸ್ತಿಗೆ ಮುಂದಾಗಿದ್ದು, ಅವುಗಳಿಗೆ ಸ್ಪಂಜಿನಂತಹ ಮೆಂಬ್ರೇನ್ ಭಾಗ ಹಾಳಾಗಿದ್ದರಿಂದ ತಾಂತ್ರಿಕ ತೊಂದರೆಯಾಗಿದೆ.

ಉಪಕರಣ ಬದಲಿಸಲು ಸೂಚನೆ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಹೀಗಾಗಿ ಹೆಚ್ಚು ಹಾಳಾದ ನೀರಿನ ಘಟಕಗಳ ದುರಸ್ತಿಗೆ ಸ್ವಲ್ಪ ಹಿನ್ನಡೆಯಾಗಿದೆ. ಕೆಲವು ನೀರಿನ ಘಟಕಗಳಿಗೆ ಬೇಕಾದ ಉಪಕರಣ ಬದಲಾಯಿಸುವಂತೆ ಸೂಚಿಸಲಾಗಿದೆ. ಸ್ಥಗಿತಗೊಂಡಿರುವ ಘಟಕಗಳ ದುರಸ್ತಿಗೆ ದುಬಾರಿ ಖರ್ಚಾಗುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ದುರಸ್ತಿ ಕಾರ್ಯಕ್ಕೆ ಮುಂದಾಗುವುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಆರ್.ಎಂ.ಸೊಪ್ಪಿನಮಠ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT